

ಹುಬ್ಬಳ್ಳಿ: ಪಾಕಿಸ್ತಾನ ಪರ ಘೋಷಣೆ ಕೂಗಿದ ಮೂವರು ಇಂಜಿನಿಯರ್ ವಿದ್ಯಾರ್ಥಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸುವ ಸಮಯದಲ್ಲಿ ಹಲ್ಲೆಗೆ ಯತ್ನ ನಡೆಸಲಾಗಿತ್ತು.
ದೇಶದ್ರೋಹಿಗಳ ಮೇಲೆ ಹಲ್ಲೆಗೆ ಮುಂದಾದವರ ಮೇಲೆ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಪೊಲೀಸರ ಈ ನಡೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ದೇಶ ದ್ರೋಹಿಗಳ ರಕ್ಷಣೆಗೆ ನಿಂತರಾ ಪೊಲೀಸರು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಬಂಧನದ ನಂತರ ಆರೋಪಿಗಳನ್ನು ನ್ಯಾಯಾಲಯಕ್ಕೆ ಕರೆತಂದ ಸಮಯದಲ್ಲಿ ವಿವಿಧ ಸಂಘಟನೆಗಳ ಸದಸ್ಯರು ಬೂಟು ಮತ್ತು ಚಪ್ಪಲಿಗಳನ್ನು ಆರೋಪಿಗಳಿದ್ದ ವಾಹನದ ಮೇಲೆ ತೂರಿದ್ದರು.
ದೇಶದ್ರೋಹಿಗಳ ಮೇಲೆ ಹಲ್ಲೆ ಯತ್ನ ನಡೆಸಿದವರ ವಿರುದ್ಧ ಸ್ವಯಂಪ್ರೇರಿತರಾಗಿ ವಿದ್ಯಾನಗರ ಪೊಲೀಸರು ದೂರು ದಾಖಲು ಮಾಡಿಕೊಂಡಿದ್ದಾರೆ. ವಿದ್ಯಾನಗರ ಪೊಲೀಸ್ ಇನ್ಸ್ಪೆಕ್ಟರ್ ಆನಂದ ಒಣಕುದರಿ ಅವರಿಂದ ದೂರು ದಾಖಲಾಗಿದೆ.
ಹಲ್ಲೆ ಯತ್ನ ಮಾಡಿದ ಹದಿನೈದಕ್ಕೂ ಹೆಚ್ಚು ಜನರ ಮೇಲೆ ದೂರು ದಾಖಲಾಗಿದೆ. ದೂರು ದಾಖಲು ಮಾಡಿಕೊಂಡು ದೇಶ ವಿರೋಧಿ, ದೇಶ ದ್ರೋಹಿಗಳ ರಕ್ಷಣೆಗೆ ಪೊಲೀಸರು ನಿಂತಿದ್ದಾರಾ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
ಪೊಲೀಸರ ಈ ನಡೆಯಿಂದ ನ್ಯಾಯವಾದಿಗಳು, ಭಜರಂಗದಳದ ಮುಖಂಡರು, ಬಿಜೆಪಿ ನಾಯಕರು ಹಾಗೂ ಹಿಂದು ಪರ ಸಂಘಟನೆಗಳು ಆಕ್ರೋಷ ವ್ಯಕ್ತಪಡಿಸಿದ್ದಾರೆ. ದೂರು ದಾಖಲು ಮಾಡಿದ ಪೊಲೀಸರ ವಿರುದ್ಧ ಹೋರಾಟಕ್ಕೆ ದೊಡ್ಡ ಪ್ರಮಾಣದ ವೇದಿಕೆ ಸಿದ್ಧವಾಗುತ್ತಿದೆ.