

ಮೈಸೂರು: ಚಾಮುಂಡಿಬೆಟ್ಟದ ಪಾದ ಹಾಗೂ ಮೆಟ್ಟಿಲಿನ ಎರಡು ಬದಿಗಳಲ್ಲಿ ಹೊಸದಾಗಿ ಒತ್ತುವರಿ ಪ್ರಾರಂಭವಾಗಿದ್ದು, ಕೂಡಲೇ ಒತ್ತುವರಿ ಗುರುತಿಸಿ ತೆರವುಗೊಳಿಸಬೇಕು ಎಂದು ಮಾಜಿ ಮೇಯರ್ ಬಿ.ಎಲ್. ಭೈರಪ್ಪ ಆಗ್ರಹಿಸಿದ್ದಾರೆ.
ಚಾಮುಂಡಿಬೆಟ್ಟದ ಮೇಲ್ಭಾಗದಲ್ಲಿ ಗೋಶಾಲೆ ಹೆಸರಿನಲ್ಲಿ ಬೆಟ್ಟವನ್ನು ಒತ್ತುವರಿ ಮಾಡಲಾಗಿದೆ. ಅದೇ ರೀತಿ ಬೆಟ್ಟದ ಪಾದದಲ್ಲಿ ಖಾಸಗಿ ಸಂಸ್ಥೆಯವರು ಒತ್ತುವರಿ ಮಾಡಿಕೊಂಡಿದ್ದಾರೆ. ಒತ್ತುವರಿ ತೆರವುಗೊಳಿಸದೆ ಹೋದರೆ ಮುಂದಿನ ದಿನಗಳಲ್ಲಿ ಒತ್ತುವರಿ ಸ್ಥಳಗಳಲ್ಲಿ ಕಟ್ಟಡ ನಿರ್ಮಾಣಗೊಂಡು ಬೆಟ್ಟಕ್ಕೆ ಅಪಾಯ ಎದುರಾಗುವ ಸಾಧ್ಯತೆ ಇದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಕಳವಳ ವ್ಯಕ್ತಪಡಿಸಿದರು.
ಮೈಸೂರು ರಾಜವಂಶಸ್ಥರು ಚಾಮುಂಡಿಬೆಟ್ಟ ನಮಗೆ ಸೇರಿದ್ದು ಎಂದು ಹೇಳುತ್ತಿದ್ದಾರೆ. ಆದರೆ, ಮತ್ತೊಂದೆಡೆ ಅನಧಿಕೃತ ವ್ಯಕ್ತಿಗಳು ಒತ್ತುವರಿ ಮುಂದುವರೆಸಿದ್ದಾರೆ. ಬೆಟ್ಟ ಈಗಾಗಲೇ ಸಾಕಷ್ಟು ಒತ್ತಡ ಹಾಗೂ ಸಮಸ್ಯೆಗಳನ್ನು ಎದುರಿಸುತ್ತಿದೆ. ಒತ್ತುವರಿ ಹೆಚ್ಚಾದರೆ ಬೆಟ್ಟಕ್ಕೆ ಅಪಾಯವಾಗುವುದು ನಿಶ್ಚಿತ. ಹಾಗಾಗಿ ಜಿಲ್ಲಾಡಳಿತ ಈಗಲೇ ಎಚ್ಚೆತ್ತುಕೊಂಡು ಒತ್ತುವರಿ ತೆರವುಗೊಳಿಸದೆ ಹೋದರೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ವಿವಿಧ ಸಂಘಟನೆಗಳ ಪ್ರಮುಖರಾದ ವಾಸು, ವೆಂಕಟೇಶ್ ಇದ್ದರು.