

ತೇರದಾಳ: ಪ್ರಭುವಿನ ಭಕ್ತರ ದೇಣಿಗೆಯಿಂದ ನಿರ್ಮಿಸಿದ ದೇವಸ್ಥಾನ ಸರ್ಕಾರಕ್ಕೆ ಸವಾಲಾಗಿದೆ. ಇಂಥ ಕಾರ್ಯಕ್ಕೆ ಮುಸ್ಲಿಮರು, ವಿವಿಧ ವರ್ಗಗಳ ಜನರು ಕೈಜೋಡಿಸಿರುವುದು ಭಾವೈಕ್ಯಕ್ಕೆ ಸಾಕ್ಷಿಯಾಗಿದೆ ಎಂದು ನಿಡಸೋಸಿ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಹೇಳಿದರು.
ಕ್ಷೇತ್ರಾಧಿಪತಿ ಅಲ್ಲಮಪ್ರಭು ದೇವರ ದೇವಸ್ಥಾನ ಲೋಕಾರ್ಪಣೆ ಹಾಗೂ ಕಲಶಾರೋಹಣ ಕಾರ್ಯಕ್ರಮ ನಿಮಿತ್ತ ಸೋಮವಾರ ಹಮ್ಮಿಕೊಂಡ ಧರ್ಮಸಭೆ ಸಾನ್ನಿಧ್ಯವಹಿಸಿ ಅವರು ಆಶೀರ್ವಚನ ನೀಡಿ, ಐತಿಹಾಸಿಕ ದೇವಸ್ಥಾನವನ್ನು ಪುನರ್ನಿರ್ಮಿಸುವುದೆಂದರೆ ಕ್ಷೇತ್ರಕ್ಕೆ ಶಕ್ತಿ ತುಂಬುವ ಕಾರ್ಯವಾಗಿದೆ ಎಂದರು.
ಹುಬ್ಬಳ್ಳಿ ಮೂರು ಸಾವಿರಮಠದ ಜಗದ್ಗುರು ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ದೇವಾಲಯ ಲೋಕಾರ್ಪಣೆ ಶ್ರೇಷ್ಠವಾದ ಕಾರ್ಯವಾಗಿದೆ. ಇಂತಹ ಅಭೂತಪೂರ್ವ ಕಾರ್ಯದಲ್ಲಿ ಜಾನಪದ, ಮಹಿಳೆ, ರೈತ, ಸಂಸ್ಕೃತಿ ಸೇರಿ ಹತ್ತು ಹಲವು ಉತ್ಸವ ಹಮ್ಮಿಕೊಂಡಿದ್ದು ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಜಗದೀಶ ಗುಡಗುಂಟಿ ಮಾತನಾಡಿ, ಅಂದಾಜು 6ಕೋಟಿ ವೆಚ್ಚದಲ್ಲಿ ಉಡುಪಿ ಕಲಾವಿದ ರಾಜಶೇಖರ ಹೆಬ್ಬಾರ ಕೈಚಳಕದಲ್ಲಿ ದೇವಸ್ಥಾನ ನಿರ್ಮಾಣವಾಗಿದೆ. ಶಾಸೋಕ್ತ ರೀತಿಯಲ್ಲಿ 9 ಕಲಶಗಳ ಆರೋಹಣ ಹಾಗೂ ದೇವಸ್ಥಾನ ಉದ್ಘಾಟನೆ ಕಾರ್ಯಕ್ರಮ ನೆರವೇರಿದೆ. ಲಿಂಗ, ಬಸವ ಅನೇಕ ಮೂರ್ತಿಗಳಿಗೆ ರುದ್ರಾಭಿಷೇಕ, ಮಹಾತ್ಮರಿಂದ ಜ್ಯೋತಿ ಬೆಳಗಿಸಲಾಗಿದೆ. ಧಾರ್ಮಿಕ ಕಾರ್ಯದ ಮೂಲಕ ದೇವಸ್ಥಾನ ಲೋಕಾರ್ಪಣೆಯಾದ ಕ್ಷಣಗಳು ಸಮಸ್ತ ಭಕ್ತರ ಜೀವನದಲ್ಲಿ ಅತ್ಯಮೂಲ್ಯವಾಗಿವೆ. ನಾಲ್ಕು ಶತಮಾನದಷ್ಟು ಹಳೆಯದಾದ ಕಟ್ಟಡವನ್ನು ತೆರವುಗೊಳಿಸುವ ಭೂಮಿ ಪೂಜೆಯನ್ನು ಶ್ರೀಶೈಲ ಪೀಠದ ಜಗದ್ಗುರುಗಳು ನೆರವೇರಿಸಿದ್ದರು. ರುದ್ರಾಭಿಷೇಕ ಮಂಡಲ ಸಮಾಪ್ತಿಯ ಮಹಾಮಂಡಳ ಮಹೋತ್ಸವ ಡಿ.28ರಂದು ನಡೆಯಬೇಕಿದ್ದು, ಸದರಿ ಕಾರ್ಯಕ್ರಮಕ್ಕೆ ಶ್ರೀಗಳು ಆಗಮಿಸುವ ಸಂದೇಶ ಕಳಿಸಿದ್ದಾರೆ ಎಂದರು.
ಬೆಂಗಳೂರು ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಮಲ್ಲೇಪುರಂ ಜಿ.ವೆಂಕಟೇಶ ಮಾತನಾಡಿ, ನಮ್ಮ ಕಾಲದಲ್ಲಿ ಅಲ್ಲಮರನ್ನು ಸರಿಯಾಗಿ ಅರ್ಥೈಸಿದವರು ಲಿಂ.ಸಿದ್ಧೇಶ್ವರ ಅಪ್ಪಾಜಿ ಅವರಾಗಿದ್ದಾರೆ. ಅಮೂಲ್ಯ ರತ್ನವಾಗಿರುವ ಅಲ್ಲಮರ ದೇವಸ್ಥಾನ ಲೋಕಾರ್ಪಣೆ ಸಾರ್ಥಕ್ಯ ಭಾವವನ್ನು ಸಮಸ್ತ ಭಕ್ತರಿಗೆ ತಂದು ಕೊಟ್ಟಿದೆ ಎಂದರು.
ಧರ್ಮಸಭೆ ವೇದಿಕೆಯಲ್ಲಿ ಹಂದಿಗುಂದ ಮಠದ ಶಿವಾನಂದ ಶ್ರೀ, ಚಿಮ್ಮಡ ಪ್ರಭು ಶ್ರೀ, ಹುಬ್ಬಳ್ಳಿ ಜಗದ್ಗುರು ಶಿವಶಂಕರ ಶಿವಾಚಾರ್ಯರು, ಹಿರೇಮಠದ ಗಂಗಾಧರದೇವರು, ಪುಷ್ಪಾತಾಯಿ ಗುಡಗುಂಟಿಮಠ, ಶೇಗುಣಸಿಯ ಡಾ.ಮಹಾಂತಪ್ರಭು, ಶಾಸಕ ಸಿದ್ದು ಸವದಿ, ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಹಿಪ್ಪರಗಿ ಇಂಚಗೇರಿ ಮಠದ ಮಹಾರಾಜರು, ಹಳಿಂಗಳಿ ಮಹಾವೀರ ಪ್ರಭು, ಅನೇಕ ಮಹಾತ್ಮರು ಹಾಗೂ ಗಣ್ಯರು ಇದ್ದರು.
ಶೇಗುಣಸಿ ಡಾ.ಮಹಾಂತಪ್ರಭು ಅವರು ವಿಜಯಪುರದಲ್ಲಿ ನೀಡಿದ ಪ್ರವಚನದ ಪ್ರಭುಲಿಂಗ ಲೀಲೆ ಸಾರವನ್ನು ಹೊತ್ತ ಪ್ರಭು ಪರಂ ಜ್ಯೋತಿ ಪುಸ್ತಕ ಬಿಡುಗಡೆ ಮಾಡಲಾಯಿತು. ಮಂಗಲವಾದ್ಯ ಹಾಗೂ ಸಂಗೀತ, ಗಾಯನಗಳು ಕಾರ್ಯಕ್ರಮಕ್ಕೆ ಕಳೆಕಟ್ಟಿದವು. ದೇವಸ್ಥಾನಕ್ಕೆ ಬೆಳ್ಳಿ, ಬಂಗಾರ ದೇಣಿಗೆ ನೀಡಿದ ಹಾಗೂ ಕಟ್ಟಡ ದೇಣಿಗೆ ಸದ್ಭಕ್ತರನ್ನು ಸನ್ಮಾನಿಸಿ ಗೌರವಿಸಲಾಯಿತು.
ಅನಾದಿ ನಿರಂಜನ ಶೂನ್ಯಸಿಂಹಾಸನಾಧೀಶ್ವರ ಅಲ್ಲಮಪ್ರಭು ದೇವಸ್ಥಾನ ಲೋಕಾರ್ಪಣೆ ಹಾಗೂ ಕಲಶಾರೋಹಣ ನಿಮಿತ್ತ ಸೋಮವಾರ ಬೆಳಗ್ಗೆ ಹುಬ್ಬಳ್ಳಿ ಮತ್ತು ನಿಡಸೋಸಿ ಜಗದ್ಗುರುಗಳ ದಿವ್ಯಸಾನ್ನಿಧ್ಯದಲ್ಲಿ ರುದ್ರಾಭಿಷೇಕ, ಒಂಬತ್ತು ಕಲಶಗಳ ಪೂಜೆ, ಮಂಗಳಾಚರಣೆ, ನಗಾರಿ ಸೇವೆ ಸೇರಿ ಹಲವು ಶಾಸೋಕ್ತ ಕಾರ್ಯಕ್ರಮಗಳು ದೇವಸ್ಥಾನದಲ್ಲಿ ಜರುಗಿದವು. ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಹೊರ ರಾಜ್ಯದಿಂದಲೂ ಆಗಮಿಸಿ ದರ್ಶನ ಪಡೆದುಕೊಂಡರು. ಪ್ರಭುವಿಗೆ ಜೈಕಾರ ಘೋಷಣೆಗಳು, ವಾದ್ಯಮೇಳಗಳು ಮೊಳಗಿದವು.