ಕಾಲೇಜು ಮೈದಾನ ಕಬಳಿಕೆಗೆ ಅವಕಾಶ ನೀಡಲ್ಲ

9blrp1
ಬೇಲೂರು ಜೂನಿಯರ್ ಕಾಲೇಜಿನಲ್ಲಿ ಆಯೋಜಿಸಿದ್ದ ವಿದ್ಯಾರ್ಥಿ ಕಲಾ ಸಂಘ, ರಾಷ್ಟ್ರೀಯ ಸೇವಾ ಯೋಜನೆ ಚಟುವಟಿಕೆಗಳ ಸಮಾರೋಪ ಹಾಗೂ ದ್ವಿತೀಯ ಪಿಯು ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಅತಿಥಿಗಳು ಉದ್ಘಾಟಿಸಿದರು.
Published on

ಬೇಲೂರು: ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನ ಕಬಳಿಸಲು ಭೂ ಮಾಫಿಯಾ ಮುಂದಾಗಿದ್ದು, ಯಾವುದೇ ಕಾರಣಕ್ಕೂ ಅವರಿಗೆ ಅವಕಾಶ ಕೊಡುವುದಿಲ್ಲ ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.

ಜೂನಿಯರ್ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಿದ್ಯಾರ್ಥಿ ಕಲಾ ಸಂಘ, ರಾಷ್ಟ್ರೀಯ ಸೇವಾ ಯೋಜನೆ ಚಟುವಟಿಕೆಗಳ ಸಮಾರೋಪ ಹಾಗೂ ದ್ವಿತೀಯ ಪಿಯು ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಮೈದಾನಕ್ಕೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಕಬಳಿಸಲು ಭೂ ಮಾಫಿಯಾದವರು ಪ್ರಯತ್ನಿಸುತ್ತಿದ್ದರು. ಆದರೆ ಹಿರಿಯ ನಾಗರಿಕರ ಹೋರಾಟದ ಪ್ರಯತ್ನದಿಂದ ಕಳ್ಳರ ಆಸೆಗೆ ತಣ್ಣೀರು ಎರಚಿದಂತಾಗಿದ್ದರೂ ಮತ್ತೆ ತಲೆ ಎತ್ತಲೂ ಪ್ರಾರಂಭಿಸಿದ್ದಾರೆ. ಸರ್ಕಾರದ ಆಸ್ತಿ, ಸಾರ್ವಜನಿಕರ ಆಸ್ತಿಯಾಗಿದೆ. ಅದನ್ನು ಉಳಿಸಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.

ಕಾಲೇಜು ಮುಂಭಾಗ ಮತ್ತು ಹಿಂಭಾಗ ಮಿನಿ ಕ್ರೀಡಾಂಗಣ ನಿರ್ಮಿಸಿದರೆ ನಿರಂತರ ಚಟುವಟಿಕೆಗಳ ಕಾರಣ ಮೈದಾನವು ಅನ್ಯರ ಪಾಲಾಗುವುದು ತಪ್ಪುತ್ತದೆ. ಈ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು. ಪ್ರಸ್ತುತ ಕಾಲೇಜಿನ ಸಮಸ್ಯೆಗಳ ಬಗ್ಗೆ ಈ ಹಿಂದೆ ಉಪನ್ಯಾಸಕರು ಗಮನಕ್ಕೆ ತಂದಿದ್ದರು. ಕಾಲೇಜಿನ ಹಿಂಭಾಗ ಅಕ್ರಮ ಗುಡಿಸಲುಗಳು ಇರುವುದರಿಂದ ವಿದ್ಯಾಭ್ಯಾಸಕ್ಕೆ, ಕ್ರೀಡಾ ಚಟುವಟಿಕೆಗೆ ಅಡಚಣೆ ಉಂಟಾಗುತ್ತಿದೆ. ಕಾಲೇಜಿನ ಸುತ್ತಲೂ ಕಾಂಪೌಂಡ್ ಇಲ್ಲದೆ ಕಾಲೇಜಿಗೆ ರಕ್ಷಣೆ ಇಲ್ಲವಾಗಿದೆ. ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪೂರಕ ವಾತಾವರಣ ಕಲ್ಪಿಸಲು ಸಿದ್ಧನಿದ್ದೇನೆ ಎಂದು ಭರವಸೆ ನೀಡಿದರು.

ಕಾಲೇಜು ಹಿಂಭಾಗದ ಗುಡಿಸಲು ತೆರವುಗೊಳಿಸುವ ನಿಟ್ಟಿನಲ್ಲಿ ಪುರಸಭೆ ಅಧ್ಯಕ್ಷರ ಜತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಶೀಘ್ರವೇ ಹೊಯ್ಸಳ ವಾಸ್ತಶಿಲ್ಪಕ್ಕೆ ತಕ್ಕಂತೆ ಸುಂದರ ವಿನ್ಯಾಸದ ಕಟ್ಟಡ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು. ಕಾರ್ಯಕ್ರಮಕ್ಕೆ ಆಸನಗಳ ಕೊರತೆ ಇರುವುದರಿಂದ ತಮ್ಮ ಸ್ವಂತ ಹಣದಲ್ಲಿ ಕೊಡಿಸುವುದಾಗಿ ಹೇಳಿದರು.

ಶಿಕ್ಷಣ ಇಲಾಖೆ ಉಪನಿರ್ದೇಶಕ ಗಂಗಾಧರ್, ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ರಂಗನಾಥ್, ಡಾ.ಚೇತನ್, ಗ್ರಾಪಂ ಸದಸ್ಯ ಸಚಿನ್, ಪ್ರಾಂಶುಪಾಲ ಹರೀಶ್ ಉಪನ್ಯಾಸಕ ಲಕ್ಷ್ಮೀನಾರಾಯಣ್, ಸರ್ವಮಂಗಳಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net