

ಆಲ್ದೂರು: ದೇಹ, ಮನಸ್ಸು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಮನಸ್ಸು ಚೈತನ್ಯಗೊಳ್ಳಲು ಕ್ರೀಡೆ ಬಹುಮುಖ್ಯ ಪಾತ್ರವಹಿಸುತ್ತದೆ ಎಂದು ಗ್ರಾಪಂ ಅಧ್ಯಕ್ಷೆ ಜಯಶೀಲಾ ಚಿದಂಬರ ಅಭಿಪ್ರಾಯಪಟ್ಟರು.
ಪೂರ್ಣಪ್ರಜ್ಞಾ ಶಾಲೆಯಲ್ಲಿ ಗುರುವಾರ ಪ್ರೌಢಶಾಲೆಗಳ ಸಿ ವಲಯ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ಆಟ ಅತಿಮುಖ್ಯ. ಮನಸ್ಸು ವಿಕಾಸ ಆಗಬೇಕಾದರೆ ಕ್ರೀಡೆಯಲ್ಲಿ ಭಾಗವಹಿಸಬೇಕು. ಪಾಲಕರು ಮಕ್ಕಳಲ್ಲಿ ಕ್ರೀಡಾಸಕ್ತಿ ಮೂಡಿಸಬೇಕು. ಇದರಿಂದ ನಾಯಕತ್ವ ಗುಣ ಬೆಳೆಯುತ್ತದೆ ಎಂದರು.
ಗ್ರಾಪಂ ಉಪಾಧ್ಯಕ್ಷ ಡಿ.ಬಿ.ಅಶೋಕ್ ಮಾತನಾಡಿ, ನಮ್ಮೂರಿನಲ್ಲಿ ವಲಯ ಮಟ್ಟದ ಕ್ರೀಡೆಯನ್ನು ಪೂರ್ಣಪ್ರಜ್ಞಾ ಶಾಲೆ ನಡೆಸಿಕೊಡುತ್ತಿರುವುದಕ್ಕೆ ಸಂತಸವಾಗಿದೆ. ಕ್ರೀಡಾ ಸಾಧಕ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಶೇ.2 ರಷ್ಟು ಅವಕಾಶವಿದೆ ಎಂದು ತಿಳಿಸಿದರು.
ಶಾಲೆ ಕಾರ್ಯದರ್ಶಿ ಸುಧಾಕರ್ ಮಾತನಾಡಿ, ಎಲ್ಲ ರಂಗದಲ್ಲೂ ಸ್ಪರ್ಧೆಗಳು ಹೆಚ್ಚುತ್ತಿದ್ದು, ಮೈಮರೆತರೆ ಬೇರೆಯವರು ಆಕ್ರಮಿಸಿಕೊಳ್ಳುತ್ತಾರೆ. ಮೈ, ಮನಸ್ಸು ಜಾಗೃತವಾಗಿರಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ತಾಲೂಕು ದೈಹಿಕ ಶಿಕ್ಷಣದ ಪರಿವೀಕ್ಷಕ ಪರಮೇಶ್ವರಪ್ಪ, ಮುಖ್ಯಶಿಕ್ಷಕ ವೆಂಕಟೇಶ್, ದೈಹಿಕ ಶಿಕ್ಷಕ ಸಂಘದ ಕಾರ್ಯದರ್ಶಿ ಗುರುಲಿಂಗಪ್ಪ, ಉಪಾಧ್ಯಕ್ಷ ಜಗದೀಶ್, ಶಂಕರೇಗೌಡ, ಆಲ್ದೂರು ಪ್ರೌಢಶಾಲೆ ಮುಖ್ಯಶಿಕ್ಷಕ ಸುರೇಶ್, ಶಿಕ್ಷಕರಾದ ಸಂತೋಷ್, ತಿಮ್ಮಾನಾಯಕ್, ಆನಂದ್, ಗ್ರಾಪಂ ಸದಸ್ಯೆ ಪ್ರತಿಭಾ ನವೀನ್, ಪತ್ರಕರ್ತ ರಾಜೇಶ್ ಇದ್ದರು.