

ಮಹಾಲಿಂಗಪುರ: ನೂತನ ಕೃಷಿ ಕಾಯ್ದೆ ರದ್ದುಗೊಳಿಸುವಂತೆ ಆಗ್ರಹಿಸಿ ದಲಾಲ ವರ್ತಕರ ಸಂಘದ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಪಟ್ಟಣದಲ್ಲಿ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿ ಪುರಸಭೆ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದವು.
ಹಮಾಲರ ಸಂಘ, ರೈತ ಸಂಘ, ಕಿರಾಣಿ ವರ್ತಕರ ಸಂಘ, ಸ್ಟೇಷನರಿ ಸಂಘ, ಕಾರಕೂನ ಸಂಘ, ವೇಮನ ಸಂಘ ಇನ್ನಿತರ ಸಂಘಟನೆಗಳು ಎಪಿಎಂಸಿ ಗಣಪತಿ ದೇವಸ್ಥಾನದಿಂದ ಮೆರವಣಿಗೆಯಲ್ಲಿ ಪುರಸಭೆಗೆ ತೆರಳಿ ಪುರಸಭೆ ಅಧಿಕಾರಿ ಎಸ್.ಎನ್. ಪಾಟೀಲ ಅವರಿಗೆ ಮನವಿ ಪತ್ರ ನೀಡಿದರು.
ದಲಾಲ ವರ್ತಕರ ಸಂಘದ ಅಧ್ಯಕ್ಷ ಮಹಾಲಿಂಗಪ್ಪ ಕೋಳಿಗುಡ್ಡ ಮಾತನಾಡಿ, ಮೊದಲಿದ್ದ ಕೃಷಿ ಮಾರುಕಟ್ಟೆ ಕಾನೂನುಗಳನ್ನೇ ಮರು ಜಾರಿಗೊಳಿಸಿ ಕೃಷಿ ಮಾರುಕಟ್ಟೆಗಳ ಅಸ್ತಿತ್ವ ಉಳಿಸಬೇಕು. ಎಪಿಎಂಸಿಯಲ್ಲಿ ಹಲವಾರು ರೀತಿಯ ಕೃಷಿ ಹುಟ್ಟುವಳಿಗಳ ಗುಣಮಟ್ಟ ಆಧರಿಸಿ ‘ಇ’ ಟೆಂಡರ್‌ನಲ್ಲಿ ಬೆಲೆ ನಿಗದಿಯಾಗುವುದರಿಂದ ರೈತರಿಗೆ ಲಾಭವಾಗುತ್ತದೆ. ಮಾರ್ಕೆಟ್ ಹೊರಗೆ ನೇರವಾಗಿ ಖರೀದಿದಾರರು ವಾಸ್ತವ ಬೆಲೆ ಮರೆಮಾಚಿ ರೈತರನ್ನು ಯಾಮಾರಿಸಿ ಖರೀದಿಸುವುದರಿಂದ ರೈತ ಮೋಸ ಹೋಗುತ್ತಾನೆ. ಮೊದಲಿದ್ದ ‘ಇ’ ಟೆಂಡರ್ ಪ್ರಕ್ರಿಯೆ ಆರಂಭಿಸಿ ರೈತರು ಮೋಸ ಹೋಗುವುದಕ್ಕೆ ಕಡಿವಾಣ ಹಾಕಬೇಕು ಎಂದರು.
ರೈತ ಮುಖಂಡ ಮುತ್ತಪ್ಪ ಕೋಮಾರ ಮಾತನಾಡಿ, ರೈತ ಸಿಡಿದ್ದೆದ್ದರೆ ಸರ್ಕಾರಗಳು ಪತನವಾಗುತ್ತವೆ. ಆ ಭಯ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಗೊತ್ತು. ಇಂದು ರೈತ ವಿರೋಧಿ ಕಾನೂನುಗಳಿಂದ ರಾಜ್ಯಾದ್ಯಂತ 162ಮಾರುಕಟ್ಟೆಗಳು ಬಿಕೋ ಎನ್ನುತ್ತಿವೆ. ಎಪಿಎಂಸಿ ವರ್ತಕರು, ಕೂಲಿ-ಕಾರ್ಮಿಕರು, ನೌಕರರ ಬದುಕಿಗೆ ಸಿದ್ಧರಾಮಯ್ಯ ಸರ್ಕಾರ ಆಸರೆಯಾಗಬೇಕಾಗಿದೆ. ತಪ್ಪಿದಲ್ಲಿ ವರ್ತಕರೊಂದಿಗೆ ರಾಜ್ಯ ರೈತ ಸಂಘಗಳು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಉಪಾಧ್ಯಕ್ಷ ಬಾಳಕೃಷ್ಣ ಮಾಳವದೆ, ಕಾರ್ಯದರ್ಶಿ ಎಸ್. ಐ.ನುಚ್ಚಿ, ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯ ಸಂಚಾಲಕ ಗಂಗಾಧರ ಮೇಟಿ, ಈರಪ್ಪ ಹಂಚಿನಾಳ, ಕಿರಾಣಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಅಶೋಕ ಅಂಗಡಿ, ಜಿ ಜಿ. ಹುಬ್ಬಳ್ಳಿ, ಬಸವರಾಜ ಬಟಕುರ್ಕಿ, ಅಶೋಕ ಓಸ್ವಾಲ, ಚಂದ್ರು ಸಂಶಿ, ಚಂದ್ರಶೇಖರ ಗೊಂದಿ, ನಿಜಗುಣ ಷಣ್ಮುಖ, ಹಣಮಂತ ಶಿರೋಳ, ಬಸವರಾಜ ಕಲಾದಗಿ, ಪೈಗಂಬರ ಪೆಂಡಾರಿ ಇತರರಿದ್ದರು.