

ವಿಜಯವಾಣಿ ಸುದ್ದಿಜಾಲ ಧಾರವಾಡ
ನಿವೃತ್ತ ನೌಕರರು ನಿವೃತ್ತಿ ನಂತರವೂ ಕ್ರಿಯಾಶೀಲರಾಗಿ ಸಮಾಜದ ಋಣ ತೀರಿಸುವ ಕಾರ್ಯ ಮಾಡಬೇಕು. ಇದರಿಂದ ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಹಿತಕರವಾಗುತ್ತದೆ. ನಿವೃತ್ತ ನೌಕರರು ಆಸಕ್ತಿಯಿಂದ ಸಹಕಾರಿ ಸಂಘ ಕಟ್ಟಿದ ಕಾರ್ಯ ಶ್ಲಾಘನೀಯ ಎಂದು ಡಿಡಿಪಿಐ ಎಸ್.ಬಿ. ಕೊಡ್ಲಿ ಹೇಳಿದರು.
ನಗರದ ಪ್ರಾಥಮಿಕ ಶಾಲಾ ಶಿಕ್ಷಕರು ಸಹಕಾರಿ ಸಂಘದ ಕಟ್ಟಡದ ಸಾಂಸ್ಕೃತಿಕ ಸಭಾಭವನದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ನಿವೃತ್ತ ನೌಕರರ ಸೌಹಾರ್ದ ಸಹಕಾರಿ ಸಂಘ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಆಸಕ್ತಿ ಇರುವ ಒಂದು ಕ್ಷೇತ್ರದಲ್ಲಾದರೂ ತೊಡಗಿಕೊಂಡು ಪ್ರಗತಿಪರ, ಸಮಾಜಮುಖಿ ಕಾರ್ಯ ಮಾಡಬೇಕು ಎಂದರು.
ಆರ್.ಎಸ್. ಮುಳ್ಳೂರ ಮಾತನಾಡಿ, ನಿವೃತ್ತ ನೌಕರರು ಸಹಕಾರ ಸಂಘದ ವೇದಿಕೆ ಮೂಲಕ ವಿವಿಧ ವಿಷಯಗಳ ತಜ್ಞರಿಂದ ನಿವೃತ್ತ ನೌಕರರಿಗೆ ದೊರೆಯುವ ವಿವಿಧ ಸೌಲಭ್ಯಗಳ ಕುರಿತು ಚಿಂಥನ-ಮಂಥನ ಹಮ್ಮಿಕೊಳ್ಳಬಹುದು. ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಉಪಯೋಗ ಪಡೆಯಬೇಕು ಎಂದರು.
ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಸ್.ಆರ್. ಪಾತ್ರೋಟಿ ಮಾತನಾಡಿ, ಸಂಘವು ನಿವೃತ್ತ ನೌಕರರ ಬಾಳಿಗೆ ಆಶಾಕಿರಣವಾಗಲಿ ಎಂದು ಶುಭ ಹಾರೈಸಿದರು.
ಧಾರವಾಡ ಜರ್ನಲಿಸ್ಟ್ ಗಿಲ್ಡ್ ಅದ್ಯಕ್ಷ ಬಸವರಾಜ ಹೊಂಗಲ್, ಎಸ್.ಆರ್.ಸಣ್ಣಕ್ಕಿ ಮಾತನಾಡಿದರು. ಸಂಘದ ಅಧ್ಯಕ್ಷ ಗುರು ತಿಗಡಿ ಅಧ್ಯಕ್ಷತೆ ವಹಿಸಿದ್ದರು. ವಿ.ಜಿ.ಕುಲಕರ್ಣಿ, ನಿರ್ಮಲಕುಮಾರ ಉಪಾಧ್ಯೆ, ಕಾಶಪ್ಪ ದೊಡವಾಡ, ಶಂಕರಪ್ಪ ಘಟ್ಟಿ, ಪಿ.ವಿ.ಲಾಳಸಂಗಿ, ಎಂ.ಎ. ಭಾವಿಕಟ್ಟಿ, ಜಿ.ಬಿ.ಸಜ್ಜನರ, ನಿಂಗಣ್ಣ ಕುಂಟಿ, ಕೆ.ಎಸ್. ಬಂಗಾರಿ, ಎಸ್.ರೇವಣಸಿದ್ದಪ್ಪ, ಸಿ.ಎಂ.ಕಿತ್ತೂರ, ವಿ.ಎಚ್. ದುಮ್ಮೇರ, ಎ.ವೈ. ದಾಟನಾಳ, ಇತರರು ಇದ್ದರು.