ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸಿ

15_webb
Published on

ಬೂದಿಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಆರ್​.ಮಂಜುನಾಥ್​ ಮನವಿ


ಬೂದಿಕೋಟೆ:ವಾರ್ಡ್​ ಸಭೆಗಳ ಮೂಲಕ ಆಯ್ಕೆಗೊಂಡ ನರೇಗಾ ಯೋಜನೆಯ ಕಾಮಗಾರಿಗಳನ್ನು ವಿಶೇಷ ಗ್ರಾಮ ಸಭೆಯಲ್ಲಿ ಚರ್ಚಿಸಿ ಅನುಮೋದನೆ ಪಡೆಯಲಾಗಿದೆ ಎಂದು ಗ್ರಾಪಂ ಅಧ್ಯಕ್ಷ ಬಿ.ಆರ್​.ಮಂಜುನಾಥ್​ ಹೇಳಿದರು. ತಾಲೂಕಿನ ಬೂದಿಕೋಟೆ ಗ್ರಾಮ ಪಂಚಾಯಿತಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶೇಷ ಗ್ರಾಮ ಸಭೆಯಲ್ಲಿ ಮಾತನಾಡಿದರು.
ಸರ್ಕಾರ ನರೇಗಾ ಯೋಜನೆಯ ಮೂಲಕ ಹಲವು ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ಹೆಚ್ಚಿನ ಒತ್ತು ನೀಡುತ್ತಿದೆ. ಇದರಿಂದ ಕಾರ್ಮಿಕರಿಗೆ ಕೆಲಸ ಸಿಗುವುದರ ಜತೆಗೆ ಆಯಾ ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತದೆ. ಪಂಚಾಯಿತಿ ವ್ಯಾಪ್ತಿಯಲ್ಲಿ 8 ಗ್ರಾಮಗಳು ಬರಲಿದ್ದು, ಆಯಾ ಗ್ರಾಮಗಳಲ್ಲಿ ಆಗಬೇಕಿರುವ ಮತ್ತು ಬೇಡಿಕೆ ಇರುವ ಕಾಮಗಾರಿಗಳ ಬಗ್ಗೆ ಈಗಾಗಲೇ ವಾರ್ಡ್​ ಸಭೆಗಳ ಮೂಲಕ ಚರ್ಚಿಸಲಾಗಿದೆ. ಅಂದಿನ ಸಭೆಗಳಲ್ಲಿ ಆಯ್ಕೆ ಮಾಡಿಕೊಂಡಿರುವ ಹತ್ತಾರು ಕಾಮಗಾರಿಗಳಿಗೆ ಇಂದಿನ ವಿಶೇಷ ಗ್ರಾಮ ಸಭೆಯಲ್ಲಿ ಅನುಮೋದನೆ ಸಿಕ್ಕಿದೆ. ಅನುಮೋದನೆಯಾದ ಎಲ್ಲ ಕಾಮಗಾರಿಗಳನ್ನು ಶೀಘ್ರ ಆರಂಭಿಸಲಾಗುತ್ತದೆ ಎಂದರು. ಸರ್ಕಾರ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್​ ಮೂಲಕ ಮಹಿಳಾ ಸಂಘಗಳ ಸದಸ್ಯರಿಗೆ ಹೈನುಗಾರಿಕೆ, ವ್ಯಾಪಾರ ಸೇರಿ ಹಲವು ಆದಾಯ ಉತ್ಪನ್ನ ಕಾರ್ಯಗಳಿಗೆ 50 ಸಾವಿರ ರೂ. ವರೆಗೆ ಸಾಲ ವಿತರಣೆ ಮಾಡುತ್ತಿದೆ. ಬೂದಿಕೋಟೆ ಪಂಚಾಯಿತಿ ವ್ಯಾಪ್ತಿಯಲ್ಲಿ 40 ಸಂಘಗಳು ಈಗಾಗಲೇ ಆರಂಭವಾಗಿದ್ದು, ಸಂಘಗಳಿಗೆ ಸಾಲ ನೀಡಲು ಸರ್ಕಾರ 55 ಲಕ್ಷ ರೂ.ಹಣ ಮಂಜೂರು ಮಾಡಿದೆ. ಈಗಾಗಲೇ 13 ಸಂಘಗಳಿಗೆ 18 ಲಕ್ಷ ರೂ.ಸಾಲ ವಿತರಣೆ ಮಾಡಿದ್ದು, ಸಾಲ ಪಡೆದ ಸದಸ್ಯರು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಂಡು ಆರ್ಥಿಕ ಪ್ರಗತಿ ಕಾಣುತ್ತಾ ಸಕಾಲಕ್ಕೆ ಸಾಲ ಮರುಪಾವತಿ ಮಾಡಬೇಕು ಎಂದರು. ಮಹಿಳಾ ಸಂಘದ ಸದಸ್ಯರಿಗೆ ಸಾಲ ವಿತರಣೆ ಮತ್ತು ಯಾಚಮಾನಹಳ್ಳಿಯಲ್ಲಿ ಮೃತಪಟ್ಟ ಅಂಗವಿಕಲರೊಬ್ಬರ ಅಂತ್ಯಸಂಸ್ಕಾರಕ್ಕೆ ಆರ್ಥಿಕ ನೆರವು ನೀಡಲಾಯಿತು.
ಸದಸ್ಯರಾದ ಕೃಷ್ಣಪ್ಪಶೆಟ್ಟಿ, ಉಮಾದೇವಿ, ರತ್ನಮ್ಮ, ಸಮ್ರಿನ್​, ಮುಖಂಡರಾದ ವೆಂಕಟೇಶ್​, ನಾರಾಯಣಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net