

ಲಿಂಗಸುಗೂರು: ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿ ಎಐಯುಟಿಯುಸಿ, ಆಶಾ ಕಾರ್ಯಕರ್ತೆಯರು ಹಾಗೂ ಕೂಲಿ ಕಾರ್ಮಿಕರು ಮಂಗಳವಾರ ಎಸಿ ಕಚೇರಿಯ ಎಫ್‌ಡಿಸಿ ಅನುಪಮಾ ಸಿಂಗ್‌ಗೆ ಮನವಿ ಸಲ್ಲಿಸಿದರು.
ಇದನ್ನೂ ಓದಿ: ಕಾರ್ಮಿಕರು ಆರೋಗ್ಯ ಕಾಳಜಿ ವಹಿಸಲಿ
ಕೇಂದ್ರ-ರಾಜ್ಯ ಸರ್ಕಾರಗಳು ಕಾರ್ಮಿಕರ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಲ್ಲಿ ನಿರ್ಲಕ್ಷಿಸುತ್ತಿದ್ದು, ನರೇಗಾ, ಸಾರ್ವಜನಿಕ ಆರೋಗ್ಯ, ಶಿಕ್ಷಣ ಸೇರಿ ವಿವಿಧ ಕಲ್ಯಾಣ ಯೋಜನೆಗಳಿಗೆ ಬಜೆಟ್ ಕಡಿತಗೊಳಿಸಲಾಗಿದೆ. ಆದರೆ, ಕಾರ್ಮಿಕ ವಿರೋಧಿ ನೀತಿಗಳನ್ನು ಬೇಡ ಎಂದರೂ ಜಾರಿಗೊಳಿಸಲಾಗಿದೆ. ಕಾರ್ಮಿಕ ಕಾಯ್ದೆಗಳು ಅಪೌಷ್ಟಿಕತೆ, ಬಡತನ, ನಿರುದ್ಯೋಗ ಸಮಸ್ಯೆ ಉಲ್ಬಣಕ್ಕೆ ಕಾರಣವಾಗುತ್ತಿದ್ದು, ರಾಷ್ಟ್ರೀಯ ಕನಿಷ್ಠ ವೇತನ ಕಾಯ್ದೆ ತಕ್ಷಣ ಜಾರಿಗೊಳಿಸಬೇಕು. ಕೇಂದ್ರ ಸರ್ಕಾರ ಅಧಿವೇಶನದಲ್ಲಿ ಹೇಳಿದಂತೆ ಆಶಾ ಕಾರ್ಯಕರ್ತೆಯರ ಪ್ರೋತ್ಸಾಹ ಧನ ಹೆಚ್ಚಿಸಬೇಕು. ಸಿಎಂ ಘೋಷಿಸಿದ ಮಾಸಿಕ 10 ಸಾವಿರ ರೂ. ವೇತನ ನೀಡಬೇಕು. ಆಶಾ, ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರ ಸೇವೆ ಕಾಯಂಗೊಳಿಸಬೇಕು. ಕಾರ್ಮಿಕರಿಗೆ 36 ಸಾವಿರ ರೂ. ಕನಿಷ್ಠ ವೇತನ ಜಾರಿಗೊಳಿಸಬೇಕು. ನಿರುದ್ಯೊಗಿಗಳಿಗೆ ಉದ್ಯೋಗ, ಸಾಮಾಜಿಕ ಭದ್ರತೆ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಆಶಾ ಕಾರ್ಯಕರ್ತೆಯರಾದ ಜಯಶ್ರೀ, ಜ್ಯೋತಿ ಲಕ್ಷ್ಮೀ, ಉದಾಸಮ್ಮ, ಗೌರಮ್ಮ, ರತ್ನಮ್ಮ, ಲಕ್ಷ್ಮೀ, ಸುಮಿತ್ರಾ, ರಾಜೇಶ್ವರಿ, ರೇಣುಕಾ, ಶಶಿಕಲಾ, ವನಿತಾ, ಗಂಗಮ್ಮ, ದೇವಮ್ಮ, ಪ್ರಮುಖರಾದ ವೀರೇಶ, ಹನುಮರೆಡ್ಡಿ, ರವಿ ಕಂದಗಲ್, ಉಮಾಪತಿ ಆನೆಹೊಸೂರು ಇತರರಿದ್ದರು.