ಸರ್ಕಾರಿ ಶಾಲೆ ಆಸ್ತಿ ಉಳಿಸಿದ್ದಕ್ಕೆ ಹುಟ್ಟಿಕೊಂಡ ಶತ್ರುಗಳು: ಶಿಕ್ಷಕಿ ಶೀಲಾ ರಾಣಿ ಆತಂಕ

mysore
Published on

ಮೈಸೂರು: ಸರ್ಕಾರಿ ಶಾಲೆ ಆಸ್ತಿ ಉಳಿಸುವ ಕೆಲಸದಿಂದ ಹಲವಾರು ಶತ್ರುಗಳು ಹುಟ್ಟಿಕೊಂಡಿದ್ದಾರೆ. ಮುಂದೆ ಏನು ಗೊತ್ತಿಲ್ಲ ಎಂದು ಬೆಂಗಳೂರಿನ ಚಿಕ್ಕಪೇಟೆಯ ಸರ್ಕಾರಿ ಶಾಲಾ ಆಸ್ತಿಯನ್ನು ಉಳಿಸಿರುವ ಶಿಕ್ಷಕಿ ಶೀಲಾ ರಾಣಿ ಆತಂಕ ವ್ಯಕ್ತಪಡಿಸಿದರು.


ಮೈಸೂರು ಲೇಖಕಿರ ಬಳಗ ಮತ್ತು ಅಪರಾಜಿತೆ ಪ್ರಕಾಶನ ಸಹಯೋಗದಲ್ಲಿ ನಗರದ ಕಲಾಸುರುಚಿಯ ರಂಗಮನೆಯಲ್ಲಿ ಭಾನುವಾರ ಆಯೋಜಿಸಿದ್ದ ಸಾಧಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.


ಚಿಕ್ಕಪೇಟೆಯ ಸರ್ಕಾರಿ ಶಾಲೆಯ ಜಾಗವನ್ನು ಇತರರು ಬಿಟ್ಟುಕೊಡದೆ ಸತಾಯಿಸುತ್ತಿದ್ದರು. ಆ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ನಾನು ಇಲಾಖೆಯಿಂದ ಇಲಾಖೆಗೆ ಓಡಾಡಿ ಶಾಲೆಗೆ ಸಂಬಂಧಪಟ್ಟ ದಾಖಲೆ ಪಡೆಯುವಲ್ಲಿ ಹೈರಾಣವಾಗಿ ಹೋಗಿದ್ದೆ. ಕೊನೆಗೂ ಶಾಲೆಗೆ ಸೇರಿದ 100 ಕೋಟಿ ರೂ. ಮೊತ್ತದ ಆಸ್ತಿಯನ್ನು ಸರ್ಕಾರಕ್ಕೆ ಉಳಿಸುವಲ್ಲಿ ಯಶಸ್ವಿಯಾಗಿರುವೆ. ಈ ಕೆಲಸದಿಂದಾಗಿ ಹಲವಾರು ಶತ್ರುಗಳು ಹುಟ್ಟಿಕೊಂಡಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.


ಹಿಂದೆ ತಾವು ಕೆಲಸ ಮಾಡಿದ ಕೆಲ ಊರುಗಳಲ್ಲಿ ಬಾಲ್ಯ ವಿವಾಹ ಹೆಚ್ಚಾಗಿತ್ತು. ಅದರ ತಡೆಗಾಗಿ ನಾನು ಸಾಕಷ್ಟು ಕೆಲಸ ಮಾಡಿ ಆ ಸಮಾಜದ ವಿರೋಧವನ್ನೂ ಕಟ್ಟಿಕೊಂಡಿದ್ದೆ. ಬಾಲಕಿಯರ ಆರೋಗ್ಯದ ಕಡೆಯೂ ಗಮನಹರಿಸಿದೆ ಎಂದರು.


ಸನ್ಮಾನ ಸ್ವೀಕರಿಸಿದ ಮತ್ತೊಬ್ಬ ಸಾಧಕ ಗಿರೀಶ್ ಮಾತನಾಡಿ, ಮೂಢನಂಬಿಕೆ ಹೋಗಲಾಡಿಸಲು ಧರ್ಮವನ್ನು ಅನಿವಾರ್ಯವಾಗಿ ಕೈಗೆತ್ತಿಕೊಳ್ಳಬೇಕಾಯಿತು. ಇಂದು ಏಡ್ಸ್ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಏಡ್ಸ್ ರೋಗಿಗಳ ಬಗ್ಗೆ ತಪ್ಪು ಕಲ್ಪನೆಗಳಿಂದಾಗಿ ಅವರ ಬದುಕು ನರಕವಾಗಿತ್ತು. ಅದನ್ನು ಮನಗಂಡು ನಾನು ಸರ್ಕಾರಿ ವಿವಿಧ ಇಲಾಖೆಗಳ ಸಹಾಯದಿಂದ ಅರಿವು ಮೂಡಿಸುವಂತಹ ಅನೇಕ ಕಾರ್ಯಕ್ರಮ ಮಾಡಿದೆ ಎಂದರು.


ಜತೆಗೆ, ಹೆಣ್ಣು ಮಕ್ಕಳ ಶುಚಿತ್ವದ ಬಗ್ಗೆ ನನ್ನ ಗಮನಹರಿಯಿತು. ‘ಮುಟ್ಟು ಗುಟ್ಟು’ ಎಂಬ ಕಾರ್ಯಕ್ರಮದ ಮೂಲಕ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶೌಚಗೃಹವನ್ನು ಕಟ್ಟಿಸುವಲ್ಲಿ ಯಶಸ್ವಿಯಾಗಿರುವೆ. ನಾವು ಪ್ರಾಮಾಣಿಕ, ಕಾಳಜಿಯಿಂದ ಕೆಲಸ ಮಾಡಿದರೆ ಅದಕ್ಕೆ ಸಹಾಯ ಮಾಡುವ ಜನ ಈಗಲೂ ಇದ್ದಾರೆ ಎಂದರು.


ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷ ಮಂಜುಳಾ ಮಾನಸ ಮಾತನಾಡಿ, ಸರ್ಕಾರಿ ಕೆಲಸದಲ್ಲಿದ್ದುಕೊಂಡು ಸಮಾಜ ಕಾರ್ಯದಲ್ಲಿ ತೊಡಗಿಕೊಳ್ಳುವುದು ಅಷ್ಟೇನೂ ಸುಲಭದ ಕಾರ್ಯವಲ್ಲ. ನಾನು ಮಹಿಳಾ ಅಯೋಗದ ಅಧ್ಯಕ್ಷೆ ಆಗಿದ್ದಾಗ ಲಂಬಾಣಿ ಹಾಡಿಗಳಲ್ಲಿನ ಜನರೊಂದಿಗೆ ಕೆಲಸ ಮಾಡುವಾಗ ಅವರ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆಯಾದಾಗ ಶಾಪ ಹಾಕುತ್ತಿದ್ದರು. ಕುರುಡು ಸಂಪ್ರದಾಯಗಳನ್ನು ಬಿಡಿಸುವುದು ಅಷ್ಟು ಸುಲಭದ ಕೆಲಸವಲ್ಲ. ಈ ದೆಸೆಯಲ್ಲಿ ಏಡ್ಸ್‌ನಂತಹ ರೋಗದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಮಾಡಿ, ಹೆಣ್ಣು ಮಕ್ಕಳ ಆರೋಗ್ಯದ ಬಗ್ಗೆಯೂ ಸಾಕಷ್ಟು ಕೆಲಸ ಮಾಡಿರುವ ಗಿರೀಶ್ ರಾಷ್ಟ್ರ ಪ್ರಶಸ್ತಿ ಪುರಸ್ಕಾರಕ್ಕೆ ಪಾತ್ರರಾಗಿರುವುದು ಹೆಮ್ಮೆಯ ಸಂಗತಿ ಎಂದರು.


ಅಂತೆಯೇ, ಶೀಲಾರಾಣಿಯವರು ಶಾಲಾ ಆಸ್ತಿಯನ್ನು ಉಳಿಸಲು ಹೋರಾಡಿದ ಕಥೆ ರೋಚಕವಾಗಿದೆ. ಸಮಾಜಘಾತಕ ವ್ಯಕ್ತಿಗಳನ್ನು ಎದುರು ಹಾಕಿಕೊಂಡು ಜೀವದ ಹಂಗು ತೊರೆದು ಕೆಲಸ ಮಾಡಿದ್ದಾರೆ. ಈ ಇಬ್ಬರು ಸಾಧಕರು ತಮ್ಮಷ್ಟಕ್ಕೆ ತಾವು ಶಾಲೆಯ ಕೆಲಸ ಮುಗಿಸಿ ಆರಾಮಾಗಿ ಇರಬಹುದಿತ್ತು. ಆದರೆ ಸಾಮಾಜಿಕ ಜವಾಬ್ದಾರಿಯ ತುಡಿತದಿಂದ ಈ ಸಾಧನೆಗೆ ಪಾತ್ರರಾಗಿದ್ದಾರೆ ಎಂದರು


ಸಾಹಿತಿ ಚ.ಸರ್ವಮಂಗಳ, ಮುಖಂಡರಾದ ಎಸ್.ಉಮೇಶ್, ಮೀನಾ ಮೈಸೂರು, ದೊರೆಸ್ವಾಮಿ ನಾಗಣ್ಣ, ಯೋಗಾನಂದ, ಮಧು ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net