ಎಂಡೋ ಪಾಲನಾ ಕೇಂದ್ರ ಚಟುವಟಿಕೆ ಆರಂಭ

endo new
Published on

ಕಡಬ: ಕರೊನಾ ಮಹಾಮಾರಿಯಿಂದಾಗಿ ಹಲವು ತಿಂಗಳಿಂದ ಸ್ಥಗಿತಗೊಂಡಿದ್ದ ಕೊಲ ಎಂಡೋಪಾಲನಾ ಕೇಂದ್ರದ ಚಟುವಟಿಕೆಗಳು ಪ್ರಾರಂಭಗೊಂಡಿವೆ. ಪಾಲನಾ ಕೇಂದ್ರದ ವಿದ್ಯಾರ್ಥಿಗಳ ಮನೆಗೆ ತೆರಳಿ ಶೈಕ್ಷಣಿಕ ಮತ್ತು ವೈದ್ಯಕೀಯ ಸೇವೆ ನೀಡಲಾಗುತ್ತಿದೆ.

ಕರ್ನಾಟಕ ಸರ್ಕಾರದ ಅಧೀನದ ಕೊಲ ಎಂಡೋ ಪಾಲನಾ ಡೇ ಕೇರ್ ಸೆಂಟರನ್ನು ಒಂದು ವರ್ಷದಿಂದ ಸಿಯೋನ್ ಸಂಸ್ಥೆ ಮುನ್ನಡೆಸುತ್ತಿದೆ. ಮಾರ್ಚ್ ತಿಂಗಳಿನಿಂದ ಲಾಕ್‌ಡೌನ್‌ನಿಂದಾಗಿ ಪಾಲನಾ ಕೇಂದ್ರದ ಎಲ್ಲ ಚಟುವಟಿಕೆಗಳು ಸ್ಥಗಿತಗೊಂಡಿದ್ದವು.

ಪಾಲನಾ ಕೇಂದ್ರದಲ್ಲಿ 40 ಸಂತ್ರಸ್ತ ವಿದ್ಯಾರ್ಥಿಗಳು ದಾಖಲಾತಿಯಾಗಿದ್ದಾರೆ. ಈಗಾಗಲೇ ವಾರದ ಎರಡು ದಿನ ಫಿಸಿಯೋಥೆರಪಿ ನೀಡುವ ವೈದ್ಯರು, ಸ್ಪೀಚ್ ಆ್ಯಂಡ್ ಹಿಯರಿಂಗ್, ವಿಶೇಷ ಶಿಕ್ಷಣ, ಕೌಶಲ ತರಬೇತಿ ನೀಡುವ ಶಿಕ್ಷಕರು ವಿದ್ಯಾರ್ಥಿಗಳ ಮನೆ ಮನೆ ಭೇಟಿ ನೀಡಿ ಪಾಲನಾ ಕೇಂದ್ರದಲ್ಲಿ ನೀಡುತ್ತಿದ್ದ ಎಲ್ಲ ಸೇವೆಗಳನ್ನು ಒದಗಿಸುತ್ತಿದ್ದಾರೆ.

ಕೊಲ ಎಂಡೋ ಪಾಲನಾ ಕೇಂದ್ರದ ವ್ಯಾಪ್ತಿಯ ಪ್ರದೇಶಗಳಾದ ಆಲಂಕಾರು, ಕುಂತೂರು, ಪೆರಾಬೆ, ರಾಮಕುಂಜ, ಹಳೆನೇರಂಕಿ, ಹಿರೆಬಂಡಾಡಿ, ಪೆರಿಯಡ್ಕ ಮುಂತಾದ ಪ್ರದೇಶದಲ್ಲಿರುವ ಸಂತ್ರಸ್ತ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡುವ ಕೆಲಸ ಪ್ರಾರಂಭಗೊಂಡಿದೆ.

ಲಾಕ್‌ಡೌನ್ ಬಳಿಕ ಸಂತ್ರಸ್ತರು ಫಿಸಿಯೋಥೆರಪಿ ಚಿಕಿತ್ಸೆಯಿಂದ ವಂಚಿತರಾಗಿದ್ದರು. ಪರಿಣಾಮ ಎಲ್ಲ ಸಂತ್ರಸ್ತರ ದೈಹಿಕ ಆರೋಗ್ಯದಲ್ಲಿ ಬಹಳಷ್ಟು ಬದಲಾವಣೆಯಾಗಿವೆ. ಇವರ ಆರೋಗ್ಯ ಸುಧಾರಣೆಗೆ ಮುಂದಿನ ದಿನಗಳಲ್ಲಿ ನಿರಂತರ ತರಗತಿ ಅಗತ್ಯವಿದೆ. ಲಾಕ್‌ಡೌನ್ ಸಮಯದಲ್ಲಿಯೂ ಇವರಿಗೆ ಚಿಕಿತ್ಸೆ ನೀಡಲು ಉತ್ಸುಕನಾಗಿದ್ದೆ. ಆದರೆ ಕರೊನಾ ಹರಡುವಿಕೆ ಭೀತಿ ಆವರಿಸಿದ ಪರಿಣಾಮ ಚಿಕಿತ್ಸೆ ನೀಡಲಾಗಲಿಲ್ಲ ಎಂಬ ಬೇಸರವಿದೆ. ಈಗ ಫಿಸಿಯೋಥೆರಪಿ ಚಿಕಿತ್ಸೆ ಆರಂಭಿಸಿದ್ದು, ಆರೋಗ್ಯವನ್ನು ಮತ್ತೆ ಹಿಂದಿನಂತೆ ಮಾಡಲು ಪ್ರಾಮಾಣಿಕ ಸೇವೆ ನೀಡಲು ಬದ್ಧನಾಗಿದ್ದೇನೆ.

ರಶ್ಮೀ, ಫಿಸಿಯೋಥೆರಪಿಸ್ಟ್, ಕೊಲ ಎಂಡೋ ಪಾಲನಾ ಕೇಂದ್ರ

ನನ್ನ ಮೂರು ಮಕ್ಕಳನ್ನು ಕೊಲ ಎಂಡೋ ಪಾಲನಾ ಕೇಂದ್ರಕ್ಕೆ ದಾಖಲಿಸಿ ಪಾಲನಾ ಕೇಂದ್ರದಲ್ಲಿ ಸಿಗುವ ವೈದ್ಯಕೀಯ ಹಾಗೂ ಶೈಕ್ಷಣಿಕ ಸೌಲಭ್ಯಗಳನ್ನು ಪಡೆಯುತ್ತಿದ್ದೇನೆ. ನನ್ನ ಮೂವರು ಮಕ್ಕಳು ಫಿಸಿಯೋಥೆರಪಿ ಚಿಕಿತ್ಸೆ ಪಡೆದ ಕಾರಣ ಆರೋಗ್ಯದಲ್ಲಿ ಮಹತ್ತರ ಬದಲಾವಣೆಗಳಾಗಿತ್ತು. ಐದು ತಿಂಗಳಿಂದ ಫಿಸಿಯೋಥೆರಪಿ ಚಿಕಿತ್ಸೆ ದೊರೆಯದ ಪರಿಣಾಮ ಆರೋಗ್ಯದಲ್ಲಿ ಬಹಳಷ್ಟು ಏರುಪೇರುಗಳಾಗಿವೆ.

ರಾಜೀವಿ ಬುಡೇರಿಯಾ ಎಂಡೋ ಸಂತ್ರಸ್ತ ಮಕ್ಕಳ ತಾಯಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net