

ಬೆಂಗಳೂರು: ಕೇಂದ್ರ ಸರ್ಕಾರದ ಇಂದ್ರಧನುಷ್ ಲಸಿಕಾ ಅಭಿಯಾನ 2.0 ನಾಲ್ಕನೇ ಸುತ್ತಿನ ಜಿಲ್ಲಾಮಟ್ಟದ ಲಸಿಕಾ ಕಾರ್ಯಕ್ರಮ ಮಾ.2 ರಿಂದ ಜಿಲ್ಲೆಯಾದ್ಯಂತ ಆರಂಭವಾಗಲಿದ್ದು, ಶೇ.100 ಪ್ರಗತಿ ಸಾಧಿಸುವತ್ತ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ಸೂಚಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಇಂದ್ರಧನುಷ್ ಲಸಿಕಾ ಅಭಿಯಾನ 2.0 ಜಿಲ್ಲಾಮಟ್ಟದ ಲಸಿಕಾ ಕಾರ್ಯಕ್ರಮ ಸಭೆಯಲ್ಲಿ ಮಾತನಾಡಿದರು.
ಮೊದಲ ಸುತ್ತಿನ ಲಸಿಕಾ ಕಾರ್ಯಕ್ರಮದಲ್ಲಿ ಜಿಲ್ಲೆಯಾದ್ಯಂತ ಮಕ್ಕಳಿಗೆ ಶೇ.95, ಗರ್ಭಿಣಿಯರಿಗೆ ಶೇ.100 ಪ್ರಗತಿ ಸಾಧಿಸಲಾಗಿದೆ. 2 ಮತ್ತು 3ನೇ ಸುತ್ತಿನ ಲಸಿಕಾ ಕಾರ್ಯಕ್ರಮ ಪೂರೈಸಿದ್ದು, ಇದು ನಾಲ್ಕನೇ ಹಂತವಾಗಿದ್ದು ಸಂಪೂರ್ಣ ಪ್ರಗತಿ ಸಾಧಿಸುವತ್ತ ಅಧಿಕಾರಿಗಳು ನಿಗಾವಹಿಸಬೇಕು ಎಂದು ಸೂಚನೆ ನೀಡಿದರು.
ತೀವ್ರಗೊಂಡ ಇಂದ್ರಧನುಷ್ ಲಸಿಕಾ ಅಭಿಯಾನದ ಅಂಕಿ ಅಂಶ ಪರಿಶೀಲಿಸಿ, ಉದ್ಯೋಗದ ಕಾರಣಕ್ಕೆ ಸ್ಥಳಾಂತರದ ಸಮಸ್ಯೆ ಎದುರಿಸುವ ತಾಯಿ ಮತ್ತು ಮಕ್ಕಳ ಬಗ್ಗೆ ಗಮನ ನೀಡಬೇಕು. ಮಕ್ಕಳಿಗೆ ಲಸಿಕೆ ಹಾಕಿಸಲು ಹಿಂದೇಟು ಹಾಕುವವರು ಕಂಡುಬಂದರೆ ಭವಿಷ್ಯದಲ್ಲಿ ಎದುರಿಸಬೇಕಾದ ಆರೋಗ್ಯ ಸಮಸ್ಯೆ ಕುರಿತು ಅರಿವು ಮೂಡಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಜಗದೀಶ್ ಕೆ.ನಾಯಕ ತಿಳಿಸಿದರು.
ಜಿಲ್ಲೆಯಲ್ಲಿನ ಗರ್ಭಿಣಿಯರನ್ನು ಗುರುತಿಸಿ, ನೋಂದಣಿ ಮಾಡಿ, ಸರ್ಕಾರಿ ಸೇವಾ ಸೌಲಭ್ಯ ಒದಗಿಸುವ ಮೂಲಕ ಲಸಿಕಾ ಕಾರ್ಯಕ್ರಮ ನಿಗದಿತ ಗುರಿ ತಲುಪುವಂತೆ ಎಚ್ಚರಿಕೆ ವಹಿಸಬೇಕು ಎಂದರು.
ಜಿಲ್ಲೆಯ ಯಾವುದೇ ಮಕ್ಕಳು ಇಂದ್ರಧನುಷ್ ಲಸಿಕಾ ಯೋಜನೆಯಿಂದ ಹೊರಗುಳಿಯಬಾರದು, ಲಸಿಕೆ ಕುರಿತು ಆಶಾ ಕಾರ್ಯಕರ್ತೆಯರು ಮನೆ ಮನೆಗಳಿಗೆ ಭೇಟಿ ನೀಡುವ ಮೂಲಕ ಹಾಗೂ ಬೀದಿ ನಾಟಕಗಳ ಮೂಲಕ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಇಂದ್ರಧನುಷ್ ಲಸಿಕಾ ಅಭಿಯಾನ 2.0 ಕಾರ್ಯಕ್ರಮದ ಪರಿಶೀಲನೆಗಾಗಿ ಫೆ.11ರಂದು ದೊಡ್ಡಬಳ್ಳಾಪುರ ತಾಲೂಕಿಗೆ ಕೇಂದ್ರದಿಂದ ಜಿಒಐ ಅಡಿಷನ್ ಡೆಪ್ಯುಟಿ ಡೈರೆಕ್ಟರ್ ಜನರಲ್ ಡಾ.ಪ್ರದೀಪ್ ಸಕ್ಸೇನಾ ಮತ್ತು ರಾಜ್ಯ ಮಟ್ಟದಿಂದ ಬೆಂಗಳೂರಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ ನಿರ್ದೇಶಕರು ಹಾಗೂ ಉಪ ನಿರ್ದೇಶಕರು ಭೇಟಿ ನೀಡಿದ್ದರು ಎಂದು ಮಾಹಿತಿ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂತಾನೋತ್ಪತ್ತಿ ಮತ್ತು ಮಕ್ಕಳ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶರ್ಮಿಳಾ, ಜಿಲ್ಲಾ ಆರೋಗ್ಯ ಸರ್ವೇಕ್ಷಣಾ ಅಧಿಕಾರಿ ಡಾ.ಮಿಸ್ಬಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಪುಷ್ಪಲತಾ.ಜಿ.ರಾಯ್ಕರ್ ಇದ್ದರು.