

ಶೃಂಗೇರಿ: ಸ್ವಉದ್ಯೋಗದತ್ತ ಮಹಿಳೆಯರು ಹೆಚ್ಚಿನ ಗಮನ ಹರಿಸಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ಡಾ. ವಿ.ಆರ್.ಗೌರೀಶಂಕರ್ ಸಭಾಂಗಣದಲ್ಲಿ ಶನಿವಾರ ಶೃಂಗೇರಿ ತಾಲೂಕು ರೈತ ಮಹಿಳಾ ಒಕ್ಕೂಟ ಉದ್ಘಾಟಿಸಿ ಮಾತನಾಡಿ, ದೇಶದಲ್ಲಿ ಜನಸಂಖ್ಯೆ ಹೆಚ್ಚಿದ್ದು ಎಲ್ಲರಿಗೂ ಸರ್ಕಾರ ಉದ್ಯೋಗ ನೀಡಲು ಸಾಧ್ಯವಿಲ್ಲ. ಹಾಗಾಗಿ ಸರ್ಕಾರ ಕೃಷಿ, ಸ್ವ ಉದ್ಯೋಗಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಸರ್ಕಾರ ಮಹಿಳಾ ಮೀಸಲಾತಿಗೆ ಆದ್ಯತೆ ನೀಡಿದೆ. ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಪುರುಷರಿಗೆ ಸಮಾನರಾಗಿ ದುಡಿಯುತ್ತಿದ್ದಾರೆ ಎಂದರು.
ಮಲೆನಾಡಿನ ಕೃಷಿಕರ ಸ್ಥಿತಿ ಅತಂತ್ರದಲ್ಲಿದೆ. ಅಡಕೆಗೆ ಹಳದಿ ಹಾಗೂ ಎಲೆಚುಕ್ಕೆ ರೋಗದಿಂದ ಕೌಟುಂಬಿಕ ನಿರ್ವಹಣೆಗೆ ಮಹಿಳೆಯರು ಸಹಕಾರ ನೀಡಬೇಕಿದೆ. ಎಲ್ಲದಕ್ಕೂ ಸರ್ಕಾರ ಪರಿಹಾರ ನೀಡಲು ಸಾಧ್ಯವಿಲ್ಲ ಎಂದರು.
ಮಹಿಳೆಯರು ಜೇನು ಸಾಕಣೆ, ಹೈನುಗಾರಿಕೆ, ಹಪ್ಪಳ, ಸಂಡಿಗೆ ಮುಂತಾದ ಉತ್ಕೃಷ್ಟ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆಯಲ್ಲಿ ಉತ್ತಮ ಹೆಸರು ಗಳಿಸಿಕೊಂಡಿದ್ದಾರೆ. ಕಾರ್ಮಿಕರ ಸಮಸ್ಯೆ, ಪಾಳುಬಿದ್ದ ಗದ್ದೆಗಳ ಕೃಷಿಗೆ ಆದ್ಯತೆ, ತರಕಾರಿ ಬೆಳೆಸುವುದು ಒಕ್ಕೂಟದ ಮೂಲ ಉದ್ದೇಶವಾಗಬೇಕು. ಮಹಿಳಾ ಸಂಘಗಳು ರಾಜಕೀಯೇತರವಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.
ಮ್ಯಾಮ್ಕೋಸ್ ಉಪಾಧ್ಯಕ್ಷ ಯಡಗೆರೆ ಸುಬ್ರಹ್ಮಣ್ಯ ಮಾತನಾಡಿ, ಮಹಿಳೆಯರು ದೃಢ ನಿರ್ಧಾರ ಮಾಡಿ ಯಾವುದೇ ಕೆಲಸ ಮಾಡಿದರೆ ಅದರಲ್ಲಿ ಯಶಸ್ಸು ಗಳಿಸುತ್ತಾರೆ. ಖಾತೆದಾರ ಮಹಿಳೆಯರು ರೈತ ಉತ್ಪಾದಕ ಸಂಸ್ಥೆ ಕಟ್ಟಿಕೊಂಡು ಸ್ಥಳೀಯ ಉತ್ಪನ್ನಗಳನ್ನು ಬಳಸಿ ಮಾರುಕಟ್ಟೆಗೆ ನೀಡುವತ್ತ ಹೆಚ್ಚು ಆಸಕ್ತಿ ಬೆಳೆಸಿಕೊಳ್ಳಬೇಕು. ಯಾವುದೇ ವಸ್ತುಗಳನ್ನು ಗುಣಮಟ್ಟದಲ್ಲಿ ತಯಾರಿಸಿದಾಗ ಮಾರುಕಟ್ಟೆಯಲ್ಲಿ ಅಂಥ ಉತ್ಪನ್ನಗಳಿಗೆ ಹೆಚ್ಚು ಬೇಡಿಕೆ ಲಭ್ಯವಾಗುತ್ತದೆ ಎಂದರು.
ಒಕ್ಕೂಟದ ಅಧ್ಯಕ್ಷೆ ಸರಸ್ವತಿ ಉಪೇಂದ್ರ, ಉಪಾಧ್ಯಕ್ಷೆ ಪ್ರಮೀಳಾ, ಕಾರ್ಯದರ್ಶಿ ಮೋನಿಕಾ, ಸಹಕಾರ್ಯದರ್ಶಿ ಹೇಮಾವತಿ, ತಹಸೀಲ್ದಾರ್ ಗೌರಮ್ಮ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎ.ಎಸ್.ನಯನ, ಮ್ಯಾಮ್ಕೋಸ್ ನಿರ್ದೇಶಕ ಟಿ.ಕೆ.ಪರಾಶರ, ವಿದ್ಯಾರಣ್ಯಪುರ ಗ್ರಾಪಂ ಅಧ್ಯಕ್ಷ ಪ್ರವೀಣ್ ಪೂಜಾರಿ, ಮೆಣಸೆ ಗ್ರಾಪಂ ಅಧ್ಯಕ್ಷೆ ಸಂಧ್ಯಾ ಮರಿಯಪ್ಪ ಇದ್ದರು.