ಅಗಸ್ತ್ಯದಲ್ಲಿ ಇಂಜಿನಿಯರಿಂಗ್ ಆಧಾರಿತ ಕಲಿಕೆ,  ಮಕ್ಕಳಿಗಾಗಿ ಚಳಿಗಾಲ ಶಿಬಿರ ಸಮಾರೋಪ

IMG_20241019_170136_6.jpg
Published on

ಹುಬ್ಬಳ್ಳಿ: ಅಗಸ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನ, ಏಕಸ್ ಪ್ರತಿಷ್ಠಾನ ಮತ್ತು ಶಾಲಾ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ನಗರದ ಹೊಸೂರ ಅನುಸೂಯ ಮೆಳ್ಳಿಗೇರಿ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರ ಹಾಗೂ ಧಾರವಾಡದ ಸಂಚಾರಿ ವಿಜ್ಞಾನ ಪ್ರಯೋಗಾಲಯದ ವತಿಯಿಂದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗಾಗಿ ಇತ್ತೀಚೆಗೆ ಉಚಿತ ಇಂಜಿನಿಯರಿಂಗ್ ಆಧಾರಿತ ಕಲಿಕೆ ಚಳಿಗಾಲ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಶನಿವಾರ ಏರ್ಪಡಿಸಿದ್ದ ಶಿಬಿರದ ಸಮಾರೋಪದಲ್ಲಿ ಅತಿಥಿಗಳಾಗಿದ್ದ ಅಗಸ್ತ್ಯ ಪ್ರತಿಷ್ಠಾನದ ಪ್ರಾದೇಶಿಕ ಮುಖ್ಯಸ್ಥ ಡಾ. ಬಬಿತಾ ಮಾತನಾಡಿ, ಪ್ರತಿಷ್ಠಾನವು ಈಗಾಗಲೇ ಅನೇಕ ವರ್ಷಗಳಿಂದ ಧಾರವಾಡ ಜಿಲ್ಲೆಯ ತಾಲೂಕುಗಳಲ್ಲಿ ಶಿಕ್ಷಕರು, ವಿದ್ಯಾರ್ಥಿಗಳಿಗೆ ಮತ್ತು ಸಮುದಾಯಕ್ಕೆ ಹಲವು ಶೈಣಿಕ ಮತ್ತು ವೈಜ್ಞಾನಿಕ ಕಾರ್ಯಕ್ರಮಗಳನ್ನು ನೀಡಿದೆ. ಕಳೆದ ಎರಡು ವರ್ಷಗಳಿಂದ ಇಂಜಿನಿಯರಿಂಗ್ ಆಧಾರಿತ ಕಲಿಕೆ ಎಂಬ ವಿನೂತನ ಮಾದರಿಗಳ ಮೂಲಕ ವಿದ್ಯಾರ್ಥಿಗಳು ಸ್ವತಃ ಮಾದರಿ ತಯಾರಿಸಲು ಅವಕಾಶ ಕಲ್ಪಿಸಿ ಕೊಡಲಾಗುತ್ತಿದೆ ಎಂದು ಹೇಳಿದರು.

ಪ್ರಾಸ್ತಾವಿಕ ಮಾತನಾಡಿದ ಅಗಸ್ಟ್ ಪ್ರತಿಷ್ಠಾನದ ವಲಯ ಮುಖ್ಯಸ್ಥ ಶಿವಾನಂದ ಚಲವಾದಿ, ಪ್ರತಿ ವರ್ಷದಂತೆ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ವಿಜ್ಞಾನ ಕೇಂದ್ರ ಮತ್ತು ಸಂಚಾರಿ ವಿಜ್ಞಾನ ಪ್ರಯೋಗಾಲಯದಿಂದ ಉಚಿತ ಚಳಿಗಾಲ ಶಿಬಿರ 18 ದಿನಗಳವರೆಗೆ ಆಯೋಜಿಸಲಾಗಿತ್ತು. ಬೆಳಗಲಿ, ಗೋಕುಲ, ತಾರಿಹಾಳ, ಅದರಗುಂಚಿ, ನೂಲ್ವಿ, ಹಿರೇಹೊನ್ನಳ್ಳಿ ಹಾಗೂ ದಾಸ್ತಿಕೊಪ್ಪ ಗ್ರಾಮಗಳ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಪ್ರಯೋಜನ ಪಡೆದುಕೊಂಡಿದ್ದಾರೆ ಎಂದರು.

ಮಾರ್ಗದರ್ಶಿ ಶಿಕ್ಷಕರಾದ ಫಕ್ಕಿರೇಶ ಮಡಿವಾಳರ, ಹರೀಶಕುಮಾರ, ಪ್ರಶಾಂತ ಅಮೃತಯ್ಯನವರ, ಗೌರಿ ಬಟ್ಟೂರ, ಅತಾ ಮೂಲಿಮನಿ, ಭೀಮಪ್ಪ ಮಾವಿನಬಾವಿ, ಬಸವರಾಜ ಉಳ್ಳಿಗೇರಿ, ಸಿದ್ದಾರೂಢ ಕೋಟೂರು, ವೆಂಕಟೇಶ ಜಂಗಲಿ. ದೇವೆಂದ್ರಪ್ಪ ಪತ್ತಾರ, ರವಿಕಿರಣ ತಡಹಾಳ ಮತ್ತು ರಾಜು ಮೆಣಸಗಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net