

ಪಿರಿಯಾಪಟ್ಟಣ: ನಮ್ಮ ಸೈನಿಕರ ಸಾಹಸ ಮತ್ತು ಉತ್ಸಾಹದಿಂದ ನಮ್ಮ ದೇಶದ ರಕ್ಷಣೆಗೆ ಹೆಚ್ಚಿನ ಬಲ ಬಂದಿದೆ ಎಂದು ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ವಿ.ರಾಜೇಂದ್ರ ಅಭಿಪ್ರಾಯಪಟ್ಟರು.
ಪಟ್ಟಣದ ಡಿಪಿಬಿಎಸ್ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಶುಕ್ರವಾರ ನಡೆದ ಕಾರ್ಗಿಲ್ ವಿಜಯೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಭಾರತೀಯ ಸೇನಾ ಬಲವನ್ನು ಕಂಡು ಚೀನಾ, ಪಾಕಿಸ್ತಾನ ಸೇರಿದಂತೆ ನಮ್ಮ ಅಕ್ಕಪಕ್ಕದ ಶತ್ರು ರಾಷ್ಟ್ರಗಳು ಹೆದರುವಂತಾಗಿದೆ ಎಂದು ಪ್ರಶಂಶಿಸಿದರು. ಕಾರ್ಗಿಲ್ ಯುದ್ಧದ ನಂತರ ಭಾರತದ ಸೇನೆಯ ಯೋಚನಾ ಲಹರಿ ಮತ್ತು ದಿಕ್ಕು ಬದಲಾಗಿದ್ದು, ಯುದ್ಧ ಸಾಮಗ್ರಿಗಳ ಉತ್ಪಾದನೆಯಲ್ಲಿ ಸ್ವಾಲಂಬಿಯಾಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಈ ಹಿಂದೆ ನಮ್ಮ ದೇಶ ಯುದ್ಧ ಸಾಮಗ್ರಿಗಳಿಗಾಗಿ ಹೊರ ರಾಷ್ಟ್ರಗಳನ್ನು ಅವಲಂಬಿಸಿತ್ತು. ಆದರೆ ಈಗ ತನ್ನಲ್ಲಿಯೇ ಯುದ್ಧ ಸಾಮಗ್ರಿಗಳನ್ನ ಉತ್ಪಾದಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.
ನಿವೃತ್ತ ಯೋಧ ಜಿ.ಸಿ.ವಿಕ್ರಂ ರಾಜ್ ಮಾತನಾಡಿ, ಯುದ್ಧದಲ್ಲಿ ಜೀವ ಕಳೆದುಕೊಂಡ ಯೋಧರ ಕುಟುಂಬ ಹಾಗೂ ಮಾಜಿ ಯೋಧರ ಆಸ್ತಿ ಹಾಗೂ ಕುಟುಂಬದ ರಕ್ಷಣೆಗೆ ಸರ್ಕಾರ ಹೆಚ್ಚಿನ ಗಮನ ನೀಡಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ನಿವೃತ್ತ ಯೋಧರಾದ ವಿ.ಎಸ್.ರಮೇಶ್, ಗೋವಿಂದೇಗೌಡ, ಲೋಕನಾಥ್, ಧ್ರುವರಾಜ್, ಪುಷ್ಪ ಕರಣ್, ಕೆ.ಪಿ.ಪೂಣಚ್ಚ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಾಮ್ರಾಟ್, ಮಾಜಿ ಸೈನಿಕರಾದ ನರಸೇಗೌಡ, ರವಿಕುಮಾರ್, ಕೆ.ಪಿ.ಕೃಷ್ಣಪ್ಪ, ಕೆ.ಮಲ್ಲೇಶ್, ರಜಿತ್ ತಮ್ಮಯ್ಯ, ರಾಜು, ಬಿಜೆಪಿ ಮುಖಂಡರಾದ ಕಿರಣ್ ಜಯರಾಮ್, ಬೆಮ್ಮತ್ತಿ ಚಂದ್ರು, ಟಿ.ರಮೇಶ್, ಚನ್ನಬಸವರಾಜು, ಶಿವರಾಂ, ರಾಜೇಗೌಡ, ನೇಮಿಚಂದ್ ಸೇರಿದಂತೆ ಮತ್ತಿತರರು ಹಾಜರಿದ್ದರು.