48 ಗಂಟೆಗಳ ಅಹೋರಾತ್ರಿ ಧರಣಿ ಅಂತ್ಯ; ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ

mysore
Published on

ಮೈಸೂರು: ತೆರಿಗೆ ಹಂಚಿಕೆಯಲ್ಲಿ ಕೇಂದ್ರ ಸರ್ಕಾರವು ರಾಜ್ಯಕ್ಕೆ ಅನ್ಯಾಯ ಮಾಡಿದೆ ಎಂದು ಆರೋಪಿಸಿ ಕರ್ನಾಟಕ ಜನರಂಗ ಸಂಘಟನೆ ಕೈಗೊಂಡಿದ್ದ ನಿರಂತರ 48 ಗಂಟೆಗಳ ಅಹೋರಾತ್ರಿ ಧರಣಿ ಶುಕ್ರವಾರ ಮಧ್ಯಾಹ್ನ ಕೊನೆಗೊಂಡಿತು.


ನಗರದ ಚಿಕ್ಕಗಡಿಯಾರ ವೃತ್ತದಲ್ಲಿ ನಡೆದ ಧರಣಿ ಸಾಂಸ್ಕೃತಿಕ ಪ್ರತಿರೋಧದ ಸ್ವರೂಪದಲ್ಲಿ ನಡೆಯಿತು. ಎರಡೂ ದಿನವೂ ಗಾಯಕರು ಹೋರಾಟದ ಗೀತೆಗಳನ್ನು ಹಾಡಿ ವಿರೋಧ ವ್ಯಕ್ತಪಡಿಸಿದರು.


ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್, ರಾಜ್ಯಕ್ಕೆ ದೊರೆಯಬೇಕಿರುವ ನ್ಯಾಯಯುತ ತೆರಿಗೆಯನ್ನು ಕೇಳಿದರೆ ದೇಶ ವಿಭಜಕ ಪಟ್ಟ ಕಟ್ಟಲಾಗುತ್ತಿದೆ. ನಮ್ಮ ಪಾಲು ಕೇಳುವುದರಲ್ಲಿ ತಪ್ಪೇನಿದೆ ? ಕೇಳುವ ಸ್ವಾತಂತ್ರ್ಯವೂ ಇಲ್ಲವೇ? ಎಂದು ಪ್ರಶ್ನಿಸಿದರು.


ರಾಜ್ಯದಿಂದ 4 ಲಕ್ಷ ಕೋಟಿ ರೂ. ಜಿಎಸ್‌ಟಿ ತೆರಿಗೆ ಸಂಗ್ರಹವಾಗುತ್ತದೆ. ಕಾನೂನಿನ ಪ್ರಕಾರ ನೀಡಬೇಕಾದ ತೆರಿಗೆಯನ್ನು ನೀಡುತ್ತಿಲ್ಲ. 29 ರೂ.ಗೆ 1 ಕೆಜಿ ಅಕ್ಕಿ ಕೊಡುತ್ತಿದ್ದಾರೆ. ಅಂಗಡಿಯಲ್ಲಿ 30 ರೂ.ಗೆ ಸಿಗುತ್ತಿದೆ. ಜನರಿಗೆ ಟೋಪಿ ಹಾಕುತ್ತಿದ್ದಾರೆ. ಭಾರತದ ಕಿಚ್ಚು ಮೈಸೂರಿಂದ ಆರಂಭವಾಗಲಿ, ಮೇಲಿನವರಿಗೂ ಕೇಳಿಸುವಂತಾಗಲಿ ಎಂದು ಹೇಳಿದರು.


ಕೇಂದ್ರ ಸರ್ಕಾರ ರಾತ್ರಿ ಮಲಗಿ ಬೆಳಗ್ಗೆ ಏಳುವುದಕ್ಕೂ ಜಿಎಸ್‌ಟಿ ಪಾವತಿಸುವ ಪರಿಸ್ಥಿತಿ ತಂದಿದೆ. ಎಲೆ, ಅಡಕೆ, ಸುಣ್ಣಕ್ಕೂ ತೆರಿಗೆ ಪಾವತಿಸಬೇಕಾಗಿದೆ ಎಂದು ಕಿಡಿಕಾರಿದರು.


ಪ್ರಧಾನಿ ನರೇಂದ್ರ ಮೋದಿ ಅಸ್ತ್ರ ಐಟಿ ರೈಡ್ ಮಾಡುವುದು. ದೇಶದ ನಾಯಕತ್ವ ಈ ಮಟ್ಟಿಗೆ ಇಳಿದಿದೆ. ವಿಶ್ವಗುರು ಎನ್ನಿಸಿಕೊಳ್ಳುವ ಮೋದಿಯಿಂದ ಸ್ವಾತಂತ್ರ್ಯ ಹತ್ತಿಕ್ಕುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು.


35 ವರ್ಷದೊಳಗಿನ ಯುವಕರಿಗೆ ಸ್ವಾತಂತ್ರ್ಯ ಹೋರಾಟವೂ ಗೊತ್ತಿಲ್ಲ. ಮೋದಿ ಹೇಳಿದ್ದೆ ಸತ್ಯವೆಂದು ನಂಬುತ್ತಿದ್ದಾರೆ. ಯುವ ಕಾಂಗ್ರೆಸ್‌ನಲ್ಲಿದ್ದರೂ ಜೆ.ಪಿ.ನಾರಾಯಣ ಬೆಂಬಲಿಸಿ ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ಮಾಡಿದೆವು. ಈಗ ಕಾಲೇಜುಗಳಿಂದ ವಿದ್ಯಾರ್ಥಿ ನಾಯಕರು ಬರುತ್ತಿಲ್ಲ ಎಂದರು.
ನೆಹರೂ ಆಧುನಿಕ ಭಾರತದ ರೂವಾರಿ. ಇಂದಿರಾ ಗಾಂಧಿ ಬಡವರಿಗೆ ಅನುಕೂಲ ಮಾಡಿದರು. ರಾಜೀವ್ ಗಾಂಧಿ ತಂತ್ರಜ್ಞಾನದಲ್ಲಿ ಕ್ರಾಂತಿ ಮಾಡಿದರು. ಈಗಿನ ಮೋದಿ ಅಂಬಾನಿ-ಅದಾನಿ ಹಿತ ಕಾಯುತ್ತಿದ್ದಾರೆ. ಇಬ್ಬರು ಉದ್ಯಮಿಗಳನ್ನು ಜಗತ್ತಿನ ಶ್ರೀಮಂತರನ್ನಾಗಿಸಿದ್ದಾರೆ ಎಂದು ಟೀಕಿಸಿದರು.


ಸವಿತಾ ಮಲ್ಲೇಶ್ ಮಾತನಾಡಿ, ಭಾರತದಲ್ಲಿ ಸರ್ವಾಧಿಕಾರಿ ಆಡಳಿತವಿದೆ. ಸಂವಿಧಾನಕ್ಕೆ ಅಪಮಾನವ ಮಾಡಲಾಗುತ್ತಿದೆ. ಇದರ ವಿರುದ್ಧ ದೊಡ್ಡ ಮಟ್ಟದ ಹೋರಾಟ ಮಾಡಬೇಕು. ಹೋರಾಟದ ಮುಂದುವರಿದ ಭಾಗವಾಗಿ ಮಾ.1 ಮತ್ತು 2ರಂದು ಕಲಾಮಂದಿರದಲ್ಲಿ ಹಿರಿಯ ಹೋರಾಟಗಾರ ಪ.ಮಲ್ಲೇಶ ಸ್ಮರಣೆಯಲ್ಲಿ ಭಾರತದ ಜನತಂತ್ರದ ಸಮಕಾಲೀನ ತಲ್ಲಣಗಳು ರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸಲಾಗುವುದು ಎಂದು ತಿಳಿಸಿದರು.
ಸಂಘಟನೆಯ ಸಂಚಾಲಕ ಟಿ.ಗುರುರಾಜ್ ಸಂವಿಧಾನದ ಪೀಠಿಕೆ ಓದಿದರು. ರಾಜ್ಯದ ನ್ಯಾಯಯುತ ತೆರಿಗೆಯನ್ನು ನೀಡುವತನಕ ಹೋರಾಟ ಮುಂದುವರಿಸುವ ನಿರ್ಣಯದೊಂದಿಗೆ ಅಹೋರಾತ್ರಿ ಧರಣಿಗೆ ತೆರೆ ಎಳೆಯಲಾಯಿತು.


ಪ್ರಗತಿಪರ ಚಿಂತಕ ನಾ.ದಿವಾಕರ, ಪ್ರೊ.ಪಿ.ವಿ. ನಂಜರಾಜ ಅರಸ್, ಜಿ.ಪಿ.ಬಸವರಾಜ್, ಮೈಮ್ ರಮೇಶ್, ಈಶ್ವರ್ ಚಕ್ಕಡಿ, ಮೋಹನ್‌ಕುಮಾರ್ ಗೌಡ, ಎಸ್.ಬಾಲಕೃಷ್ಣ, ಜಗದೀಶ್ ಸೂರ್ಯ, ಕೆ.ಆರ್.ಗೋಪಾಲಕೃಷ್ಣ, ಉಗ್ರನರಸಿಂಹೇಗೌಡ, ಪ್ರೊ.ಪಂಡಿತರಾಧ್ಯ ಮುಂತಾದವರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net