

ಮಂಗಳೂರು: ಪೊಲೀಸ್ ಸಬ್ಇನ್‌ಸ್ಪೆಕ್ಟರ್ ಎಂದು ನಂಬಿಸಿ ಯುವತಿಯೊಂದಿಗೆ ಸಖ್ಯ ಬೆಳೆಸಿ ಅತ್ಯಾಚಾರವೆಸಗಿ ಆಕೆಯ ನಗ್ನ ಫೋಟೋ ತೆಗೆದು ಅದನ್ನು ವೈರಲ್ ಮಾಡುವುದಾಗಿ ಹೆದರಿಸಿ ಹಣಕ್ಕೆ ಬೇಡಿಕೆ ಇರಿಸಿದ ಯುವಕನೊಬ್ಬನನ್ನು ಮಂಗಳೂರು ಮಹಿಳಾ ಠಾಣಾ ಪೊಲೀಸರು ಬಂಧಿಸಿದ್ದಾರೆ.
ರಾಯಚೂರು ಮೂಲದ ಯಮನೂರ (22) ಬಂಧಿತ ಆರೋಪಿ. ಈತ ಬೀದಿ ನಾಟಕ ಕಲಾವಿದನಾಗಿದ್ದು ನಾಟಕದ ಪೊಲೀಸ್ ಎಸ್‌ಐ ದಿರಿಸು ಬಳಸಿಕೊಂಡು ಯುವತಿಗೆ ತಾನು ಪೊಲೀಸ್ ಇಲಾಖೆಯಲ್ಲಿ ಇರುವುದಾಗಿ ನಂಬಿಸಿದ್ದ.
ಎಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿರುವ 19 ವರ್ಷದ ಯುವತಿಗೆ ಇನ್‌ಸ್ಟಾಗ್ರಾಂ ಮೂಲಕ ರಾಯಚೂರು ಮೂಲದ ಯುಮನೂರ ಎಂಬಾತನ ಪರಿಚಯವಾಗಿತ್ತು. ಆತನು ತಾನು ವಾಮಂಜೂರು ಪೊಲೀಸ್ ಸ್ಟೇಷನ್‌ನಲ್ಲಿ ಪೊಲೀಸ್ ಸಬ್ಇನ್‌ಸ್ಪೆಕ್ಟರ್ ಆಗಿ ಕೆಲಸ ಮಾಡುತ್ತಿರುವುದಾಗಿ ಯುವತಿಗೆ ನಂಬಿಸಿ ಮನೆಯವರಿಗೆ ಕೆಲಸ ಮಾಡಿಕೊಡುವುದಾಗಿ ಹೇಳಿ ದಾಖಲಾತಿಗಳನ್ನು ಪಡೆದುಕೊಂಡಿದ್ದ.
ನಂತರ ಆಕೆಯನ್ನು ನಗರದ ದೇವಾಲಯವೊಂದರಲ್ಲಿ ಭೇಟಿಯಾಗಿದ್ದ. ನಂತರ ಆದೇ ವಾರದಲ್ಲಿ ತಣ್ಣೀರುಬಾವಿ ಬೀಚ್‌ಗೆ ಕರೆದುಕೊಂಡು ಹೋಗಿ ಆಕೆಯೊಂದಿಗೆ ಪೋಟೋ ತೆಗೆಯಿಸಿಕೊಂಡಿದ್ದ. ನಂತರ ಆ ಪೋಟೋವನ್ನು ವೈರಲ್ ಮಾಡುವುದಾಗಿ ಹೆದರಿಸಿ ಯುವತಿಯನ್ನು ಬೆಂಗಳೂರಿಗೆ ಕರೆಯಿಸಿಕೊಂಡು ನೆಲಮಂಗಲದ ವಸತಿಗೃಹಕ್ಕೆ ಕರೆದುಕೊಂಡು ಹೋಗಿ ಆಕೆಯ ಇಚ್ಛೆಗೆ ವಿರುದ್ಧವಾಗಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದ. ನಂತರ ಮೂಲ್ಕಿಯ ಕಿನ್ನಿಗೋಳಿಯಲ್ಲಿ ವಸತಿಗೃಹಕ್ಕೆ ಕರೆದುಕೊಂಡು ಹೋಗಿ ಅಲ್ಲಿಯೂ ಅತ್ಯಾಚಾರ ವೆಸಗಿದ್ದ. ಬಳಿಕ ಯುವತಿಯ ನಗ್ನ ಪೋಟೋಗಳನ್ನು ಯುವತಿಯ ಮನೆಯವರಿಗೆ, ಸ್ನೇಹಿತರಿಗೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದ. ಈ ಪೋಟೋಗಳನ್ನು ಡಿಲೀಟ್ ಮಾಡಬೇಕಾದರೆ 1.5 ಲಕ್ಷ ರೂ. ನೀಡಬೇಕು ಎಂದು ಡಿಮಾಂಡ್ ಮಾಡಿದ್ದ. ನೊಂದ ಯುವತಿ ಈ ಬಗ್ಗೆ ಮಂಗಳೂರು ಮಹಿಳಾ ಪೊಲೀಸ್ ಠಾಣೆಗೆ ನೀಡಿದ ದೂರಿನಂತೆ ಆರೋಪಿ ಯುವಕನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇನ್‌ಸ್ಪೆಕ್ಟರ್ ಲೋಕೇಶ್ ಎ.ಸಿ. ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.