ಹೆಚ್ಚುತ್ತಿದೆ ಕೋಟೆ ಕಂದಕಗಳ ಕಬಳಿಕೆ

SRP_17- Focus Story-01(a)jpj
ಶ್ರೀರಂಗಪಟ್ಟಣದ ದಕ್ಷಿಣ ದಿಕ್ಕಿಗಿರುವ ಹೊಸ ಕಾವೇರಿ ಬಡಾವಣೆಯ ಮಧ್ಯದಲ್ಲಿರುವ ಕಂದಕಕ್ಕೆ ಭೂಗಳ್ಳರು ಕಲ್ಲು-ಮಣ್ಣು ತುಂಬಿರುವುದು.
Published on

ಶ್ರೀರಂಗಪಟ್ಟಣ: ವಿಶ್ವ ಪ್ರಸಿದ್ಧ ಶ್ರೀರಂಗಪಟ್ಟಣದಲ್ಲೀಗ ಭೂಗಳ್ಳರ ಕಳ್ಳಾಟ ಹೆಚ್ಚಾಗಿದ್ದು, ಕೋಟೆ ಕಂದಕಗಳ ಕಬಳಿಕೆ ಎಗ್ಗಿಲ್ಲದೆ ಸಾಗಿತ್ತಿದೆ. ಇದರ ಪರಿಣಾಮ ರಾತ್ರೋರಾತ್ರಿ ನಿವೇಶನಗಳಾಗಿ ಮಾರ್ಪಾಡುಗುತ್ತಿವೆ.

ಶ್ರೀರಂಗಪಟ್ಟಣದ ಸುತ್ತಲೂ ಇರುವ ಕೋಟೆ ರಕ್ಷಣೆಗೆಂದು ಬೃಹತ್ ಆಳದ ಕಂದಕಗಳಿವೆ. ಆದರೆ ಯಾವುದೇ ಅಭಿವೃದ್ಧಿ ಕಂಡಿಲ್ಲ. ಈ ನಡುವೆ ಉತ್ತರ ಕಾವೇರಿಯ ನದಿ ತೀರಕ್ಕೆ ಹೊಂದಿಕೊಂಡಿರುವ ಕೆಲ ಪ್ರದೇಶವನ್ನು ಇನ್ನೂ ಕೆಲವರು ಕೃಷಿ ಚಟುವಟಿಕೆಗೆ ಬಳಸುತ್ತಿದ್ದಾರೆ. ಶ್ರೀರಂಗಪಟ್ಟಣ ಪ್ರವೇಶದ್ವಾರದ ದಕ್ಷಿಣ ದಿಕ್ಕಿಗಿರುವ 14ನೇ ವಾರ್ಡ್‌ನಲ್ಲಿ ಹತ್ತಾರು ವರ್ಷಗಳ ಹಿಂದೆ ನ್ಯೂ ಕಾವೇರಿ ಬಡಾವಣೆ ಬಂದಿತು. ಈ ಬಡಾವಣೆಯ ಮಧ್ಯಭಾಗದಲ್ಲಿ ಶತಮಾನಗಳ ಹಿಂದಿನಿಂದಲೂ ಇರುವ ಪುರಾತನ ಕಂದಕಕ್ಕೆ ಕೆಲವರು ಸ್ಥಳೀಯರು ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ದಾಟಲು ಮಣ್ಣು ತುಂಬಿ ಚಿಕ್ಕ ರಸ್ತೆಯನ್ನು ನಿರ್ಮಿಸಿದ್ದರು. ಆದರೆ ಇದೀಗ ಸಂಪೂರ್ಣ ಕಂದಕವನ್ನೇ ಮುಚ್ಚಲು ಮುಂದಾಗಿದ್ದಾರೆ. ರಾತ್ರಿ ವೇಳೆ ಹಂತಹಂತವಾಗಿ ಪ್ರಭಾವಿಗಳು ಕಲ್ಲು ಮತ್ತು ಮಣ್ಣಿನಿಂದ ಕಂದಕವನ್ನು ಮುಚ್ಚಿಸಿ ಸಮತಟ್ಟು ಮಾಡುತ್ತಿದ್ದು, ನಿವೇಶನವನ್ನಾಗಿ ಪರಿವರ್ತಿಸಲು ಹುನ್ನಾರ ನಡೆಸಿರುವುದು ಬೆಳಕಿಗೆ ಬಂದಿದೆ.

ಕಂದಕದಲ್ಲಿ ನಿಂತ ಮಳೆ ನೀರಿನಿಂದ ಕೋಟೆ ಕುಸಿತ: ಸುಮಾರು 20 ವರ್ಷಗಳಿಗೂ ಮುನ್ನ ಶ್ರೀರಂಗಪಟ್ಟಣದಲ್ಲಿ ಭಾರಿ ಮಳೆಯಾದ ವೇಳೆ ಸುತ್ತಲೂ ಇರುವ ಕಂದಕಗಳಲ್ಲಿ ನಿಲ್ಲುತ್ತಿದ್ದ ನೀರು ಸರಾಗವಾಗಿ ಹರಿದು ಕಾವೇರಿ ನದಿಗೆ ಸೇರುತ್ತಿತ್ತು. ಆದರೆ ಇತ್ತೀಚೆಗೆ ಕೆಲವು ಕಡೆಗಳಲ್ಲಿ ಕಂದಕಗಳನ್ನು ಮುಚ್ಚಿ ನಿವೇಶನಗಳನ್ನಾಗಿ ಮಾರ್ಪಡಿಸುತ್ತಿರುವ ಕಾರಣ ನೀರು ಸರಿಯಾಗಿ ಹರಿಯುತ್ತಿಲ್ಲ. ಇದರ ಪರಿಣಾಮ ಶೀತ ಹೆಚ್ಚಾಗಿ ಕೋಟೆ ಗೋಡೆಗಳು ಕುಸಿಯಲು ಕಾರಣವಾಗಿದೆ. ಕಳೆದ ನಾಲ್ಕೈದು ವರ್ಷಗಳಿಂದ ಪಟ್ಟಣದ ಸುತ್ತಲಿನ ಕೋಟೆಯ ವಿವಿಧ ಭಾಗಗಳು ಅಲ್ಲಲ್ಲಿ ಕುಸಿಯುತ್ತಿವೆ. ಇದು ನಿರಂತರವಾಗಿ ಹೆಚ್ಚಾಗಿರುವುದರಿಂದ ಸುರಕ್ಷತೆ ಧಕ್ಕೆ ಉಂಟಾಗಿದೆ.

ಮಣ್ಣು ದೋಚುತ್ತಿರುವ ಭೂಗಳ್ಳರು: ಪಟ್ಟಣದ ಸುತ್ತಲೂ ಇರುವ ಕಂದಕಗಳು ಸದೃಢವಾಗಿರಬೇಕೆಂಬ ಕಾರಣದಿಂದ ಹೆಚ್ಚಾಗಿ ಕೆಮ್ಮಣ್ಣು ಬಳಸಿ ಬೃಹತ್ ಕಲ್ಲುಗಳಿಂದ ನಿರ್ಮಾಣ ಮಾಡಲಾಗಿತ್ತು. ಆದರೆ ಜನಸಂಚಾರ ಇರದ ಕೆಲವೆಡೆ ಕೆಲ ಭೂಗಳ್ಳರು ಕೆಮ್ಮಣ್ಣು ಹಾಗೂ ಕಲ್ಲುಗಳನ್ನು ಆಗಾಗ್ಗೆ ಕದ್ದು ಸಾಗಣೆ ಮಾಡುತ್ತಿರುವ ಪ್ರಕರಣಗಳೂ ಕಂದಕಗಳ ಅವನತಿಗೆ ಕಾರಣವಾಗಿದೆ.

ಸಾಂಕ್ರಾಮಿಕ ರೋಗಗಳ ಸೃಷ್ಟಿ ಕೇಂದ್ರ: ಶ್ರೀರಂಗಪಟ್ಟಣದ ರಕ್ಷಣೆಗೆಂದು ಈ ಹಿಂದೆ ನಿರ್ಮಾಣವಾದ ಈ ಕಂದಕಗಳು ಇತ್ತೀಚಿನ ಕೆಲ ವರ್ಷಗಳಿಂದ ಸಾಂಕ್ರಾಮಿಕ ರೋಗ ಹಬ್ಬಿಸುವ ಪ್ರಮುಖ ತಾಣವಾಗಿದೆ.

ಪಟ್ಟಣದ ಸಂತೇಮಾಳ ಮೈದಾನ ಬಳಿಯಿರುವ, ಚೆಕ್‌ಪೋಸ್ಟ್ ರಸ್ತೆಯ ಧ್ವನಿ ಮತ್ತು ಬೆಳಕು ಕೇಂದ್ರದ ಬಳಿಯ ಹಾಗೂ ಬಹು ಮುಖ್ಯವಾಗಿ ಶ್ರೀರಂಗಪಟ್ಟಣ ಪ್ರವೇಶಿಸುವ ಕೋಟೆ ದ್ವಾರದ ಕಂದಕಗಳು ಅನೈರ್ಮಲ್ಯದ ತಾಣವಾಗಿ ಮಾರ್ಪಟ್ಟಿವೆ. ಜನರು ಬೇಕಾಬಿಟ್ಟಿ ಎಸೆದಿರುವ ಕಸ, ಪ್ಲಾಸ್ಟಿಕ್ ತ್ಯಾಜ್ಯಗಳು, ಹಾಸಿಗೆ-ದಿಂಬು ಮತ್ತು ಕೊಳೆತ ತರಕಾರಿ, ಕೋಳಿ ತ್ಯಾಜ್ಯಗಳ ಮಲಿನ ವಸ್ತುಗಳಿಂದ ಕಂದಕಗಳು ತುಂಬಿ ಹೋಗಿವೆೆ. ಇದೀಗ ಮಳೆನೀರು ತುಂಬಿ ಗಬ್ಬುನಾರುವ ಮೂಲಕ ಪುರಜನರು ಹಾಗೂ ಶ್ರೀರಂಗಪಟ್ಟಣ ವೀಕ್ಷಿಸಲು ಆಗಮಿಸುವ ದೇಶ-ವಿದೇಶಿ ಜನರಲ್ಲಿ ಅಸಹ್ಯ ಭಾವನೆ ಮೂಡಿಸುತ್ತಿದೆ.
ಕಂದಕಗಳಲ್ಲೇ ಸಾಕಷ್ಟು ಪ್ರಮಾಣದಲ್ಲಿ ನೀರು ನಿಲ್ಲುವುದರಿಂದ ಡೆಂೆ, ಮಲೇರಿಯಾ ಹಾಗೂ ಚಿಕೂನ್‌ಗುನ್ಯಾದಂತಹ ರೋಗಗಳು ರೋಗ ಕಾಣಿಸಿಕೊಳ್ಳುತ್ತಿವೆ.

ವಿಜಯನಗರ ಸಾಮಂತರಿಂದ ನಿರ್ಮಾಣ: ಕ್ರಿ.ಶ.1454ರಿಂದ 1495 ರವರೆಗೆ ಶ್ರೀರಂಗಪಟ್ಟಣದಲ್ಲಿ ಆಡಳಿತ ನಡೆಸಿದ ವಿಜಯನಗರ ಸಾಮಂತ ತಿಮ್ಮಣ್ಣನಾಯಕ ಶತ್ರುಗಳ ಆಕ್ರಮಣದಿಂದ ತಪ್ಪಿಸಿಕೊಳ್ಳಲು ಶ್ರೀರಂಗಪಟ್ಟಣದ ಸುತ್ತಲೂ ರಕ್ಷಣೆಗಾಗಿ ಒಂದು ಸುತ್ತಿನ ಕೋಟೆ ನಿರ್ಮಾಣ ಮಾಡಿದರು. ಬಳಿಕ 1610ರಲ್ಲಿ ರಾಜ ಒಡೆಯರ್ ಅವರ ಮೂಲಕ ಮೈಸೂರು ಅರಸು ಮನೆತನ ಶ್ರೀರಂಗಪಟ್ಟಣದಲ್ಲಿ ಆಳ್ವಿಕೆ ಶುರು ಮಾಡಿತು.


1673 ರಿಂದ 1704ರಿಂದ ಅಧಿಕಾರ ನಡೆಸಿದ ಚಿಕ್ಕದೇವರಾಜ ಒಡೆಯರ್ ಕೋಟೆಗಳನ್ನು ಎತ್ತರಗೊಳಿಸುವ ಮೂಲಕ ಇನ್ನಷ್ಟು ಸದೃಢಗೊಳಿಸಿದರು. ಬದಲಾದ ಪರಿಸ್ಥಿತಿಯಲ್ಲಿ ಶ್ರೀರಂಗಪಟ್ಟಣ ಹೈದರ್ ಅಲಿ ಅಧಿಕಾರಕ್ಕೆ ಒಳಪಟ್ಟು, ಈತನ ನಂತರದಲ್ಲಿ ಆಳ್ವಿಕೆ ಶುರು ಮಾಡಿದ ಪುತ್ರ ಟಿಪ್ಪು ಸುಲ್ತಾನ್ 1782ರಲ್ಲಿ ಶತ್ರುಗಳ ದಾಳಿಯಿಂದ ಶ್ರೀರಂಗಪಟ್ಟಣವನ್ನು ರಕ್ಷಿಸಲು ಫ್ರೆಂಚ್ ದೊರೆ ನೆಪೋಲಿಯನ್ ಬೋನಾಪಾರ್ಟೆ ಸಲಹೆಯಂತೆ ಪೋರ್ಚುಗೀಸರ ಸಹಕಾರ ಪಡೆದು ಲಕ್ಷ 32 ರೂ. ವೆಚ್ಚದಲ್ಲಿ ಕಾವೇರಿ ನದಿ ಮಾತ್ರವಲ್ಲದೆ ಶ್ರೀರಂಗಪಟ್ಟಣ ಸುತ್ತಲೂ ನೀರು ಹರಿಯುವಂತೆ ಬೃಹತ್ ಕಂದಕಗಳೊಂದಿಗೆ ಎತ್ತರ ಕಲ್ಲಿನಕೋಟೆ ನಿರ್ಮಿಸಿದ. ಜತೆಗೆ ಶತ್ರುಗಳ ಚಲನವಲನ ವೀಕ್ಷಿಸಲು ಅಲ್ಲಲ್ಲಿ ದೊಡ್ಡ ಬುರುಜುಗಳನ್ನು ನಿರ್ಮಿಸಿದ್ದ.

ಪಟ್ಟಣದಲ್ಲಿ ಕಂದಕ ಮುಚ್ಚುತ್ತಿರುವ ವಿಚಾರ ತಿಳಿದುಬಂದಿಲ್ಲ. ಅಂತಹ ಕಾರ್ಯಕ್ಕೆ ಪುರಸಭಾ ಆಡಳಿತ ಪರವಾನಗಿ ನೀಡುವುದಿಲ್ಲ. ಅದು ರಾಜ್ಯ ಪುರಾತತ್ವ ಸಂರಕ್ಷಣಾ ಇಲಾಖೆ ವ್ಯಾಪ್ತಿಗೆ ಒಳಪಡುತ್ತದೆ. ಇನ್ನು ಪಟ್ಟಣದ ಮುಖ್ಯ ಕೋಟೆಯ ಪ್ರವೇಶದ್ವಾರದ ಎರಡೂ ಬದಿಯ ಕಂದಕಗಳಲ್ಲಿ ತುಂಬಿರುವ ತ್ಯಾಜ್ಯಗಳನ್ನು ತೆಗೆದು ಶುಚಿಗೊಳಿಸುವ ಜತೆಗೆ ಅಲ್ಲಿ ಮಳೆ ನೀರು ನಿಲ್ಲದಂತೆ ಮಾಡಲು ಚಿಂತನೆ ನಡೆಸಿದೆ. ಪುರಾತತ್ವ ಇಲಾಖೆ ಅಧಿಕಾರಿಗಳ ಸಹಕಾರದೊಂದಿಗೆ ಕೋಟೆ ಪ್ರವೇಶ ದ್ವಾರದಲ್ಲಿ ಸೇತುವೆ ನಿರ್ಮಾಣಕ್ಕೆ ಕ್ರಮವಹಿಸಲಾಗುವುದು.
ಎಂ.ರಾಜಣ್ಣ ಪುರಸಭಾ ಮುಖ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net