

ಹೊಳೆನರಸೀಪುರ: ಯುವ ಸಮುದಾಯ ಮಂಗಳವಾದ್ಯಗಳ ಅಭ್ಯಾಸದಲ್ಲಿ ತೊಡಗಿಕೊಳ್ಳುವ ಮೂಲಕ ಸಂಸ್ಕೃತಿಯ ಉಳಿವಿಗೆ ಮುಂದಾಗಬೇಕು ಎಂದು ಶಾಸಕ ಎಚ್.ಡಿ.ರೇವಣ್ಣ ಹೇಳಿದರು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಪಟ್ಟಣದ ಶ್ರೀರಾಮ ಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಸವಿತಾ ಮಹರ್ಷಿ ಜಯಂತಿ ಹಾಗೂ ತ್ಯಾಗರಾಜಸ್ವಾಮಿ ಆರಾಧನಾ ಮಹೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಮಂಗಳವಾದ್ಯವಿಲ್ಲದೆ ಯಾವುದೇ ಶುಭ ಕಾರ್ಯಗಳು ನಡೆಯುವುದಿಲ್ಲ. ಹೀಗಾಗಿ ಯುವ ಜನಾಂಗ ಅಭ್ಯಾಸದ ಜತೆ ವ್ಯಾಸಂಗದಲ್ಲೂ ತೊಡಗಿಸಿಕೊಳ್ಳಬೇಕು ಎಂದರು.
ಜಿಲ್ಲೆಯಲ್ಲಿರುವ ಸವಿತ ಸಮಾಜದ ಕಲ್ಯಾಣ ಮಂಟಪಗಳ ಪುನಶ್ಚೇತನಕ್ಕೆ 5 ಲಕ್ಷ ರೂ. ಧನಸಹಾಯ ನೀಡುವಂತೆ ಸಂಸದ ಪ್ರಜ್ವಲ್‌ಗೆ ಮನವಿ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ನೆರವು ದೊರೆಯಲಿದೆ ಎಂಬ ಭರವಸೆ ನೀಡಿದರು.
ತಹಸೀಲ್ದಾರ್ ಕೆ.ಆರ್.ಶ್ರೀನಿವಾಸ ಮಾತನಾಡಿ, ಪಂಚರತ್ನ ಕೀರ್ತನೆಗಳನ್ನು ಕೊಡುಗೆಯಾಗಿ ನೀಡುವ ಮೂಲಕ ತ್ಯಾಗರಾಜರು ಕರ್ನಾಟಕ ಸಂಗೀತಕ್ಕೆ ಮಹತ್ವದ ಸ್ಥಾನ ದೊರಕಿಸಿಕೊಟ್ಟರು ಎಂದು ಸ್ಮರಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಸವಿತಾ ಮಹರ್ಷಿ ಹಾಗೂ ತ್ಯಾಗರಾಜಸ್ವಾಮಿಗಳ ಭಾವಚಿತ್ರವನ್ನು ವಿವಿಧ ಕಲಾ ತಂಡಗಳೊಂದಿಗೆ ಮೆರವಣಿಗೆ ಮಾಡಲಾಯಿತು. ಸಂಸದ ಪ್ರಜ್ವಲ್ ರೇವಣ್ಣ ಚಾಲನೆ ನೀಡಿದರು.
ಅಂತಾರಾಷ್ಟ್ರೀಯ ಕಲಾವಿದರಾದ ಪಿ.ಆರ್.ರಘು, ಜ್ಞಾನಪ್ರಕಾಶ್, ವಿದ್ವಾನ್ ಅರಲಾನಂದ, ತೆವಿಲ್ ಇಲಯಂ, ಎಂ.ಎಸ್.ಎಂ.ಸೆಲ್ವಕುಮಾರ್ ನಡೆಸಿಕೊಟ್ಟ ಕಾರ್ಯಕ್ರಮ ಸಭಿಕರ ಮನಸೆಳೆಯಿತು.
ಪುರಸಭಾ ಸದಸ್ಯ ಎ.ಜಗನ್ನಾಥ್, ಆರೋಗ್ಯಾಧಿಕಾರಿ ವೆಂಕಟೇಶ್, ಮಂಗಳವಾದ್ಯ ಕಲಾವಿದರ ಸಂಘದ ಅಧ್ಯಕ್ಷ ಟಿ.ಎ.ರೇವಣ್ಣ, ಸವಿತಾ ಸಮಾಜದ ಅಧ್ಯಕ್ಷ ರವಿಕುಮಾರ್, ಹಿರಿಯರಾದ ಎಚ್.ಪಿ.ಶಾಮಣ್ಣ, ನಟೇಶ್, ಎಚ್.ಪಿ.ವೆಂಕಟೇಶ್, ಎಚ್.ವಿ.ಪುಟ್ಟರಾಜು, ಎಚ್.ಪಿ.ರಘು, ಎಚ್.ಟಿ.ತ್ಯಾಗರಾಜು, ಗೋವಿಂದರಾಜು, ಪದ್ಮ ಮಹೇಶ್, ಎ.ವಿ.ಕುಮಾರ್, ಎಚ್.ಕೆ.ಲಕ್ಷ್ಮಿಪ್ರಸನ್ನ, ಯೋಗಾನಂದ ಇತರರು ಇದ್ದರು.