

ಮೈಸೂರು: ಇಂಧನ ಸಂರಕ್ಷಣೆ ಪ್ರಸ್ತುತ ಜಾಗತಿಕ ಆದ್ಯತೆಯಾಗಿದ್ದು, ನಾವು ಈ ಹಂತದಲ್ಲಿ ಎಚ್ಚರ ವಹಿಸದೆ ಹೋದರೆ ಇಡೀ ಪ್ರಪಂಚ ಒಂದಲ್ಲ ಒಂದು ದಿನ ಇಂಧನ ಕೊರತೆಯ ರಾಷ್ಟ್ರಗಳಾಗುವ ಸಾಧ್ಯತೆ ಇದೆ ಎಂದು ಇಂಧನತಜ್ಞ ಅನಿಲ್ ಕುಮಾರ್ ನಾಡಿಗೇರ್ ಕಳವಳ ವ್ಯಕ್ತಪಡಿಸಿದರು.
ಇಂಜಿನಿಯರ್‌ಗಳ ಸಂಸ್ಥೆ ವತಿಯಿಂದ ಸಂಸ್ಥೆಯ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಇಂಧನ ಸಂರಕ್ಷಣೆಯಲ್ಲಿ ಆಧುನಿಕ ತಂತ್ರಜ್ಞಾನ ಮತ್ತು ಉತ್ತಮ ಬಳಕೆ ವಿಧಾನಗಳು’ ವಿಷಯದ ಕುರಿತು ಮಾತನಾಡಿ, ದೇಶ-ದೇಶಗಳ ನಡುವೆ ಯುದ್ಧ ಸಂಭವಿಸಿದ ಸಂದರ್ಭ ಇಂಧನದ ಕೊರತೆ ಎದುರಾಗುತ್ತದೆ. ಇದರಿಂದ ವಿವಿಧ ದೇಶಗಳು ತೀವ್ರ ಇಂಧನದ ಕೊರತೆ ಎದುರಿಸುತ್ತವೆ. ಭಾರತ ಅಭಿವೃದ್ಧಿಶೀಲ ರಾಷ್ಟ್ರವಾಗಿದ್ದು, ದೇಶದಲ್ಲಿ ಇಂಧನದ ಬೇಡಿಕೆ ಪ್ರತಿ ವರ್ಷ ಶೇ.15 ರಿಂದ 20 ರಷ್ಟು ಏರಿಕೆ ಕಾಣುತ್ತಿದೆ. ಈ ಬೇಡಿಕೆಗೆ ಅನುಗುಣವಾಗಿ ದೇಶದಲ್ಲಿ ಇಂಧನ ಉತ್ಪಾದನೆ ಆಗುತ್ತಿಲ್ಲ ಎಂದರು.
ದೇಶದ ಪ್ರತಿಯೊಂದು ಹಳ್ಳಿಗಳಿಗೆ ಪ್ರಸ್ತುತ ವಿದ್ಯುತ್ ಕಂಬಗಳು ತಲುಪಿದೆಯೇ ಹೊರತು ವಿದ್ಯುತ್ ಇನ್ನೂ ತಲುಪಿಲ್ಲ. ಗ್ರಾಮೀಣ ಭಾಗದಲ್ಲಿ ವಿದ್ಯುತ್ ವ್ಯತ್ಯಯ ಸಾಮಾನ್ಯವಾಗಿದೆ. ಗ್ರಾಮೀಣ ಜನರ ಬೇಡಿಕೆಗೆ ತಕ್ಕಷ್ಟು ವಿದ್ಯುತ್ ಪೂರೈಕೆಯಾಗುತ್ತಿಲ್ಲ. ವಿದ್ಯುತ್ ಕೊರತೆಯಿಂದ ಗ್ರಾಮೀಣ ಜನರು, ರೈತರು ಪರ್ಯಾಯ ಮಾರ್ಗ ಕಂಡುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವು ದಶಗಳ ಹಿಂದೆಗೆ ಹೋಲಿಸಿದರೆ ದೇಶದಲ್ಲಿ ವಿದ್ಯುತ್ ಉತ್ಪಾದನೆ ಪ್ರಮಾಣ ಹೆಚ್ಚಾಗಿರುವುದು ನಿಜ. ಆದರೆ, ಈ ಪ್ರಮಾಣ ಮತ್ತಷ್ಟು ಹೆಚ್ಚು ಮಾಡುವ ಅವಶ್ಯಕತೆ ಇದೆ ಎಂದರು.
ದೇಶ ಕಚ್ಚಾತೈಲ ಹಾಗೂ ಕಲ್ಲಿದ್ದಲನ್ನು ದೊಡ್ಡ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತಿದೆ. ಇದಕೋಸ್ಕರ ವಾರ್ಷಿಕ 5 ರಿಂದ 8 ಲಕ್ಷ ರೂ.ಗಳನ್ನು ಖರ್ಚು ಮಾಡುತ್ತಿದೆ. ಇಂಧನ ಉತ್ಪಾದನೆಯಲ್ಲಿ ನಾವು ಸ್ವತಂತ್ರರಾಗಿಲ್ಲ. ಇಂಧನಕೋಸ್ಕರ ನಾವು ಬೇರೊಂದು ದೇಶವನ್ನು ಅವಲಂಬಿಸುವ ಪರಿಸ್ಥಿತಿ ಇನ್ನೂ ಮುಂದುವರೆದಿದೆ. ಆಹಾರ ಉತ್ಪಾದನೆಯಲ್ಲಿ ನಾವು ಸ್ವಾವಲಂಬನೆ ಸಾಧಿಸಿದ್ದೇವೆ. ಅದೇ ರೀತಿ ಇಂಧನ ಉತ್ಪಾದನೆಯಲ್ಲಿ ಸ್ವಾವಲಂಬಿ ಆಗಬೇಕಾಗಿದೆ. ಇದಕೋಸ್ಕರ ಒಂದಷ್ಟು ದಶಕಗಳು ಕಳೆಯಬೇಕಾಗಿದೆ ಎಂದರು.
ವೇದಿಕೆಯಲ್ಲಿ ಇಂಜಿನಿಯರ್‌ಗಳ ಸಂಸ್ಥೆ ಅಧ್ಯಕ್ಷ ಡಾ.ಆರ್. ದೀಪು, ಪದಾಧಿಕಾರಿಗಳಾದ ಡಾ.ಎಸ್.ಎ. ಮೋಹನ್ ಕೃಷ್ಣ, ಇಶ್ರೇ ಸಂಸ್ಥೆ ಪದಾಧಿಕಾರಿಗಳಾದ ಅರುಣಿ ಶ್ರೀನಿವಾಸ್, ಕೆ.ಬಿ. ಭಾಸ್ಕರ್, ಎನ್. ನಾಗಭೂಷಣ್ ಹಾಗೂ ಇತರರು ಇದ್ದರು.