

ಉಡುಪಿ: ಪ್ರಸಕ್ತ ವರ್ಷ ಮಳೆ ಕಡಿಮೆಯಾಗಿದ್ದು, ಬೇಡಿಕೆಯಷ್ಟು ವಿದ್ಯುತ್ ಉತ್ಪಾದನೆ ಸಾಧ್ಯವಾಗಿಲ್ಲ. ಆದರೆ, ವಿದ್ಯುತ್ನ ಕೊರತೆ ಆಗಿಲ್ಲ. ಆದರೂ ಮುಂದೆ ವಿದ್ಯುತ್ ಕೊರತೆ ಆಗುವ ಸಾದ್ಯತೆ ಇರುವುದರಿಂದ ಹಸಿರು ಇಂಧನ ಉತ್ಪಾದನೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ.ವಿದ್ಯುತ್ ಕೊರತೆ ನೀಗಿಸಲು ಪ್ರಸಕ್ತವಾಗಿ ಉತ್ತರ ಪ್ರದೇಶ ಹಾಗೂ ಪಂಜಾಬ್ ರಾಜ್ಯದೊಂದಿಗೆ ಒಪ್ಪಂದದ ಮೂಲಕ ವಿದ್ಯುತ್ ಪಡೆಯಲಾಗುತ್ತಿದೆ. ಕೇಂದ್ರ ಸರ್ಕಾರದಿಂದಲೂ ವಿದ್ಯುತ್ ಪಡೆಯುತ್ತಿದ್ದೇವೆ. ಸದ್ಯ ವಿದ್ಯುತ್ ಕೊರತೆ ಇಲ್ಲ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಮಾಹಿತಿ ನೀಡಿದರು.
ಉಡುಪಿಯಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿ, ಬೃಹತ್ ಪ್ರಮಾಣದಲ್ಲಿ ಗ್ರೀನ್ ಹೈಡ್ರೋಜನ್ ಎಂಬ ವಿನೂತನ ಮಾದರಿಯ ವಿದ್ಯುತ್ ಉತ್ಪಾದನೆಗೆ ಕ್ರಮ ಕೈಗೊಳ್ಳಲಿದ್ದೇವೆ. ಅದರಂತೆ ಸೋಲಾರ್, ವಿಂಡ್ ಪವರ್ ಉತ್ಪಾದನೆಗೆ ಆದ್ಯತೆ ನೀಡಿ, ಯೋಜನೆ ಜಾರಿಗೊಳಿಸಲಾಗುತ್ತದೆ. ಹೈಡ್ರೋಜನ್ಗೆ ಅಮೋನಿಯಂ ಬೆರೆಸಿ ವಿದ್ಯುತ್ ಉತ್ಪಾದಿಸಿ ಅದನ್ನು ಬ್ಯಾಗ್ಗಳಲ್ಲಿ ಸಂಗ್ರಹಿಸಿ ಇಡಬಹುದಾದ ವಿಶೇಷ ಪ್ರಕಾರದ ವಿದ್ಯುತ್ ಇದಾಗಿದೆ ಎಂದರು.
ಪಂಪ್ ಸ್ಟೋರೇಜ್
ವಿದ್ಯುತ್ ಉತ್ಪಾದನೆಯಲ್ಲಿ ಇನ್ನಷ್ಟು ಹೊಸ ಕ್ರಮ ಅಳವಡಿಸಿಕೊಳ್ಳಲಾಗುತ್ತಿದೆ. ಇದರಲ್ಲಿ ಪಂಪ್ ಸ್ಟೋರೇಜ್ ಎಂಬ ಹೊಸ ವಿಧಾನದ ಮೂಲಕ ವಿದ್ಯುತ್ ಉತ್ಪಾದನೆಗೆ ಬಳಕೆಯಾಗಿ ಹೊರಹೋಗುವ ನೀರನ್ನು ಮತ್ತೆ ಸಂಗ್ರಹಿಸಿ ಅದರಿಂದ ವಿದ್ಯುತ್ ಉತ್ಪಾದಿಸುವ ಪ್ರಕ್ರಿಯೆ ಇದಾಗಿದೆ. ಅತ್ಯಂತ ಹೆಚ್ಚು ವಿದ್ಯುತ್ ಬೇಡಿಕೆ ಇರುವ ಸಂದರ್ಭದಲ್ಲಿ ಪಂಪ್ ಸ್ಟೊರೇಜ್ ಮೂಲಕ ವಿದ್ಯುತ್ ಉತ್ಪಾದಿಸಲಾಗುವುದು ಎಂದರು.
ಥರ್ಮಲ್ ವಿದ್ಯುತ್
ರಾಜ್ಯದಲ್ಲಿರುವ ಥರ್ಮಲ್ ಸ್ಥಾವರಗಳಿಂದ 4000 ಮೆ.ವ್ಯಾ. ವಿದ್ಯುತ್ ಉತ್ಪಾದಿಸುವ ಗುರಿ ಹೊಂದಿದ್ದೇವೆ. ಇದಲ್ಲದೆ, ಕಲ್ಲಿದ್ದಲು ವಿದ್ಯುತ್ ಉತ್ಪಾದನೆಯನ್ನೂ ಮಾಡಲು ಯೋಜಿಸಿದ್ದು, ಇದರಲ್ಲಿ ಶೇ.45ರಷ್ಟು ಬೂದಿ ಉಳಿಕೆ ಆಗುತ್ತದೆ. ಬಳಿಕ ಆ ಬೂದಿಯನ್ನು ಬೇರೆಡೆ ಸಾಗಿಸುವುದಕ್ಕೆ ಹೆಚ್ಚಿನ ವೆಚ್ಚ ಆಗಲಿದೆ. ಹೀಗಾಗಿ ಸೋಲಾರ್, ಹೈಡ್ರೋಜನ್, ಹಾಗೂ ವಿಂಡ್ ಪವರ್ಗೆ ಹೆಚ್ಚಿನ ಆದ್ಯತೆ ನೀಡಲಿದ್ದೇವೆ ಎಂದರು.
10 ಯುನಿಟ್ ಹೆಚ್ಚಳ
ರಾಜ್ಯದಲ್ಲಿ 70 ಲಕ್ಷದಷ್ಟು ಭಾಗ್ಯಜ್ಯೋತಿ ಗ್ರಾಹಕರಿದ್ದು, ಅವರಿಗೂ ಈ ಹಿಂದೆಯೇ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಅವರಿಗೆ 48 ಯುನಿಟ್ ವಿದ್ಯುತ್ ಉಚಿತ ಇದೆ. ನಿಗದಿತ ಯುನಿಟ್ಗಿಂತ ಕೆಲವರು ಕಡಿಮೆ ಬಳಕೆ ಮಾಡುತ್ತಿದ್ದು, ಅವರಿಗೂ ಉಚಿತ ವಿದ್ಯುತ್ ಯೋಜನೆಯ ಲಾಭ ಸಿಗುವಂತಾಗಲು 10 ಯುನಿಟ್ ಹೆಚ್ಚಳ ಮಾಡಲಾಗುವುದು ಎಂದರು.
ಪವರ್ಮನ್ಗಳಿಗೆ ತರಬೇತಿ:
ರಾಜ್ಯದಲ್ಲಿ ಪವರ್ಮನ್ಗಳ ಕೊರತೆ ಇದೆ. ಕೊರತೆ ಹೇಗಾಗಿದೆ ಎಂದರೆ, ಜಿಲ್ಲೆಯಲ್ಲಿ ಕೆಲಸ ಮಾಡುತ್ತಿರುವ ಪವರ್ಮನ್ಗಳೆಲ್ಲರೂ ಅನ್ಯ ಜಿಲ್ಲೆಯವರು. ಮೂರು ವರ್ಷ ಪ್ರೊಬೆಷನರಿ ಅವಧಿ ಮುಗಿದ ಬಳಿಕ ಅವರು ಒತ್ತಡ ಹಾಕಿ ತಮ್ಮ ಜಿಲ್ಲೆಗೆ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದಾರೆ. ಇದರಿಂದ ಕೆಲ ಜಿಲ್ಲೆಗಳಲ್ಲಿ ಕೊರತೆ ಆಗಿದೆ. ಹೀಗಾಗಿ 6 ಸಾವಿರ ಪವರ್ಮನ್ಗಳನ್ನು ನೇಮಿಸಲಿದ್ದು, ಪ್ರಥಮ ಹಂತದಲ್ಲಿ 3 ಸಾವಿರ ಜನರನ್ನು ನೇಮಿಸಿಕೊಳ್ಳಲಾಗುವುದು. ಇದಕ್ಕಾಗಿಯೇ ರಾಜ್ಯಾದ್ಯಂತ ಒಂದು ದಿನ ನಿಗದಿ ಮಾಡಿ ಪವರ್ಮನ್ಗಳಿಗೆ ಕೌಶಲ ತರಬೇತಿ ನೀಡಲಿದ್ದೇವೆ. ಇದಕ್ಕೆ ಬೇಕಾದ ಎಲ್ಲ ಸಿದ್ಧತೆ ಮಾಡಿಕೊಂಡು, ಲೋಕಸಭಾ ಚುನಾವಣೆಯ ಬಳಿಕ ಈ ಕಾರ್ಯ ಮಾಡಲಿದ್ದೇವೆ. ಇದರಿಂದ ಸ್ಥಳಿಯ ಜನರೇ ಪವರ್ಮನ್ಗಳಾಗಲು ಅನುಕೂಲ ಆಗಲಿದೆ ಎಂದು ಸಚಿವ ಜಾರ್ಜ್ ತಿಳಿಸಿದರು.
ಮಂಗಳೂರಿನಲ್ಲಿ ಬೃಹತ್ ಸೋಲಾರ್ ಸ್ಟೇಶನ್
ಕರಾವಳಿ ಪ್ರದೇಶದಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ಬಿಸಿಲು ಲಭ್ಯ ಇರುವುದರಿಂದ ಮಂಗಳೂರಿನಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಬೃಹತ್ ಸೋಲಾರ್ ಸ್ಟೇಷನ್ ಸ್ಥಾಪಿಸಲು ಯೋಜಿಸಲಾಗಿದೆ. ಅನೇಕ ಕಂಪನಿಗಳು ಮುಂದೆ ಬಂದಿದ್ದು, ಕರಾರಿನೊಂದಿಗೆ ಆರಂಭಿಸಲಾಗುವುದು. ಸೋಲಾರ್ ವಿದ್ಯುತ್ ಉತ್ಪಾದನೆ ಸಮುದ್ರದ ನೀರಿನ ಬಳಕೆಯನ್ನೂ ಮಾಡಬೇಕಿದ್ದರಿಂದ ಮಂಗಳೂರಿನಲ್ಲಿಯೇ ಆರಂಭಿಸಲಾಗುವುದು. ಈ ಯೋಜನೆಗೆ ಸುಮಾರು 30 ಸಾವಿರ ಕೋಟಿ ರೂಪಾಯಿಗೂ ಅಧಿಕ ಬಜೆಟ್ ಬೇಕಾಗುತ್ತದೆ. ಇನ್ನೊಂದು ಸಮಸ್ಯೆ ಏನೆಂದರೆ, ಈ ಸೋಲಾರ್ ಸ್ಟೇಷನ್ ಕಾರ್ಯಾಚರಿಸಲು 5 ಸಾವಿರ ಮೆ.ವ್ಯಾ. ವಿದ್ಯುತ್ ಬೇಕಾಗುತ್ತದೆ. ಹೀಗಾಗಿ ಅದಕ್ಕೊಂದು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕಿದೆ. ಪಾವಗಡದಲ್ಲೂ ಸೋಲಾರ್ನ ಪೈಲೆಟ್ ಪ್ರೊಜೆಕ್ಟ್ ಮಾಡಲಾಗುವುದು ಎಂದು ಸಚಿವ ಜಾರ್ಜ್ ತಿಳಿಸಿದರು.