

ಕಿಕ್ಕೇರಿ: ಕೆ.ಎಸ್.ನರಸಿಂಹಸ್ವಾಮಿ ದಾಂಪತ್ಯಗೀತೆಯ ವಿಶ್ವಕೋಶವಾಗಿದ್ದಾರೆ ಎಂದು ಕೆ.ಎಸ್. ನರಸಿಂಹಸ್ವಾಮಿ ಟ್ರಸ್ಟ್ ಅಧ್ಯಕ್ಷ ಡಾ. ಕಿಕ್ಕೇರಿ ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.
ಇಲ್ಲಿನ ಸ್ಪಂದನಾ ಫೌಂಡೇಷನ್, ಬೆಂಗಳೂರಿನ ಆದರ್ಶ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ಶನಿವಾರ ಆಯೋಜಿಸಿದ್ದ ಕೆ.ಎಸ್. ನರಸಿಂಹಸ್ವಾಮಿ ಒಂದು ನೆನಪು ಕಾರ್ಯಕ್ರಮದಲ್ಲಿ ಗೀತನಮನ ಸಲ್ಲಿಸಿ ಮಾತನಾಡಿ, ನವಿರಾದ ಪ್ರೀತಿಯ ಜಗಕ್ಕೆ ಉಣಬಡಿಸಿದ ಒಲವಿನ ಕವಿ ಕೆಎಸ್‌ನ ಅವರಾಗಿದ್ದು, ಇವರು ಕಿಕ್ಕೇರಿಯಲ್ಲಿ ಹುಟ್ಟಿರುವುದೇ ಪುಣ್ಯ. ವಿಶ್ವ ಕುಟುಂಬವನ್ನು ಪ್ರೀತಿಯಲ್ಲಿ ಬೆಸೆದ ಮಹಾನ್ ಕವಿ. ಗಂಡು, ಹೆಣ್ಣು, ಅರ್ಧನಾರೀಶ್ವರ ಎನ್ನುತ್ತಿದ್ದ ಇವರ ಕಾವ್ಯದಲ್ಲಿ ಪ್ರಶ್ನೆ-ಉತ್ತರ ಎರಡನ್ನೂ ಕಾಣುವ, ಪ್ರೀತಿಸುವ ಗುಣ ಕಾಣಬಹುದಾಗಿದೆ. ತಮ್ಮ ನೈಜ ಬದುಕನ್ನು ನವಿರಾಗಿ ಕಾವ್ಯದ ಮೂಲಕ ಉಣಬಡಿಸಿದ್ದಾರೆ. ಕಿಕ್ಕೇರಿ ಸುತ್ತಮುತ್ತಲ ಪರಿಸರ, ಕೆರೆ(ಸಿರಿಗೆರೆ) ಇವರ ಕಾವ್ಯದ ಹೂರಣವಾಗಿರುವುದು ವಿಶೇಷ ಎಂದು ಹೇಳಿದರು.
ನವದಂಪತಿಗಳಿಗೆ ಪಿಸುಮಾತಿನ ಸವಿಯಾದ ಕಾವ್ಯವಾಗಿ ಮೈಸೂರು ಮಲ್ಲಿಗೆ ಇದೆ. ಕಿಕ್ಕೇರಿಯ ಕೆರೆಯನ್ನು ಸಿರಿಗೆರೆಯಾಗಿಸಿದ್ದಾರೆ. ಕಿಕ್ಕೇರಿಯಲ್ಲಿ ಆಟವಾಡಿದ ಸ್ಥಳ, ಪ್ರಕೃತಿಯ ಸೊಬಗು, ವೃತ್ತಿ ಬದುಕಿನ ಸಿಹಿಕಹಿ ನೆನಪು, ಪತ್ನಿ ಕೋಪಕ್ಕೆ ಕಾವ್ಯದ ಮೂಲಕ ಶಮನ ಎಲ್ಲವೂ ಅದ್ಬುತವಾಗಿದೆ. ಸರಳತೆ ಉಸಿರಾಗಿಸಿಕೊಂಡು ಬಡತನದಲ್ಲಿ ಹುಟ್ಟಿ, ಸಾವು ಕಂಡು ಎಲ್ಲರ ಬದುಕಿಗೆ ಕಾವ್ಯದ ಮೂಲಕ ಶ್ರೀಮಂತಿಕೆ ತುಂಬಿದ ನವೋದಯ ಕಾಲದ ಕವಿ ಸ್ಮರಣೆ ನಿರಂತರವಾಗಿರಬೇಕಿದೆ ಎಂದು ಆಶಿಸಿದರು.
ನಮ್ಮೂರಿನ ಕವಿಯ ನೆನಪು ಮಾಸದಂತಿರಲು ಹುಟ್ಟಿದ ಮನೆ ರಾಷ್ಟ್ರೀಯ ಸ್ಮಾರಕವಾಗಬೇಕಿದೆ. ನಡೆದಾಡಿದ ಸ್ಥಳಗಳನ್ನು ಮೆಲುಕು ಹಾಕುವ ಕೆಲಸವಾಗಬೇಕಿದೆ. ಕಾವ್ಯಸ್ಫೂರ್ತಿಯಾಗಿದ್ದ ಇಲ್ಲಿನ ಕೆರೆಗೆ ಸಿರಿಗೆರೆ ಸರೋವರ ಎಂದು ನಾಮಕರಣವಾದರೆ ಇಡೀ ಭಾರತದಲ್ಲಿ ಕವಿ ಹೆಸರಿನಲ್ಲಿ ಆಗುವ ಮೊದಲ ಸರೋವರ ಇದಾಗಲಿದೆ. ಕೆಎಸ್‌ನ ಉದ್ಯಾನ ನಿರ್ಮಾಣವಾಗಿ ವರ್ಷಪೂರ್ತಿ ವಿವಿಧ ಜಾತಿಯ ಮಲ್ಲಿಗೆ ಕಂಪು ಸೂಸಬೇಕಿದೆ. ಕೆಎಸ್‌ನ ಸುಂದರವಾದ ಬಯಲು ರಂಗಮಂದಿರ(ಹ್ಯಾಪಿ ಥಿಯೇಟರ್) ನಿರ್ಮಾಣ, ನಿರಂತರವಾಗಿ ಈ ಮಂದಿರದಲ್ಲಿ ರಂಗ ಚಟುವಟಿಕೆ, ಕಾವ್ಯಗಾಯನ ತರಬೇತಿಯಂಥ ಕಾರ್ಯಕ್ರಮ ನಡೆಯಬೇಕು ಎಂಬುದು ಕೆ.ಎಸ್.ನ. ಟ್ರಸ್ಟ್ ಆಶಯವಾಗಿದೆ ಎಂದು ಹೇಳಿದರು.
ಕೆಎಸ್‌ನ ಮನೆ ಸ್ಮಾರಕವಾಗಿಸಲು ಸರ್ಕಾರಕ್ಕೆ ಸಾಕಷ್ಟು ಮನವಿ ಮಾಡಲಾಗಿದೆ. ಕೆಎಸ್‌ನ ಒಂದು ಇತಿಹಾಸ, ಪರಂಪರೆ. ವಿದ್ಯಾರ್ಥಿಗಳಿಗೆ, ಕಾವ್ಯಾಸಕ್ತರಿಗೆ, ಯುವಕವಿಗಳಿಗೆ ಕೆಎಸ್‌ನ ಹುಟ್ಟಿದ ಊರು ಹೊಸ ಸಾಹಿತ್ಯಲೋಕವನ್ನು ಸೃಷ್ಟಿಸುವಂತಾಗಬೇಕು ಎಂಬ ಕನಸು ಟ್ರಸ್ಟ್ ಅಧ್ಯಕ್ಷನಾಗಿ ತನಗಿದೆ. ಕೆಎಸ್‌ನ ತಮ್ಮ ಕಾವ್ಯ ಉಡುಗೊರೆಯ ಬಲುದೊಡ್ಡ ಆಸ್ತಿಯನ್ನು ಬಿಟ್ಟು ಹೋಗಿದ್ದಾರೆ. ಇದನ್ನು ಜೋಪಾನ ಮಾಡಿ ಎಲ್ಲರ ಮನದಲ್ಲಿ ಕೆಎಸ್‌ನ ಉಳಿಯಲು ಸ್ಥಳೀಯರ ಸಹಕಾರ ಅವಶ್ಯವಾಗಿದೆ ಎಂಬ ಇಂಗಿತ ವ್ಯಕ್ತಪಡಿಸಿದರು.
ರೈತರನ್ನು ಪ್ರೀತಿಸುತ್ತಿದ್ದ ಕೆಎಸ್‌ನ ಹೆಸರಿನ ಸಿರಿಗೆರೆಯ ಸರೋವರ ಎಂಬ ಹೆಸರು ಕೆರೆಗೆ ನಾಮಾಂಕಿತವಾದರೆ ವರ್ಷಪೂರ್ತಿ ಕೆರೆ ತುಂಬಿ ತುಳುಕಲಿದೆ. ಬೋಟಿಂಗ್ ವ್ಯವಸ್ಥೆ ಆಗಬೇಕಿದೆ. ಹಿಂದೆ ಟ್ರಸ್ಟ್‌ನ ಆಶಯದಂತೆ ಸರ್ಕಾರ ಬ್ಯೂಟಿಪಿಕೇಷನ್ ಮಾಡಿ ಕ್ರಿಯಾ ಯೋಜನೆ ತಯಾರಿಸಿತ್ತು. ಕಾರಣಾಂತರದಿಂದ ನನೆಗುದಿಗೆ ಬಿದ್ದಿದೆ. ಮರುಜೀವ ಸಿಕ್ಕರೆ ಕಾವ್ಯಾಸಕ್ತರು ಸರ್ಕಾರವನ್ನು ಸದಾ ಚಿರಸ್ಮರಣೆ ಮಾಡಲಿದ್ದಾರೆ ಎಂದು ಆಶಿಸಿದರು.
ಕೆಎಸ್‌ನ ಗೀತೆಗಳಾದ ನಮ್ಮೂರು ಚೆಂದವೋ ನಿಮ್ಮೂರು ಚೆಂದವೋ, ಆಕಾಶಕ್ಕೆದು ನಿಂತ ಮೌನದಲಿ, ಸಿರಿಗೆರೆಯ ನೀರಿನಲಿ ಬಿರಿದ ತಾವರೆ ಮೊಗ್ಗಿನಲಿ, ಒಂದಿರುಳು ಕನಸಿನಲ್ಲಿ ಮತ್ತಿತರ ಗೀತೆಗಳನ್ನು ಮಕ್ಕಳೊಂದಿಗೆ ಹಾಡಿ ರಂಜಿಸಿದರು.
ಸಮಾಜ ಸೇವಾಕರ್ತರಾದ ತ್ರಿವೇಣಿ, ಕವಿತಾ, ಸವಿತಾ, ಶಾರದಾ ಇತರರು ಇದ್ದರು.