

ಮೈಸೂರು: ಸಂವಿಧಾನದ ಮಹತ್ವ, ದೇಶದ ಯೋಧರ ಕೆಚ್ಚೆದೆಯ ಹೋರಾಟ, ರಾಷ್ಟ್ರೀಯ ಭಾವೈಕ್ಯತೆ, ಕನ್ನಡದ ವೈಭವ ಶುಕ್ರವಾರ ನಗರದ ಬಯಲುರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ದಸರಾ ಯುವ ಸಂಭ್ರಮದಲ್ಲಿ ಅನಾವರಣಗೊಂಡಿತು. ಯುವ ಸಂಭ್ರಮದ ಕೊನೆಯ ದಿನವಾದ ಶುಕ್ರವಾರ ಯುವಜನರು ಹಾಡು, ನೃತ್ಯಗಳಿಗೆ ಸಂಭ್ರಮಿಸಿದರು.
ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಹೋರಟದ ಬದುಕು, ಭಗತ್ ಸಿಂಗ್ ಹಾಗೂ ಸಂಗೋಳ್ಳಿ ರಾಯಣ್ಣನ ದೇಶಪ್ರೇಮ ಮತ್ತು ಸ್ವಾತಂತ್ರೃ ಹೋರಟ, ಕರ್ನಾಟಕದ ಏಕೀಕರಣದ ಬಗ್ಗೆ ಮೈಸೂರಿನ ಕೌಟಿಲ್ಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಅಮೋಘ ನೃತ್ಯ ಪ್ರದರ್ಶಿಸಿದರು.
ಕುಶಾಲನಗರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ದೇಶಕ್ಕೆ ರಕ್ಷಾಕವಚವಾಗಿರುವ ಯೋಧರ ಸಾಹಸ ಮತ್ತು ಅವರ ನಿಸ್ವಾರ್ಥ ಸೇವೆಯ ಬಗ್ಗೆ ಜೇಮ್ಸ್ ಚಿತ್ರದ ಸಲಾಂ ಸೋಲ್ಜರ್ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಯೋಧರ ತ್ಯಾಗವನ್ನು ಯುವ ಸಮೂಹಕ್ಕೆ ತಿಳಿಸಿದರು.
ಬೆಂಗಳೂರಿನ ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಆ್ಯಂಡ್ ಸೈನ್ಸ್ ಕಾಲೇಜಿನ ತಂಡ ಕನ್ನಡಿಗರ ಸಾಹಸ, ಶೌರ್ಯ ಹಾಗೂ ವೈಭವವನ್ನು ಸಿಂಹಾದ್ರಿಯ ಸಿಂಹ ಚಿತ್ರದ ಹಾಡಿಗೆ ಹೆಜ್ಜೆ ಹಾಕಿ ರಂಜಿಸಿದರೆ, ರಾಯಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮಹಿಳಾ ಸಬಲೀಕರಣದ ಬಗ್ಗೆ ಅದ್ಬುತ ನೃತ್ಯ ಪ್ರದರ್ಶಿಸಿದರು.
ಬೆಂಗಳೂರಿನ ಶ್ರೀ ದಕ್ಷ ಅಕಾಡಮಿ ಹಾಗೂ ಬಳ್ಳಾರಿಯ ಎಸ್‌ಜಿಟಿ ಕಾಲೇಜಿನ ವಿದ್ಯಾರ್ಥಿಗಳ ಸಮೂಹವು ಚೆಲ್ಲಿದರೂ ಮಲ್ಲಿಗೆಯಾ, ಜೋಗಿ ಚಿತ್ರದ ಹಾಡಿಗೆ ನೃತಿಸುವ ಮೂಲಕ ಕರ್ನಾಟಕದ ಜನಪದ ಪರಂಪರೆ ಹಾಗೂ ದೇಶೀಯ ಸಂಸ್ಕೃತಿಯನ್ನು ನೃತ್ಯದ ಮೂಲಕ ತಿಳಿಸಿ ಯುವ ಸಮೂಹ ಕುಣಿಯುವಂತೆ ಮಾಡಿದರು.
ಹೊಳೆನರಸೀಪುರದ ಹೊಸ ಬಾಲಕಿಯರ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮಾರಮ್ಮ ಮತ್ತು ಮಾದಪ್ಪ ಬಗ್ಗೆ ಕಂಸಾಳೆ ನೃತ್ಯದ ಮೂಲಕ ರಂಜಿಸಿದರು. ಮೈಸೂರಿನ ಮಾತೃಮಂಡಳಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅಗ್ರಪೂಜಿತ ಗಣೇಶನನ್ನು ಸ್ಮರಣೆ ಮಾಡುತ್ತ ಅಗ್ನಿಪತ್ ಚಿತ್ರದ ದೇವಾ ಶ್ರೀ ಗಣೇಶ ಹಾಡಿಗೆ ಮನಮೋಹಕವಾಗಿ ಹೆಜ್ಜೆ ಹಾಕಿದರು.
ಗುಂಡ್ಲುಪೇಟೆಯ ಬೇಗೂರಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ಕೆಚ್ಚೆದೆಯ ಕನ್ನಡಿಗರ ಮಿಂಚಿನ ದಸರಾ ಸಂಭ್ರಮೋತ್ಸವವನ್ನು ಪಲ್ಲಕ್ಕಿ ಹಾಗೂ ವೀರಕನ್ನಡಿಗ ಚಿತ್ರದ ಹಾಡುಗಳಿಗೆ ಪುನೀತ್ ರಾಜ್‌ಕುಮಾರ್ ಭಾವಚಿತ್ರ ಹಿಡಿದು ತಮ್ಮ ಅಮೋಘ ನೃತ್ಯದ ಮೂಲಕ ಪ್ರಸ್ತುತ ಪಡಿಸಿದರು.
ವೀರ ಕನ್ನಡಿಗ ಚಿತ್ರದ ಜೀವ ಕನ್ನಡ ದೇಹ ಕನ್ನಡ, ಮಲ್ಲ ಚಿತ್ರದ ಕರುನಾಡೆ ಕೈ ಚಾಚಿದೆ ನೋಡೆ ಹಾಗೂ ಸಮರ ಚಿತ್ರದ ಕನ್ನಡದ ಮಾತು ಚೆನ್ನ ಹಾಡುಗಳಿಗೆ ಹೆಜ್ಜೆ ಹಾಕುವ ಮೂಲಕ ಕನ್ನಡ ನಾಡಿನ ಸಂಭ್ರಮವನ್ನು ತೋರಿಸಿದ ಮೈಸೂರಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ಯುವ ಸಮೂಹ ಹೆಜ್ಜೆ ಹಾಕುವಂತೆ ಮಾಡಿದರು.
ಬೆಟ್ಟದಪುರದ ಎಸ್‌ಎಂಎಸ್ ಪದವಿ ಪೂರ್ವ ಕಾಲೇಜಿನ ತಂಡದಿಂದ ರಾಷ್ಟ್ರ ರಕ್ಷಣೆ ಮಾಡುತ್ತಿರುವ ದೇಶದ ಹೆಮ್ಮೆ ಯೋಧರ ಬಗ್ಗೆ ಕೆಜಿಎಫ್ ಹಾಗೂ ಜೇಮ್ಸ್ ಚಿತ್ರದ ಹಾಡುಗಳಿಗೆ ಮನೋಜ್ಞ ನೃತ್ಯದ ಮೂಲಕ ರಂಜಿಸಿದರು.
ರಾಮನಗರದ ಜ್ಞಾನವಿಕಾಸ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೆಜ್‌ಮೆಂಟ್ ಸ್ಟಡೀಸ್ ಆ್ಯಂಡ್ ಕಾಮರ್ಸ್ ಕಾಲೇಜಿನ ವಿದ್ಯಾರ್ಥಿಗಳು ಸಂಗೋಳ್ಳಿ ರಾಯಣ್ಣನ ಸಾಹಸ ಮತ್ತು ಹೋರಾಟದ ಬಗ್ಗೆ ತಮ್ಮ ಅದ್ಬುತ ನೃತ್ಯ ಸಂಯೋಜನೆ ಮೂಲಕ ಯುವ ಸಮೂಹಗಳ ಮುಂದೆ ಪ್ರದರ್ಶಿಸಿದರು.
ಕವಿರತ್ನ ಕಾಳಿದಾಸ ಚಿತ್ರದ ಹಾಡಿನೊಂದಿಗೆ ಬಂದ ಬೆಂಗಳೂರಿನ ಶಾಂತಿಧಾಮ ಕಾಲೇಜಿನ ವಿದ್ಯಾರ್ಥಿಗಳು ನವದುರ್ಗೆಯರ ದರ್ಶನದ ಮೂಲಕ ಸಭಿಕರನ್ನು ಭಕ್ತಿಯ ಕಡಲಲ್ಲಿ ತೇಲುವಂತೆ ನರ್ತಿಸಿದರೆ, ಬೆಂಗಳೂರಿನ ಆಕ್ಸ್ ಬ್ರಿಡ್ಜ್ ಬಿಜಿನೆಸ್ ಸ್ಕೂಲ್‌ನ ವಿದ್ಯಾರ್ಥಿಗಳ ತಂಡವು ನಾನಿ ಚಿತ್ರದ ಗೀತೆಗೆ ನಯನ ಮನೋಹರವಾಗಿ ಹೆಜ್ಜೆ ಹಾಕಿದರು.
ನಗರದ ಜೆಎಸ್‌ಎಸ್ ವಾಕ್ ಮತ್ತು ಶ್ರವಣ ಸಂಸ್ಥೆಯ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಇತ್ತೀಚೆಗೆ ದೇಶ ತೋರುತ್ತಿರುವ ಸಾಧನೆಯನ್ನು ನೃತ್ಯದ ಮೂಲಕ ಅನಾವರಣಗೊಳಿಸಿದರು. ನಗರದ ಮಿಮಿಕ್ರಿ ಶ್ಯಾಂ ಅವರು ಪುನೀತ್ ರಾಜ್‌ಕುಮಾರ್, ದರ್ಶನ್ ಹಾಗೂ ಶಿವರಾಜ್ ಕುಮಾರ್ ಅವರ ಮಿಮಿಕ್ರಿ ಮಾಡುವುದರ ಮೂಲಕ ಯುವ ಸಮೂಹವನ್ನು ರಂಜಿಸಿದರು.