

ಶಿರಾಳಕೊಪ್ಪ: ಮಾನವನ ಅತಿಯಾಸೆಯಿಂದ ಕೆರೆಕಟ್ಟೆಗಳ ಅತಿಕ್ರಮಣವಾಗುತ್ತಿವೆ. ಕೆರೆಕಟ್ಟೆಯಲ್ಲಿ ಹೂಳು ತುಂಬಿ ನೀರಿಲ್ಲದಂತಾಗಿ ಪಶು-ಪಕ್ಷಿಗಳಿಗೆ, ದನಕರುಗಳಿಗೆ ತೊಂದರೆ ಆಗಿದೆ. ಅತಿಯಾದ ಕೊಳವೆಬಾವಿ ತೆಗೆಸುತ್ತಿರುವುದರಿಂದ ಭೂಮಿಯಲ್ಲಿ ನೀರಿಲ್ಲದೆ ಅಂತರ್ಜಲ ಮಟ್ಟವೂ ಕುಸಿಯುತ್ತಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶಿರಸಿ ಜಿಲ್ಲಾ ನಿರ್ದೇಶಕ ಬಾಬುನಾಯಕ್ ಕಳವಳ ವ್ಯಕ್ತಪಡಿಸಿದರು.
ಮಳವಳ್ಳಿ ಗ್ರಾಮದ ಹಿತ್ತಲಕಟ್ಟೆ ಕೆರೆಯ ಹೂಳೆತ್ತುವ ಕಾರ್ಯಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ನೀರಿಲ್ಲದೆ ನಿರುಪಯುಕ್ತವಾದ ಕೆರೆಗಳನ್ನು ಗುರುತಿಸಿ ಸ್ಥಳೀಯರ ಸಹಕಾರದಿಂದ ಮತ್ತು ಸಂಸ್ಥೆಯ ಅನುದಾನದಿಂದ ಕೆರೆ ಕಾಮಗಾರಿ ಮಾಡುತ್ತಿದೆ. ರಾಜ್ಯಾದ್ಯಂತ ತಾಲೂಕಿನ ಕೆರೆಗಳನ್ನು ಆಯ್ಕೆ ಮಾಡಿ ವಷÀðಕ್ಕೆ ಒಂದರAತೆ ಹೂಳೆತ್ತಲಾಗುತ್ತಿದೆ ಎಂದರು.
ರೈತರ ಸಹಕಾರದಿಂದ ಕೆರೆ ಕಾಮಗಾರಿ ನಡೆಯುತ್ತಿದೆ. ಕೆರೆಯಿಂದ ತೆಗೆದ ಹೂಳನ್ನು ರೈತರು ತಮ್ಮ ಕೃಷಿ ಭೂಮಿಗೆ ಉಪಯೋಗಿಸಿಕೊಳ್ಳುವುದರಿಂದ ಫಲವತ್ತತೆ ಹೆಚ್ಚುತ್ತದೆ. ಜತೆಗೆ ಬೆಳೆಗಳು ಸಮೃದ್ಧವಾಗಿ ಬೆಳೆದು ಹೆಚ್ಚು ಇಳುವರಿ ಪಡೆಯಬಹುದು. ಕೆರೆ ಹೂಳೆತ್ತಿ ಹೆಚ್ಚು ನೀರು ನಿಂತಾಗ ಅಂತರ್ಜಲವೂ ಹೆಚ್ಚುತ್ತದೆ. ಬತ್ತಿದ ಬೋರ್‌ವೆಲ್‌ಗಳಲ್ಲಿ ನೀರು ಹರಿಯುತ್ತದೆ ಎಂದರು.
ಶಿವಮೊಗ್ಗ ವಿಭಾಗದ ಯೋಜನೆಯ ಅಭಿಯಂತರ ಗಣಪತಿ ಪ್ರಾಸ್ತಾವಿಕವಾಗಿ ಮಾತನಾಡಿ, ಧರ್ಮಸ್ಥಳ ಕ್ಷೇತ್ರದ ಹಣದಿಂದ ನಡೆಯುವ ಕಾಮಗಾರಿ ಇದಾಗಿದ್ದು ಹಣ ದುಂದುವೆಚ್ಚ ಆಗದಂತೆ ಹಾಗೂ ಸಮಯಕ್ಕೆ ಸರಿಯಾಗಿ ಕಾಮಗಾರಿ ಮುಗಿಯಬೇಕು. ಇದರಿಂದ ೩ ಕೋಟಿ ಲೀಟರ್ ನೀರು ಸಂಗ್ರಹಿಸಬಹುದು ಎಂದರು.
ಗ್ರಾಮಸ್ಥರು ನಮ್ಮೂರು ನಮ್ಮ ಕೆರೆ ಎಂದು ತಿಳಿದು ಕೆರೆ ಕಾಮಗಾರಿಗೆ ಮುಂದೆ ಬರಬೇಕು. ಬರಗಾಲದಿಂದ ಬತ್ತಿದ ಬೋರ್‌ವೆಲ್‌ಗಳು ತುಂಬಲು ಸಹಕಾರಿಯಾಗುವುದು. ವೀರೇಂದ್ರ ಹೆಗಡೆ ಅವರ ಕನಸನ್ನು ನಾವೆಲ್ಲ ನನಸು ಮಾಡೋಣ ಎಂದರು.
ಗ್ರಾಪಂ ಅಧ್ಯಕ್ಷೆ ಗೌರಮ್ಮ, ಕೆರೆ ಸಮಿತಿ ಅಧ್ಯಕ್ಷ ಉಮೇಶ್ ಗೌಡ, ತಾಲೂಕು ಯೋಜನಾಽಕಾರಿ ನಂಜುAಡಿ, ಗ್ರಾಪಂ ಸದಸ್ಯರಾದ ಚಂದ್ರಶೇಖರ, ಪ್ರವೀಣ್, ಕಲಾವತಿ, ಪಿಡಿಒ ರವಿಕುಮಾರ್, ಒಕ್ಕೂಟದ ಅಧ್ಯಕ್ಷೆ ಲೀಲಾವತಿ, ದೇವಸ್ಥಾನ ಸಮಿತಿ ಅಧ್ಯಕ್ಷ ವಿರೂಪಾಕ್ಷಪ್ಪ, ಕೆರೆ ಸಮಿತಿ ಉಪಾಧ್ಯಾಕ್ಷ ರಾಜು ದಂಬಾಳೆ ಸೇರಿದಂತೆ ಗ್ರಾಮದ ವಿವಿಧ ಸಂಘಟನೆಯ ಪ್ರಮುಖರು ಹಾಜರಿದ್ದರು.