

ಹುಬ್ಬಳ್ಳಿ: ಶ್ವಾಸಕೋಶ ಸಂಬಂಧಿತ ಕಾಯಿಲೆಗಳಿಗೆ ನಿಖರ ಚಿಕಿತ್ಸೆ ನೀಡಲು ಅತ್ಯುತ್ತಮ ಉಪಕ್ರಮವಾಗಿರುವ ಎಂಡೊಬ್ರೊಂಕಿಯಲ್ ಅಲ್ಟ್ರಾಸೌಂಡ್ (ಇಬಿಯುಎಸ್) ತಂತ್ರಜ್ಞಾನವನ್ನು ಸುಚಿರಾಯು ಆಸ್ಪತ್ರೆಯಲ್ಲಿ ಅಳವಡಿಸಲಾಗಿದೆ ಎಂದು ಆಸ್ಪತ್ರೆಯ ಶ್ವಾಸಕೋಶ ತಜ್ಞ ಡಾ. ಗೋವಿಂದ ದೇಸಾಯಿ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದಲ್ಲಿ ಮೊದಲ ಬಾರಿ ಇಂತಹ ನೂತನ ಚಿಕಿತ್ಸಾ ವಿಧಾನವನ್ನು ಅಳವಡಿಸಿಕೊಂಡ ಆಸ್ಪತ್ರೆ ಇದಾಗಿದೆ. ಶ್ವಾಸಕೋಶ ಸುರಕ್ಷತೆಗಾಗಿ ಇಬಿಯುಎಸ್ ಚಿಕಿತ್ಸಾ ಕ್ರಮ ಹೆಚ್ಚು ಪರಿಣಾಮಕಾರಿ ವಿಧಾನವಾಗಿದೆ ಎಂದರು.
ಇದು ಶ್ವಾಸಕೋಶ ಸಂಬಂಧಿತ ರೋಗಗಳಿಗೆ ಅಂತರ್ವಾಹಿಕ ಚಿಕಿತ್ಸೆ ನೀಡುವ ಥೆರಾಪ್ಯೂಟಿಕಲ್ ಉಪಕರಣವಾಗಿದೆ. ಈ ಅಲ್ಟ್ರಾಸೌಂಡ್ ತಂತ್ರಜ್ಞಾನವನ್ನು ಬಳಸುವ ಮೂಲಕ ಶ್ವಾಸಕೋಶದ ರೋಗಗಳ ನಿಖರ ಮಾಹಿತಿ ಪಡೆಯಬಹುದು. ಥೊರಾಸಿಕ್ ರೋಗಗಳನ್ನು ಪತ್ತೆ ಮಾಡಲು ಈ ಚಿಕಿತ್ಸಾ ಕ್ರಮ ಅನುಕೂಲವಾಗಿದೆ.
ಇಬಿಯುಎಸ್ ಸೇವೆಯನ್ನು ಆಸ್ಪತ್ರೆಯಲ್ಲಿ ಅಳವಡಿಸುವ ಮೂಲಕ ಜನಸಮುದಾಯಕ್ಕೆ ಉತ್ತಮ ಆರೋಗ್ಯ ಸೇವೆ ನೀಡಲು ನಾವು ಬದ್ಧರಾಗಿದ್ದೇವೆ. ಜನರ ಆರೋಗ್ಯ ರಕ್ಷಣೆಯಲ್ಲಿ ಮುಂಚೂಣಿಯಲ್ಲಿರುವ ಸುಚಿರಾಯು ಆಸ್ಪತ್ರೆಯು ಎಂಡೊಬ್ರೊಂಕಿಯಲ್ ಅಲ್ಟ್ರಾಸೌಂಡ್ ಚಿಕಿತ್ಸಾ ಕ್ರಮವನ್ನು ಪ್ರಾರಂಭಿಸಿ ಇನ್ನಷ್ಟು ಆಧುನಿಕತೆಯನ್ನು ತೋರ್ಪಡಿಸಿದೆ.
ಆಸ್ಪತ್ರೆಯಲ್ಲಿ ವಿಶೇಷ ಚಿಕಿತ್ಸಾ ಕ್ರಮಗಳನ್ನು ವಿಸ್ತರಿಸಬೇಕು ಹಾಗೂ ನೂತನ ಪ್ರಯತ್ನಗಳ ಮೂಲಕ ರೋಗಿಗಳಿಗೆ ಹೆಚ್ಚಿನ ಅನುಕೂಲ ಕಲ್ಪಿಸಬೇಕು ಎಂಬ ಆಶಯಕ್ಕೆ ಇದು ಪೂರಕವಾಗಿದೆ. ಈ ಚಿಕಿತ್ಸಾ ವಿಧಾನದ ಮೂಲಕ ಅಸ್ತಮಾ, ಲಂಗ್ ಕ್ಯಾನ್ಸರ್ ಸೇರಿದಂತೆ ವಿವಿಧ ರೋಗಗಳನ್ನು ಪತ್ತೆ ಹಚ್ಚಬಹುದಾಗಿದೆ ಎಂದರು.
ಸುಚಿರಾಯು ಆಸ್ಪತ್ರೆಯು ಹುಬ್ಬಳ್ಳಿ ಧಾರವಾಡ ಹಾಗೂ ಸುತ್ತಮುತ್ತಲಿನ ಅನೇಕ ಗ್ರಾಮೀಣ ಪ್ರದೇಶದ ರೋಗಿಗಳಿಗೆ ಅತ್ಯುತ್ತಮ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುತ್ತಿದೆ. ನುರಿತ ತಜ್ಞ ವೈದ್ಯರು, ಆರೋಗ್ಯ ಕ್ಷೇತ್ರದ ತಂತ್ರಜ್ಞರು ಹಾಗೂ ಸಿಬ್ಬಂದಿ ನೆರವಿನಿಂದ ವೈದ್ಯಕಿಯ ತಂತ್ರಜ್ಞಾನಗಳನ್ನು ಬಳಸಿಕೊಂಡು ಜನರಿಗೆ ಉತ್ಕೃಷ್ಟ ಆರೋಗ್ಯ ಸೇವೆ ನೀಡಲಾಗುತ್ತಿದೆ ಎಂದರು.
ಆಸ್ಪತ್ರೆಯ ರಿಕ್ಕಿ ಖೋಡೆ, ಪ್ರದಿಪಕುಮಾರ ಗೋಷ್ಠಿಯಲ್ಲಿದ್ದರು.