

ಮದ್ದೂರು : ಸಿವಿಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡಿ, ನೆಟ್‌ವರ್ಕ್ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸಿ ಕೃಷಿಯ ಮೇಲಿನ ಅಪಾರ ವ್ಯಾಮೋಹದಿಂದ ಬೇಸಾಯದಲ್ಲೂ ತೊಡಗಿ ಯುವ ರೈತನೊಬ್ಬ ವರ್ಷಕ್ಕೆ 6 ರಿಂದ 7 ಲಕ್ಷ ರೂ.ಗಳನ್ನು ಲಾಭ ಗಳಿಸುತ್ತಿದ್ದಾರೆ.
ತಾಲೂಕಿನ ಮರಳಿಗ ಗ್ರಾಮದ ಎಂ.ಎಚ್.ಶ್ರೀನಿವಾಸ್ ಪುತ್ರ ಎಂ.ಎಸ್.ಸುಹಾಸ್ ಗೌಡ ಕೃಷಿಯಲ್ಲಿ ಯಶಸ್ವಿಯಾಗಿ ಮಾದರಿ ಯುವ ರೈತ ಎನಿಸಿಕೊಂಡಿದ್ದಾರೆ. ಎಂ.ಎಸ್.ಸುಹಾಸ್‌ಗೌಡ ಅವರು ಸಿವಿಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡಿ ಕರ್ನಾಟಕ ಸ್ಟೇಟ್ ವೈಡ್ ಏರಿಯಾ ನೆಟ್‌ವರ್ಕ್‌ನಲ್ಲಿ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜನರಿಗೆ ಉತ್ತಮ ಆರೋಗ್ಯಕ್ಕೆ ವಿಟಮಿನ್, ಫೈಬರ್, ಪೋಷಕಾಂಶಗಳು ನೀಡಬೇಕು ಎಂಬ ಮಹಾದಾಸೆಯಿಂದ ಸುಮಾರು 2 ವರ್ಷಗಳಿಂದ ಯಾವುದೇ ರೀತಿಯ ರಸಗೊಬ್ಬರ ಬಳಸದೆ ಸಂಪೂರ್ಣವಾಗಿ ಸಾವಯವ ಗೊಬ್ಬರ ಬಳಸಿಕೊಂಡು ಅಣಬೆ ಬೆಳೆಯುತ್ತಿದ್ದಾರೆ.
ಸುಹಾಸ್‌ಗೌಡ ಅವರಿಗೆ ಸುಮಾರು 2 ಎಕರೆ ಜಮೀನಿದ್ದು, ರೈತ ಕುಟುಂಬದ ಹಿನ್ನೆಲೆಯಿಂದ ಬಂದ ಸುಹಾಸ್‌ಗೌಡ ಅವರು ಸುಮಾರು 15 ವರ್ಷಗಳಿಂದ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. 2 ವರ್ಷಗಳಿಂದ ಸುಮಾರು 20 ಗುಂಟೆ ಪ್ರದೇಶದಲ್ಲಿ ಅಣಬೆ ಬೆಳೆಯುತ್ತಿದ್ದಾರೆ. ಜತೆಗೆ 250 ಬಾಳೆ, 300 ಅಡಕೆ, 500 ತೆಂಗಿನ ಮರಗಳನ್ನು ಬೆಳೆದಿದ್ದಾರೆ. 50 ನಾಟಿ ಕೋಳಿಗಳು, 25 ಮೇಕೆಗಳನ್ನು ಸಾಕುತ್ತಿದ್ದಾರೆ. ಮನೆಗೆ ಬೇಕಾದ ಸೊಪ್ಪುಗಳು, ತರಕಾರಿಗಳನ್ನು ಇವರೆ ತಮ್ಮ ಜಮೀನಿನಲ್ಲಿ ಬೆಳೆದುಕೊಳ್ಳುತ್ತಿದ್ದಾರೆ.
ಬಟನ್ ಮತ್ತು ಅಯ್ ಸ್ಟರ್ ಮಶ್ರೂಮ್ ಎರಡನ್ನೂ ಬೆಳೆಯುತ್ತಿದ್ದು ಅಣಬೆಯು ಭಾಗಶಃ ಕೊಳೆತ ಒಣಹುಲ್ಲಿನ ಪುಡಿಯ ಮೇಲೆ ಬೆಳೆಯುವುದಾದ್ದರಿಂದ ಹುಲ್ಲು ಬೇಗ ಕೊಳೆಯಲು ಯೂರಿಯಾ ರಸಗೊಬ್ಬರ ಬಳಕೆ ಮಾಡಲಾಗುತ್ತಿತ್ತು. ಸಾವಯವ/ರಾಸಾಯನಿಕ ಮುಕ್ತವಾಗಿ ಅಣಬೆ ಬೇಸಾಯ ಮಾಡುವ ಉದ್ದೇಶದಿಂದ ಹಾಗೂ ಅಯ್ ಸ್ಟರ್ ಅಣಬೆ ಸಾವಯವ/ರಾಸಾಯನಿಕ ಮುಕ್ತ ಕೃಷಿಗೆ ಬೇಗ ಹೊಂದಿಕೊಳ್ಳುವುದರಿಂದ ಅಣಬೆ ಉತ್ಪಾದನೆಗೆ ಮುಸುಕಿನ ಜೋಳದ ಮೋತೆಯ ಪುಡಿ ಹಾಗೂ ಕೇರಳದಿಂದ ರಬ್ಬರ್ ಮರದ ಒಟ್ಟಿನ ಪುಡಿಯನ್ನು ಆಮದು ಮಾಡಿಕೊಂಡು ರಾಸಾಯನಿಕ ಮುಕ್ತವಾಗಿ ಬೆಳೆಯುತ್ತಿರುವುದು ವಿಶೇಷ.
ಹೆಚ್ಚಾಗಿ ಬೆಳೆದ ಅಣಬೆಯನ್ನು ಸೋಲಾರ್ ಮುಖಾಂತರ ಒಣಗಿಸಿ ಪುಡಿ ಮಾಡುವುದರಿಂದ ವಿಟಮಿನ್ ಡಿ ಅಂಶ ಹೇರಳವಾಗಿ ದೊರಕುವುದರಿಂದ ಈ ಹಿಟ್ಟನ್ನು ರಾಗಿ ಅಕ್ಕಿ ಮತ್ತು ಗೋಧಿ ಹಿಟ್ಟಿನೊಂದಿಗೆ ಮಿಶ್ರಣ ಮಾಡಿ ಬಳಸಬಹುದಾಗಿದೆ. ಇದಲ್ಲದೆ ಕೃಷಿ ಇಲಾಖೆಯಲ್ಲಿ ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣ ಯೋಜನೆ (ಪಿಎಂಎಫ್‌ಎಂಇ) ಯೋಜನೆಯಡಿ ಅರ್ಜಿ ಸಲ್ಲಿಸುತ್ತಿದ್ದು ಅಣಬೆ ಪುಡಿಯೊಂದಿಗೆ ಉಪ್ಪಿನಕಾಯಿ ಹಪ್ಪಳ ಹಾಗೂ ಇತರ ಮೌಲ್ಯವರ್ಧಿತ ಪದಾರ್ಥಗಳ ಉತ್ಪಾದನೆ ಮಾಡಲು ಸುಹಾಸ್‌ಗೌಡ ಚಿಂತನೆ ನಡೆಸಿದ್ದಾರೆ.
ಸುಹಾಸ್‌ಗೌಡ ಅವರು ಉಷಾಶ್ರೀ ಫಾರ್ಮ್ಸ್ ಮೂಲಕ ಸ್ಥಳಿಯರಿಗೆ ತಾಜ ಅಣಬೆಯನ್ನು ಕಟಾವು ಮಾಡಿದ 1 ಗಂಟೆಯೊಳಗೆ ರೈತರಿಂದ ಗ್ರಾಹಕರಿಗೆ ತಲುಪಿಸಲು ವ್ಯವಸ್ಥೆ ಮಾಡಿದ್ದಾರೆ.
ನೈಸರ್ಗಿಕವಾದ ಅಣಬೆ ಸೇವನೆಯಿಂದ ಮಧುಮೇಹ ನಿಯಂತ್ರಿಸುತ್ತದೆ. ರಕ್ತದ ಸಕ್ಕರೆ ಸಮತೋಲನಗೊಳಿಸುತ್ತದೆ. ಹೃದಯ ಆರೋಗ್ಯ ಸುಧಾರಿಸುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಕ್ಯಾನ್ಸರ್ ವಿರುದ್ಧ ಹೋರಾಡುವ ಗುಣಗಳಿವೆ. ಸಮತೋಲನವನ್ನು ಕಾಪಾಡಿ, ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಎಲುಬು ಆರೋಗ್ಯವನ್ನು ಸುಧಾರಿಸಿ, ಉರಿಯೂತವನ್ನು ಕಡಿಮೆ ಮಾಡುತ್ತದೆ. ಫಾಸ್ಪರಸ್, ಮೆಗ್ನೇಶಿಯಮ್, ಕ್ಯಾಲ್ಸಿಯಂ, ಲೋಹ, ಜಿಂಕ್ ಹೆಚ್ಚಿನ ಪ್ರಮಾಣ ಇರುವ ಜತೆಗೆ ಅತಿಯಾಗಿ ನಾರು ಮತ್ತು ಪ್ರೋಟೀನ್ ಒಳಗೊಂಡಿರುವುದರಿಂದ ಆರೋಗ್ಯಕ್ಕೆ ತುಂಬ ಒಳ್ಳೆಯದು ಎನ್ನುತ್ತಾರೆ ರೈತ ಸುಹಾಸ್‌ಗೌ.
ಸುಹಾಸ್ ಅವರು ತಾವು ಬೆಳೆದ ಅಣಬೆಗಳನ್ನು ಸ್ಥಳೀಯವಾಗಿ ಮಾರಾಟ ಮಾಡುವ ಜತೆಗೆ ಚೆನ್ನೈ, ಹೈದರಾಬಾದ್, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಜತೆಗೆ ತಮ್ಮ ಜಮೀನಿನ ಮುಂದೆ ಅಂಗಡಿಯೊಂದನ್ನು ತೆರೆದು ಅಲ್ಲಿಯೂ ಮಾರಾಟ ಮಾಡುತ್ತಿದ್ದಾರೆ. ಸುಮಾರು 30 ಕೆ.ಜಿ. ತೂಕದ ಸೋಲಾರ್ ಡ್ರೈಯರ್ ಖರೀದಿ ಮಾಡಿದ್ದು, ಇದರಿಂದ ಮುಂದಿನ ದಿನಗಳಲ್ಲಿ ಟೊಮ್ಯಾಟೋ, ಈರುಳ್ಳಿ, ಬೆಳ್ಳುಳ್ಳಿ ಹಾಗೂ ನುಗ್ಗೆಸೊಪ್ಪಿನ ಪುಡಿಯನ್ನು ತಯಾರಿಸಲು ಚಿಂತನೆ ನಡೆಸಿದ್ದಾರೆ.
ಇವರ ಕೃಷಿ ಪ್ರೀತಿಗೆ ತಂದೆ ಎಂ.ಎಚ್.ಶ್ರೀನಿವಾಸ್, ತಾಯಿ ಎಂ.ಆರ್.ಉಷಾರಾಣಿ, ಸಹೋದರಿ ಎಂ.ಎಸ್.ಚಿನ್ಮಯಿ, ದೊಡ್ಡಪ್ಪಂದಿರಾದ ಎಂ.ಎಚ್.ರಾಮಕೃಷ್ಣ, ಸಿ.ಎಂ.ತಿಮ್ಮೇಗೌಡ, ಎಂ.ಎಚ್.ಅನಂತ ಸೇರಿದಂತೆ ಇಡೀ ಕುಟುಂಬವೇ ಸಾಥ್ ನೀಡುತ್ತಿದೆ. ಇವರು ಬೆಳೆಗಳನ್ನು ಬೆಳೆಯಲು ಬೋರ್‌ವೆಲ್ ಕೊರೆಸಿದ್ದು, ಹನಿ ನೀರಾವರಿ ಅಳವಡಿಸಿಕೊಂಡಿರುವುದರಿಂದ ನೀರಿನ ಸಮಸ್ಯೆ ಕಂಡು ಬಂದಿಲ್ಲ. ಜತೆಗೆ ಇಡೀ ಕುಟುಂಬ ಬೇಸಾಯದಲ್ಲಿ ತೊಡಗುವುದರಿಂದ ಕೃಷಿ ಕೂಲಿಕಾರರ ಸಮಸ್ಯೆ ಹೆಚ್ಚಾಗಿ ಬಾಧಿಸಿಲ್ಲ.
ಇವರ ಬೇಸಾಯ ಪದ್ಧತಿಯನ್ನು ನೋಡಿದ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ಇಲಾಖೆ ವತಿಯಿಂದ ಸಿಗುವ ಸೌಲಭ್ಯ ಮತ್ತು ಸಲವತ್ತುಗಳನ್ನು ನೀಡುವ ಭರವಸೆ ನೀಡಿದ್ದಾರೆ.
ರೈತರು ಹೆಚ್ಚಾಗಿ ಬೆಳೆಯಲಿ
ಅಣಬೆಯು ಉತ್ಕರ್ಷಣ ನಿರೋಧಕಗಳನ್ನು ಒದಗಿಸುತ್ತದೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ದೇಹದ ಆರೋಗ್ಯಕ್ಕೆ ಅಗತ್ಯವಾದ ಬಿ ಜೀವಸತ್ವಗಳು, ಪೊಟ್ಯಾಶಿಯಂ ಮತ್ತು ವಿಟಮಿನ್ ಡಿ ಯಂತಹ ಪೋಷಕಾಂಶಗಳನ್ನು ಒದಗಿಸುತ್ತದೆ. ಅವುಗಳನ್ನು ಪಾಕಶಾಸ್ತ್ರದಲ್ಲಿ, ಔಷಧಗಳ ತಯಾರಿಕೆಯಲ್ಲಿ ಮತ್ತು ಮನೋರೋಗ ಚಿಕಿತ್ಸೆಯಂತಹ ವೈದ್ಯಕೀಯ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಆದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ರೈತರು ಬೆಳೆಯಬೇಕೆಂದು ರೈತ ಸುಹಾಸ್ ಇತರ ರೈತರಿಗೆ ಸಲಹೆ ನೀಡುತ್ತಾರೆ.
ಸ್ಥಳಿಯ ರೈತರಿಗೆ ಹಾಗೂ ಸಾರ್ವಜನಿಕರಿಗೆ ನೈಸರ್ಗಿಕ ಹಾಗೂ ತಾಜವಾದ ಅಣಬೆಯನ್ನು ನೀಡಬೇಕೆಂಬ ಉದ್ದೇಶದಿಂದ ನಾನು ನೆಟ್‌ವರ್ಕ್ ಕ್ಷೇತ್ರದಲ್ಲಿ ಇಂಇಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರೂ ಅಣಬೆ ಹಾಗೂ ಮಿಶ್ರ ಬೇಸಾಯ ಮಾಡುತ್ತಿದ್ದೇನೆ. ಕೃಷಿಯನ್ನು ಖುಷಿಯಿಂದ ಮಾಡಿದರೆ ಎಂದಿಗೂ ನಷ್ಟವಾಗುವುದಿಲ್ಲ. ಜನರಿಗೆ ಅರೋಗ್ಯ ಮುಖ್ಯ. ಆದ್ದರಿಂದ ಯಾವುದೇ ರೀತಿಯ ರಾಸಾಯನಿಕ ಗೊಬ್ಬರ ಬಳಸದೆ ಸಂಪೂರ್ಣವಾಗಿ ಸಾವಯವ ಗೊಬ್ಬರ ಬಳಸಿಕೊಂಡು ಬೇಸಾಯ ಮಾಡುತ್ತಿದ್ದೇನೆ. ಇದರಿಂದ ಮಣ್ಣಿನ ಫಲವತತ್ತತೆ ಜತೆಗೆ ಉತ್ತಮ ಫಸಲು ಬಂದು ಕೈ ತುಂಬ ಆದಾಯ ಬರುತ್ತಿದೆ.ಎಂ.ಎಸ್.ಸುಹಾಸ್‌ಗೌಡಯುವ ಕೃಷಿಕ ಮರಳಿಗನನ್ನ ಪುತ್ರ ಎಂ.ಎಸ್.ಸುಹಾಸ್‌ಗೌಡ ಇಂಜಿನಿಯರ್ ಆದರೂ ಕೂಡ ಜನರ ಆರೋಗ್ಯ ದೃಷ್ಟಿಯಿಂದ ಮಿಶ್ರ ಬೇಸಾಯದಲ್ಲಿ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡಿರುವುದು ತುಂಬ ಸಂತೋಷ ತಂದಿದೆ. ತುಂಬ ಕಷ್ಟಪಟ್ಟು ಹಾಗೂ ಇಷ್ಟಪಟ್ಟು ಬೇಸಾಯ ಮಾಡುತ್ತಿದ್ದು, ಇಡೀ ಕುಟುಂಬ ಸಾಥ್ ನೀಡುತ್ತಿದ್ದೇವೆ.ಎಂ.ಎಚ್.ಶ್ರೀನಿವಾಸ್ ಮರಳಿಗ ಸುಹಾಸ್‌ಗೌಡ ತಂದೆಎಂ.ಎಸ್.ಸುಹಾಸ್‌ಗೌಡ ಯುವ ರೈತರಾಗಿ ತಮ್ಮ ಜಮೀನಿನಲ್ಲಿ ಅಣಬೆ, ಅಡಕೆ, ತೆಂಗು, ಬಾಳೆ ಬೆಳೆಗಳನ್ನು ಸಮೃದ್ಧವಾಗಿ ಬೆಳೆಯುತ್ತಿದ್ದಾರೆ. ಇಲಾಖೆಯ ಮೇಲಧಿಕಾರಿಗಳು ಇವರ ಜಮೀನಿಗೆ ಭೇಟಿ ನೀಡಿ ಇವರ ಕೃಷಿ ಪದ್ಧತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಇವರಿಗೆ ಎಲ್ಲ ರೀತಿಯ ಸಹಕಾರ ಮತ್ತು ಸಬ್ಸಿಡಿ ನೀಡಲು ಕ್ರಮ ಕೈಗೊಳ್ಳಲಾಗುವುದು.ಕೆ.ಎಂ.ರೇಖಾತೋಟಗಾರಿಖೆ ಇಲಾಖೆಯ ಸಹಾಯಕ ನಿರ್ದೇಶಕಿ ಮದ್ದೂರುಎಂ.ಎಸ್.ಸುಹಾಸ್‌ಗೌಡ ಇಂಜಿನಿಯರ್ ಆಗಿ ಕೃಷಿ ಮೇಲಿನ ಪ್ರೀತಿಯಿಂದ ಅಣಬೆ ಸೇರಿದಂತೆ ಮಿಶ್ರ ಬೇಸಾಯ ಮಾಡುತ್ತಿರುವುದು ಖುಷಿ ತಂದಿದೆ. ಮುಂದಿನ ದಿನಗಳಲ್ಲಿ ಇಲಾಖೆ ವತಿಯಿಂದ ಎಲ್ಲ ರೀತಿಯ ಸಬ್ಸಿಡಿ ಹಾಗೂ ಸವಲತ್ತುಗಳನ್ನು ನೀಡಲಾಗುವುದು.ಪ್ರತಿಭಾಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಮದ್ದೂರು