ಸಮಾಜಮುಖಿ, ಧರ್ಮ ಕಾರ್ಯಗಳಲ್ಲಿ ತೊಡಗಿಕೊಳ್ಳಿ

RON PRAVACHAN
Published on

ರೋಣ: ಪ್ರತಿಯೊಬ್ಬರೂ ಪರಹಿತ ಚಿಂತನೆ, ಪರೋಪಕಾರ, ನಿಸ್ವಾರ್ಥದಿಂದ ಕೂಡಿದ ಸಮಾಜಮುಖಿ ಮತ್ತು ಧರ್ವಧಿ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು. ಅಸಹಾಯಕರಿಗೆ ನೆರವಾಗುವ ಗುಣಗಳನ್ನು ಬೆಳೆಸಿಕೊಂಡು ಆದರ್ಶಮಯ ಜೀವನ ನಡೆಸಬೇಕು ಎಂದು ಮಣಕವಾಡದ ಅಭಿನವ ಮೃತ್ಯುಂಜಯ ಸ್ವಾಮೀಜಿ ಆಶೀರ್ವಚನ ನೀಡಿದರು.

ತಾಲೂಕಿನ ಸವಡಿ ಗ್ರಾಮದಲ್ಲಿ ಶ್ರೀ ಸಂಗಮೇಶ್ವರ ದೇವಸ್ಥಾನ ನೂತನ ರಥ ಲೋಕಾರ್ಪಣೆ ನಿಮಿತ್ತ ಇತ್ತೀಚೆಗೆ ಆಯೋಜಿಸಿದ್ದ ಆಧ್ಯಾತ್ಮಿಕ ಪ್ರವಚನದಲ್ಲಿ ಆಶೀರ್ವಚನ ನೀಡಿದ ಅವರು, ನಡೆ, ನುಡಿ, ಆಚಾರ, ವಿಚಾರಗಳು ಹಾಗೂ ಪರಿಪೂರ್ಣ ವ್ಯಕ್ತಿತ್ವ ಇತರರಿಗೆ ಮಾದರಿಯಾಗಬೇಕು. ಜೀವನ ಹೊರಗಿನ ಸೌಂದರ್ಯವಲ್ಲ, ಆಂತರಿಕ ಸೌಂದರ್ಯ ಸಂತೋಷದಿಂದ ಕೂಡಿರುತ್ತದೆ. ಬಾಹ್ಯ ಶರೀರ ಸದೃಢವಾಗಲು ಯೋಗ, ವ್ಯಾಯಾಮ, ಕ್ರೀಡೆ ಯಾವ ರೀತಿಯಾಗಿ ಮುಖ್ಯವೋ, ಅದರಂತೆ ಆಂತರಿಕವಾಗಿ ಸದೃಢರಾಗಲು ನಿತ್ಯ ಒಳ್ಳೆಯ ಆಲೋಚನೆಗಳು, ಧ್ಯಾನ. ಪ್ರಾರ್ಥನೆ ಮುಖ್ಯವಾಗಿದೆ ಎಂದರು.

ಅಹಂ, ದ್ವೇಷ, ಕಲಹ, ಕಚ್ಚಾಟ, ಸೇಡಿನ ಮನೋಭಾವ ವ್ಯಕ್ತಿಯನ್ನು ಕ್ರೂರತ್ವಕ್ಕೆ ತಳ್ಳುತ್ತದೆ. ಸದಾ ಸನ್ಮಾರ್ಗದಲ್ಲಿ ನಡೆದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ಈ ನಿಟ್ಟಿನಲ್ಲಿ ಇಂತಹ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮಗಳು ಸಹಕಾರಿಯಾಗಲಿವೆ ಎಂದರು. ಪರಮಪೂಜ್ಯ ಓಂ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ರಥ ಶಿಲ್ಪಿ ಅರುಣ ಬಡಿಗೇರ ಹಾಗೂ ಸಾಧಕರು, ದಾನಿಗಳನ್ನು ಸನ್ಮಾನಿಸಲಾಯಿತು. ರೋಜಾ ಹಿರೇಮಠ ಅವರಿಂದ ವೀರರಾಣಿ ಕಿತ್ತೂರ ಚನ್ನಮ್ಮ ಏಕಪಾತ್ರ ಅಭಿನಯ, ಯಶಸ್ವಿನಿ ಹಕ್ಕಾಪಕ್ಕಿ ಅವರಿಂದ ಭರತ ನಾಟ್ಯ, ಶ್ರೀ ಸಂಗಮೇಶ್ವರ ಪ್ರೌಢ ಶಾಲೆ ವಿದ್ಯಾರ್ಥಿಗಳಿಂದ ಸಾಮೂಹಿಕ ನೃತ್ಯ ಕಾರ್ಯಕ್ರಮಗಳು ಜರುಗಿದವು.

ನೀರಾವರಿ ಇಲಾಖೆ ಎಇಇ ಜಗದೀಶ ಬನ್ನಿಕೊಪ್ಪ, ಪಿಎಸ್​ಐ ಪ್ರಕಾಶ ಬಣಕಾರ, ಸಂಗಮೇಶ್ವರ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಮಂಜುನಾಥ ಗದಗ, ಕಾರ್ಯದರ್ಶಿ ಸಂಗಣ್ಣ ದಂಡಿನ, ಐ.ಎಸ್. ಶೀಲವಂತರ, ಭುಜಂಗಯ್ಯ ಹಿರೇಮಠ, ಎ.ಪಿ. ಪವಾಡಶೆಟ್ಟಿ, ಸಿ.ಎಸ್. ಗದಗ, ಎಸ್.ಎಂ. ಕತ್ತಿ, ಬಿ.ಸಿ. ಗುಳೇದ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net