

* 1,475 ಜಮೂಗಳ ಸರ್ವೇಯಲ್ಲಿ ಪತ್ತೆ
* 131 ಎಕರೆ ಜಾಗ ತೆರವು
* ಜಿಲ್ಲಾಡಳಿತಕ್ಕೆ ಭೂ ದಾಖಲೆಗಳ ಇಲಾಖೆ ವರದಿ
ಗಂಗಾಧರ್ ಬೈರಾಪಟ್ಟಣ ರಾಮನಗರ
ಜಿಲ್ಲೆಯ ಎಲ್ಲ 1,475 ಕೆರೆಗಳ ಸರ್ವೇ ಕಾರ್ಯ ಪೂರ್ಣಗೊಳಿಸಿರುವ ಸರ್ವೇ ಮತ್ತು ಭೂ ದಾಖಲೆಗಳ ಇಲಾಖೆಯು ಒಟ್ಟು 841 ಕೆರೆಗಳ ಬರೋಬ್ಬರಿ 1,174 ಎಕರೆ ಕೆರೆ ಪ್ರದೇಶ ಒತ್ತುವರಿಯಾಗಿರುವುದನ್ನು ಪತ್ತೆ ಹಚ್ಚಿ, ಜಿಲ್ಲಾಡಳಿತಕ್ಕೆ ವರದಿ ನೀಡಿದೆ.
ಯಾವುದೇ ಗ್ರಾಮದ ನೀರಿನ ಸೆಲೆ ಅಲ್ಲಿನ ಕೆರೆ-ಕಟ್ಟೆಗಳೇ ಆಗಿರುತ್ತದೆ. ಇತ್ತೀಚಿನ ವರ್ಷಗಳಲ್ಲಿ ಇವುಗಳ ಒತ್ತುವರಿ ಹೆಚ್ಚಾದ ಕಾರಣ, ಒತ್ತುವರಿ ತೆರವಿಗೆ ಆಗ್ರಹ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಎರಡ್ಮೂರು ವರ್ಷಗಳಿಂದಲೂ ಜಿಲ್ಲೆಯಲ್ಲಿ ಕೆರೆಗಳ ಒತ್ತುವರಿ ತೆರವಿಗೆ ಪ್ರಯತ್ನ ನಡೆಯುತ್ತಿದ್ದು. ಇದರ ಭಾಗವಾಗಿ ಸರ್ವೇ ಮತ್ತು ಭೂ ದಾಖಲೆಗಳ ಇಲಾಖೆಯು ಜಿಲ್ಲೆಯಲ್ಲಿರುವ ಒಟ್ಟು 1,475 ಕೆರೆಗಳ ಸರ್ವೇ ಕೈಗೊಳ್ಳುವ ಮೂಲಕ ಒಟ್ಟು 841 ಕೆರೆಗಳ 1,174 ಎಕರೆ ಕೆರೆ ಪ್ರದೇಶ ಒತ್ತುವರಿಯಾಗಿರುವುದನ್ನು ಪತ್ತೆ ಹಚ್ಚಿದ್ದು, ಭೂ ದಾಖಲೆಗಳ ಇಲಾಖೆ ಗುರುತಿಸಿರುವ ಒತ್ತುವರಿಯನ್ನು ತೆರವುಗೊಳಿಸುವುದು ಈಗ ಜಿಲ್ಲಾಡಳಿತಕ್ಕೆ ಸವಾಲೆನಿಸಲಿದೆ.
ಸಾವಿರಕ್ಕೂ ಹೆಚ್ಚು ಕೆರೆ
ಜಿಲ್ಲೆಯಲ್ಲಿ ಒಟ್ಟು 1,475 ಕೆರೆಗಳಿವೆ. ಇವುಗಳಲ್ಲಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ 110, ಜಿಪಂ ವ್ಯಾಪ್ತಿಯಲ್ಲಿ 1301, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 61 ಮತ್ತು ಕಾವೇರಿ ನೀರಾವರಿ ನಿಗಮ ವ್ಯಾಪ್ತಿಯಲ್ಲಿ 3 ಕೆರೆಗಳಿವೆ. ಇವುಗಳಲ್ಲಿ ಬಹುತೇಕ ಎಲ್ಲ ಕೆರೆಗಳು ಒತ್ತುವರಿಯಾಗಿದ್ದು, ಒತ್ತುವರಿ ತೆರವುಗೊಳಿಸುವ ಸಾಹಸಕ್ಕೆ ಸಂಬಂಧಪಟ್ಟ ಇಲಾಖೆಗಳು ಕೈ ಹಾಕಿರಲೇ ಇಲ್ಲ. ಆದರೆ, ಕಳೆದ ಬಿಜೆಪಿ ಸರ್ಕಾರದಲ್ಲಿ ಕೆರೆಗಳ ಒತ್ತುವರಿ ತೆರವು ಆಗಲೇಬೇಕು ಎನ್ನುವ ಕಟ್ಟುನಿಟ್ಟಿನ ಆದೇಶ ಹಿನ್ನೆಲೆಯಲ್ಲಿ ಕೆರೆಗಳ ಸರ್ವೇ ಕೈಗೊಳ್ಳಲು ಸೂಚಿಸಲಾಗಿತ್ತು. ಪರಿಣಾಮ ಭೂ ದಾಖಲೆಗಳ ಇಲಾಖೆಯು ಸಿಬ್ಬಂದಿ ಕೊರತೆ ನಡುವೆಯೇ ತ್ವರಿತಗತಿಯಲ್ಲಿ ಎಲ್ಲ ಕೆರೆಗಳ ಸರ್ವೇ ಕೈಗೊಂಡು, ಒಟ್ಟು 1174 ಎಕರೆ ಪ್ರದೇಶ ಒತ್ತುವರಿಯಾಗಿರುವುದನ್ನು ಬಯಲಿಗೆಳೆದಿದೆ.
ತೆರೆವಿಗೆ ಬೇಕಿದೆ ವೇಗ
ಒಂದೆಡೆ ಭೂ ದಾಖಲೆಗಳ ಇಲಾಖೆ ಸಿಬ್ಬಂದಿ ಕೊರತೆ, ಕೆಲಸದೊತ್ತಡದ ನಡುವೆಯೇ ಸರ್ವೇ ಕಾರ್ಯವನ್ನು ಪೂರ್ಣಗೊಳಿಸಿದೆ. ಸರ್ವೇ ಪೂರ್ಣಗೊಂಡ ಕೆರೆಗಳ ಮಾಹಿತಿಯನ್ನು ಜಿಲ್ಲಾಡಳಿತಕ್ಕೂ ನೀಡಿದೆ. ಇದನ್ನು ತಾಲೂಕು ಆಡಳಿತಕ್ಕೆ ನೀಡಿರುವ ಜಿಲಾಡಳಿತ ಕೆರೆಗಳ ಒತ್ತುವರಿ ತೆರವಿಗೆ ಸೂಚಿಸಿದೆ. ಸದ್ಯ ಒತ್ತುವರಿಯಾಗಿರುವ ಒಟ್ಟು ಪ್ರದೇಶದಲ್ಲಿ 58 ಕೆರೆಗಳ 131 ಎಕರೆ ಪ್ರದೇಶವನ್ನು ತೆರವು ಮಾಡಲಾಗಿದ್ದು, ಇನ್ನೂ 783 ಕೆರೆಗಳ 1,004 ಎಕರೆ ಪ್ರದೇಶದ ತೆರವು ತ್ವರಿತಗೊಳ್ಳಬೇಕಿದೆ.
ಕ್ರಿಮಿನಲ್ ಪ್ರಕರಣ ದಾಖಲು
ಒತ್ತುವರಿದಾರಿಗೆ ಮೊದಲು ನೋಟಿಸ್ ನೀಡಿ, ನಂತರ ಒತ್ತುವರಿ ತೆರವುಗೊಳಿಸಲಾಗುತ್ತಿತ್ತು. ಆದರೀಗ ಒತ್ತುವರಿದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಮಾಡುವಂತೆ ಸರ್ಕಾರದ ಪ್ರತಿನಿಧಿಗಳು ಜಿಲ್ಲಾಡಳಿತಕ್ಕೆ ಈಗಾಗಲೇ ಸೂಚನೆ ನೀಡಿರುವುದರಿಂದ ಜಿಲ್ಲಾಡಳಿತ ಇದೇ ಅಸ್ತ್ರವನ್ನು ಬಳಸುವ ಸಾಧ್ಯತೆ ಇದೆ. ಒತ್ತುವರಿ ಮಾಡಿಕೊಂಡಿರುವವರಿಗೆ ನೋಟಿಸ್ ನೀಡುವ ಪ್ರಕ್ರಿಯೆಯೂ ಪ್ರಗತಿಯಲ್ಲಿದೆ ಎಂದು ತಿಳಿದು ಬಂದಿದೆ.
* ಜಿಲ್ಲೆಯಲ್ಲಿರುವ ಒಟ್ಟು ಕೆರೆಗಳು - 1475
* ಸರ್ವೇ ಪೂರ್ಣಗೊಂಡಿರುವುದು - 1475
* ಒತ್ತುವರಿ ಆಗಿರುವ ಕೆರೆಗಳು - 841
* ಒತ್ತುವರಿ ಒಟ್ಟು ಪ್ರದೇಶ- 1174.18 ಎಕರೆ
* ತೆರವುಗೊಳಿಸಲಾದ ಪ್ರದೇಶ - 58 ಕೆರೆಗಳ 131.05 ಎಕರೆ
ತಾಲೂಕುವಾರು ಕೆರೆಗಳ ವಿವರ
ತಾಲೂಕು ಕೆರೆಗಳು ವಿಸ್ತೀರ್ಣ(ಎಕರೆ)
ರಾಮನಗರ 264 3486.36
ಚನ್ನಪಟ್ಟಣ 417 7457.30
ಮಾಗಡಿ 301 5307.17
ಕನಕಪುರ 312 4152.22
ಹಾರೋಹಳ್ಳಿ 181 1979.19
ಒಟ್ಟು 1475 22383.17
ಎಲ್ಲೆಲ್ಲಿ? ಎಷ್ಟು ಒತ್ತುವರಿ
ತಾಲೂಕು ಒತ್ತುವರಿ ತೆರವು
ಕೆರೆ ವಿಸ್ತೀರ್ಣ ಕೆರೆ ವಿಸ್ತೀರ್ಣ
ರಾಮನಗರ 143 198.17 13 18.00
ಚನ್ನಪಟ್ಟಣ 286 390.33 10 22.25
ಮಾಗಡಿ 174 285.01 8 19.00
ಕನಕಪುರ 135 162.02 17 53.10
ಹಾರೋಹಳ್ಳಿ 103 138.05 10 18.10
ಒಟ್ಟು 841 1174.18 58 131.05
--
ಜಿಲ್ಲೆಯಲ್ಲಿರುವ ಎಲ್ಲ ಕರೆಗಳ ಸರ್ವೇ ಪೂರ್ಣಗೊಳಿಸಲಾಗಿದೆ. ಇದರಲ್ಲಿ ಒಟ್ಟು 841 ಕೆರೆಗಳ 1174ಕ್ಕೂ ಹೆಚ್ಚು ಕೆರೆ ಪ್ರದೇಶ ಒತ್ತುವರಿಯಾಗಿದೆ. ಇವುಗಳ ತೆರವು ಕಾರ್ಯ ನಡೆಯುತ್ತಿದೆ. ಒತ್ತುವರಿ ತೆರವಿಗೂ ಮುನ್ನ ನೋಟಿಸ್ ನೀಡಲಾಗುವುದು.
ಬಿ.ಆರ್.ಹನುಮೇಗೌಡ
ಉಪನಿರ್ದೇಶಕರು, ಭೂ ದಾಖಲೆಗಳ ಇಲಾಖೆ
ರಾಮನಗರ
ಕೆರೆಗಳ ಸಂರಕ್ಷಣೆ ವಿಚಾರದಲ್ಲಿ ಕಠಿಣ ಕ್ರಮಕೈಗೊಳ್ಳುತ್ತಿದ್ದು, ಈಗಾಗಲೇ ಸರ್ವೇ ಕಾರ್ಯ ಪೂರ್ಣಗೊಂಡಿರುವ ಒಟ್ಟು 58 ಕೆರೆಗಳ 131.05 ಎಕರೆ ಪ್ರದೇಶ ಒತ್ತುವರಿಯನ್ನು ತೆರವುಗೊಳಿಸಲಾಗಿದೆ. ಕಾನೂನಿನಡಿಯಲ್ಲಿಯೇ ಉಳಿದ ಒತ್ತುವರಿ ಪ್ರದೇಶವನ್ನು ತೆರವು ಮಾಡಲಾಗುತ್ತದೆ.
ಯಶವಂತ್ ವಿ.ಗುರುಕರ್,
ಜಿಲ್ಲಾಧಿಕಾರಿ, ಬೆಂಗಳೂರು ದಕ್ಷಿಣ ಜಿಲ್ಲೆ