ಹಂಚನಾಳ ಎಲ್‌ಟಿ-2ರಲ್ಲಿ ಸಮುದಾಯ ಭವನ ಅತಿಕ್ರಮಣ, ಪ್ರಶ್ನೆ ಮಾಡಿದವರ ಮೇಲೆಯೇ ಹಲ್ಲೆ, ನ್ಯಾಯ ಎಲ್ಲಿದೆ? ಅನ್ಯಾಯ ಎಲ್ಲೆ ಮೀರಿದೆ

HANCHANAL LT
ತಿಕೋಟಾ ತಾಲೂಕಿನ ಹಂಚನಾಳ ಪಿಎಚ್ ಎಲ್‌ಟಿ-2ರಲ್ಲಿ ಅತಿಕ್ರಮಣಕ್ಕೊಳಗಾಗಿ ಹದಗೆಟ್ಟಿರುವ ಸಮುದಾಯ ಭವನ.
Published on

ವಿಜಯಪುರ: ಸಮುದಾಯಗಳ ಕಲ್ಯಾಣಕ್ಕಾಗಿ ಮಂಜೂರಿಸುವ ಭವನಗಳು ನಿರುಪಯುಕ್ತವಾಗುತ್ತಿವೆಯಲ್ಲದೇ ಕೆಲವರು ಖಾಸಗಿ ಸ್ವತ್ತಾಗಿಸಿಕೊಂಡಿದ್ದಲ್ಲದೇ ಪ್ರಶ್ನೆ ಮಾಡಿದರೆ ಹಲ್ಲೆ ಮಾಡುವ ಮಟ್ಟಕ್ಕೆ ವ್ಯವಸ್ಥೆ ಹದಗೆಟ್ಟಿರುವುದು ಬೆಳಕಿಗೆ ಬಂದಿದೆ.

ತಿಕೋಟಾ ತಾಲೂಕಿನ ಹಂಚನಾಳ ಪಿಎಚ್ ಎಲ್‌ಟಿ-2ರಲ್ಲಿ ಇಂಥದ್ದೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಈಗಾಗಲೇ ಸಾಕಷ್ಟು ಬಾರಿ ಪ್ರತಿಭಟನೆ ಹಾಗೂ ಮನವಿ ಸಲ್ಲಿಸಿದರೂ ಪ್ರಯೋಜನಕ್ಕೆ ಬಾರದಿರುವುದು ವ್ಯವಸ್ಥೆ ಕುರಿತು ಸಾರ್ವಜನಿಕರಲ್ಲಿ ಜುಗುಪ್ಸೆ ಮೂಡಿಸಿದೆ. ಎಲ್ಲಕ್ಕಿಂತ ಹೆಚ್ಚಾಗಿ ಪ್ರಶ್ನೆ ಮಾಡಿದವರ ಮೇಲೆಯೇ ಹಲ್ಲೆಯಾಗಿದ್ದು, ಎಫ್‌ಐಆರ್ ದಾಖಲಿಸಿದರೂ ಕ್ರಮವಾಗಿಲ್ಲವೆಂದರೆ ವ್ಯವಸ್ಥೆ ಎಷ್ಟರ ಮಟ್ಟಿಗೆ ಹದಗೆಟ್ಟಿದೆ ಎಂಬುದನ್ನು ಊಹಿಸಬಹುದು.

ಅಂದಹಾಗೆ, ಹಲ್ಲೆಗೊಳಗಾದ ವ್ಯಕ್ತಿ ಶ್ರೀಮಂತ ಶಿವಲಾಲ ಚವಾಣ್ ಎಂಬುವರಾಗಿದ್ದು, ಕಳೆದ 2023ರಿಂದ ಸಮುದಾಯ ಭವನಕ್ಕಾಗಿ ನಿತ್ಯ ಹೋರಾಟ ನಡೆಸುತ್ತಿದ್ದಾರಲ್ಲದೇ, ಹಲ್ಲೆ ನಡೆಸಿರುವ ಗ್ರಾಪಂ ಮಾಜಿ ಸದಸ್ಯ ನೀಲು ದೇವಲು ರಾಠೋಡ ಹಾಗೂ ಅವರ ಪುತ್ರ ರಮೇಶ ನೀಲು ರಾಠೋಡ ಮೇಲೆ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿ ಸುಸ್ತಾಗಿದ್ದಾರೆ.

ಸಮುದಾಯದ ಕಲ್ಯಾಣಕ್ಕಾಗಿ ನಿರ್ಮಾಣಗೊಂಡಿರುವ ಭವನವನ್ನು ಅತಿಕ್ರಮಣ ಮಾಡಿಕೊಂಡಿದ್ದು ಈ ಕೂಡಲೇ ಅದನ್ನು ತೆರವುಗೊಳಿಸಬೇಕೆಂದು ಶ್ರೀಮಂತ, ಸಂಬಂಧಿಸಿದ ಗ್ರಾಮ ಪಂಚಾಯಿತಿ, ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಅಷ್ಟೇ ಏಕೆ ಜಿಲ್ಲಾಡಳಿತಕ್ಕೂ ಮನವಿ ಸಲ್ಲಿಸಿದ್ದಾರೆ. ಹಲ್ಲೆ ನಡೆಸಿದವರ ಮೇಲೆ ಕ್ರಮ ಕೈಗೊಳ್ಳಿ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೂ ಮನವಿ ಮಾಡಿದ್ದಾರೆ. ಆದರೂ, ನ್ಯಾಯ ಸಿಕ್ಕಿಲ್ಲವೆಂದು ‘ವಿಜಯವಾಣಿ’ ಎದುರು ಅಲವತ್ತುಕೊಂಡಿದ್ದಾರೆ.

ಸದ್ಯ ಶ್ರೀಮಂತ ಚವಾಣ್‌ಗೆ ಜೀವ ಬೆದರಿಕೆ ಇದ್ದು ಅವರ ಇಡೀ ಕುಟುಂಬದ ಭಯದ ನೆರಳಲ್ಲಿ ಕಾಲ ಕಳೆಯುತ್ತಿದೆ. ಭದ್ರತೆ ಕಲ್ಪಿಸಬೇಕಾದ ಪೊಲೀಸ್ ಇಲಾಖೆಯೇ ಸುಮ್ಮನಿರುವುದರಿಂದ ಶ್ರೀಮಂತ ‘ನ್ಯಾಯ ಎಲ್ಲಿದೆ?’ ಎಂದು ವ್ಯವಸ್ಥೆಯನ್ನೇ ಪ್ರಶ್ನಿಸುತ್ತಿದ್ದಾರೆ. ಇದು ಶ್ರೀಮಂತ ಚವಾಣ್ ಪ್ರಕರಣ ಎನ್ನುವುದಕ್ಕಿಂತ ಒಂದು ಸಮುದಾಯದ ಹಿತ, ಕಾನೂನು ಸುವ್ಯವಸ್ಥೆ, ಆಡಳಿತ ವ್ಯವಸ್ಥೆಯ ಪ್ರಶ್ನೆಯಾಗಿದ್ದು, ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net