

ಚಿತ್ರದುರ್ಗ: ಜಿಲ್ಲಾಸ್ಪತ್ರೆಯಲ್ಲಿ ಆ.15ರಿಂದ ಎಂಡೋಸ್ಕೋಫಿ ಮತ್ತು ಸ್ತನ ಕ್ಯಾನ್ಸರ್ ಚಿಕಿತ್ಸೆ ಘಟಕಗಳು ಆರಂಭವಾಗಲಿವೆ ಎಂದು ಜಿಲ್ಲಾ ಸರ್ಜನ್ ಡಾ.ಎಸ್.ಪಿ. ರವೀಂದ್ರ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಂಡೋಸ್ಕೋಫಿ ಉಪಕರಣಗಳ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ. ತಾಯಿ ಮತ್ತು ಮಕ್ಕಳ ನೂತನ ಆಸ್ಪತ್ರೆಯಲ್ಲಿ ಸ್ಥಾಪಿಸಿರುವ ಸ್ತನ ಕ್ಯಾನ್ಸರ್ ಚಿಕಿತ್ಸಾ ಘಟಕಕ್ಕೆ ತಜ್ಞ ವೈದ್ಯರನ್ನು ನೇಮಿಸಲಾಗಿದೆ ಎಂದು ತಿಳಿಸಿದರು.
ಹುಬ್ಬಳ್ಳಿ ಕ್ಯಾನ್ಸರ್ ಆಸ್ಪತ್ರೆ ಸಹಯೋಗದಲ್ಲಿ 15 ರೋಗಿಗಳಿಗೆ ಜಿಲ್ಲಾಸ್ಪತ್ರೆಯಲ್ಲೆ ಕಿಮೋಥೆರಪಿ ಚಿಕಿತ್ಸೆ ನೀಡಲಾಗುತ್ತಿದೆ. ತೀವ್ರತರ ಉಸಿರಾಟ ತೊಂದರೆ ಇರುವ ರೋಗಿಗಳ ಚಿಕಿತ್ಸೆಗೆ 10 ಬೆಡ್‌ಗಳ ವೆಂಟಿಲೇಟರ್ ಸೇವೆ ಆರಂಭಿಸಲಾಗಿದೆ. ಅಪಘಾತ ಮತ್ತು ತುರ್ತು ಸಂದರ್ಭದಲ್ಲಿ ಉನ್ನತ ಚಿಕಿತ್ಸೆಗೆ ಜಿಲ್ಲಾಸ್ಪತ್ರೆ ಆವರಣದಲ್ಲಿ ತಲಾ 50 ಹಾಸಿಗೆ ಸಾಮರ್ಥ್ಯವುಳ್ಳ ಕ್ರಿಟಿಕಲ್ ಕೇರ್ ಯೂನಿಟ್ ಮತ್ತು ಟ್ರಾಮಾ ಕೇರ್ ಸೆಂಟರ್ ಸ್ಥಾಪನೆಯಾಗಲಿದೆ. ಕೆಎಂಇಆರ್‌ಸಿ ಅನುದಾನದಲ್ಲಿ 180 ಹಾಸಿಗೆ ಸಾಮರ್ಥ್ಯವುಳ್ಳ ಸುಸಜ್ಜಿತ ಆಸ್ಪತ್ರೆ ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದರು.
2024 ಏಪ್ರಿಲ್‌ನಿಂದ 2025 ಮಾರ್ಚ್‌ವರೆಗೆ 3,99,763 ಹೊರ ರೋಗಿಗಳು, 58,352 ಒಳರೋಗಿಗಳು ಚಿಕಿತ್ಸೆ ಪಡೆದಿದ್ದಾರೆ. ಇವರಲ್ಲಿ ಎಬಿಆರ್‌ಕೆ ಅಡಿ 31,270 ಒಳರೋಗಿಗಳಿಗೆ ಉಚಿತ ಶಸ್ತ್ರ ಚಿಕಿತ್ಸೆ ನೀಡಲಾಗಿದೆ. 6,645 ಹೆರಿಗೆಗಳನ್ನು ಮಾಡಿಸಲಾಗಿದೆ. 412 ಹಾವು ಕಡಿತ, 2736 ರಸ್ತೆ ಅಪಘಾತ ಮತ್ತು ಗಾಯ ಹಾಗೂ 53 ಸುಟ್ಟಗಾಯಗಳ ಪ್ರಕರಣಗಳಲ್ಲಿ ಚಿಕಿತ್ಸೆ ನೀಡಲಾಗಿದೆ.
ಬೇರೆಡೆ ಚಿಕಿತ್ಸೆಗೆ ಶಿಫಾರಸು ತಡೆಗಟ್ಟಲಾಗುತ್ತಿದೆ. ಅಪೌಷ್ಠಿಕ ಮಕ್ಕಳ ಆರೈಕೆಗೆ 10 ಬೆಡ್‌ಗಳ ಎನ್‌ಆರ್‌ಸಿ ಕೇಂದ್ರದಲ್ಲಿ ಪ್ರಸಕ್ತ ವರ್ಷ 250 ಮಕ್ಕಳಿಗೆ ವಿಶೇಷ ಆರೈಕೆ ನೀಡಲಾಗಿದೆ. 120 ರೋಗಿಗಳಿಗೆ ಡಯಾಲಿಸ್ ಮಾಡಲಾಗುತ್ತಿದೆ. ರಕ್ತ ನಿಧಿ ಕೇಂದ್ರದಲ್ಲಿ 8,024 ಯನಿಟ್ ರಕ್ತ ಸಂಗ್ರಹಿಸಿ ಬಳಸಲಾಗಿದೆ. ಶೀಘ್ರದಲ್ಲೇ ಜಿಲ್ಲಾ ಕೇಂದ್ರೀಕೃತ ಸಾರ್ವಜನಿಕ ಲ್ಯಾಬ್ ಸ್ಥಾಪನೆ ಮಾಡಲಾಗುವುದು ಎಂದರು.
ಚಿತ್ರದುರ್ಗ ಮೆಡಿಕಲ್ ಕಾಲೇಜಿನೊಂದಿಗೆ ಸಂಯೋಜನೆ ಹೊಂದಿದೆ ಎಂದ ಅವರು, ಜಿಲ್ಲಾಸ್ಪತ್ರೆಯಲ್ಲಿರುವ ತಜ್ಞ ವೈದ್ಯರ ವಿವರ ನೀಡಿದರು. 25 ವರ್ಷಗಳಿಂದಲೂ ಸೇವೆ ಸಲ್ಲಿಸುತ್ತಿದ್ದ 37 ಶುಶ್ರೂಷಕ ಸಿಬ್ಬಂದಿಯನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗಿದೆ. ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ರವೀಂದ್ರ ತಿಳಿಸಿದರು.