ಕೆರೆ ಒತ್ತುವರಿ ತೆರವುಗೊಳಿಸಿ

Channamma madamma Lake Ramanagara
Published on

ಸಕಲೇಶಪುರ: ತಾಲೂಕಿನ ಬೈಕೆರೆ ಗ್ರಾಮದಲ್ಲಿ ಜಿಪಂ ಮಾಜಿ ಉಪಾಧ್ಯಕ್ಷ ಪಲ್ಲವಿ ಶ್ರೀನಿವಾಸ್ ಸರ್ಕಾರಿ ಕೆರೆಯನ್ನು ಸಂಪೂರ್ಣ ಒತ್ತುವರಿ ಮಾಡಿ ಕೆರೆಗೆ ಸಂಪರ್ಕಿಸುವ ರಸ್ತೆಯನ್ನು ಬಂದ್ ಮಾಡಿದ್ದಾರೆಂದು ಪುರಸಭೆ ಮಾಜಿ ಸದಸ್ಯ ಎಸ್.ಜಿ ಲೋಕೇಶ್ ಆರೋಪಿಸಿದ್ದಾರೆ. ಗ್ರಾಮದ ಸರ್ವೇ ನಂಬರ್ 149 ರಲ್ಲಿ 27 ಗುಂಟೆಯಲ್ಲಿ ಪುರಾತನ ಸರ್ಕಾರಿ ಕೆರೆ ಇದೆ. ಈ ಕೆರೆಯನ್ನು ಸಮೀಪದ ಜನ್ನಾಪುರ ಹಾಗೂ ಬೈಕೆರೆ ಗ್ರಾಮಸ್ಥರು ಜಾನುವಾರುಗಳಿಗೆ ನೀರು ಕುಡಿಸಲು ಹಾಗೂ ಭತ್ತದ ಗದ್ದೆಗಳಿಗೆ ನೀರನ್ನು ಹರಿಸಲು ಬಳಸುತ್ತಿದ್ದಾರೆ. ಆದರೆ, ಕಳೆದ ಒಂದು ತಿಂಗಳಿನಿಂದ ಒತ್ತುವರಿ ಮಾಡಿಕೊಂಡು ಬೇಲಿ ನಿರ್ಮಿಸಿದ ಕಾರಣ ಕರೆ ಸಾರ್ವಜನಿಕರ ಉಪಯೋಗಕ್ಕಿಲ್ಲದಂತಾಗಿದೆ ಎಂದವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಕೆರೆಗೆ ಸಂಪರ್ಕಿಸುವ ರಸ್ತೆಗೆ ಕಾಂಪೌಡ್ ನಿರ್ಮಾಣ ಮಾಡಿ ರಸ್ತೆಗೆ ಮರದ ದಿಮ್ಮಿಗಳನ್ನು ಹಾಕಿ ಸಾರ್ವಜನಿಕರ ಸಂಚಾರಕ್ಕೂ ಅವಕಾಶ ಇಲ್ಲದಂತೆ ಮಾಡಿದ್ದಾರೆ. ಇದರಿಂದಾಗಿ ಪುರಾತನ ಕೆರೆ ಏಕವ್ಯಕ್ತಿ ಸ್ವಾಮ್ಯಕ್ಕೆ ಒಳಪಟ್ಟಂತೆ ಆಗಿದೆ. ಕೆರೆ ಸಂಪರ್ಕಿಸಿರುವ ರಸ್ತೆಯನ್ನು ಬಂದ್ ಮಾಡಿರುವುದರಿಂದ ಗ್ರಾಮಸ್ಥರು ತಮ್ಮ ಜಮೀನುಗಳಿಗೆ ಹೋಗಲು ತೊಂದರೆಯಾಗಿದೆ ಎಂದವರು ದೂರಿದರು.
ಕೆರೆಯನ್ನು ಮುಕ್ತಗೊಳಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ಸಂಪರ್ಕ ರಸ್ತೆಯಲ್ಲಿ ಹಾಕಿರುವ ಮರದ ದಿಮ್ಮಿಗಳನ್ನು ಸರ್ಕಾರ ವಶಕ್ಕೆ ಪಡೆಯಬೇಕು. ದಿಶ್ಯಾಂಕ್ ಮ್ಯಾಪ್ ತಿದ್ದುಪಡಿ ನಡೆದಿರುವ ಬಗ್ಗೆ ತನಿಖೆಯಾಗ ಬೇಕು ಎಂದು ಒತ್ತಾಯಿಸಿದರು. ಮುಖಂಡ ರಾಜು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net