ಅತಿಕ್ರಮಣ ತೆರವು ಕಾರ್ಯಾಚರಣೆ ಪೂರ್ಣಗೊಳಿಸಿ

Encroachment Clearance Operation, Talikote, Supreme Court, District Collector, Chief Officer, Mohan Jadhav,
ತಾಳಿಕೋಟೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ನಿವೃತ್ತ ಎಸ್‌ಪಿ ಎಸ್.ಬಿ.ಕಟ್ಟಿಮನಿ ಮಾತನಾಡಿದರು. ಶಿರಸಕುಮಾರ ಹಜೇರಿ, ಪ್ರಭುಗೌಡ ಮದರಕಲ್ಲ, ಮಂಜುನಾಥ ಶೆಟ್ಟಿ, ಜಿ.ಎ.ಕಸ್ತೂರಿ ಇತರರಿದ್ದರು.
Published on

ತಾಳಿಕೋಟೆ: ಪಟ್ಟಣದಲ್ಲಿ ಫುಟ್‌ಪಾತ್, ರಸ್ತೆ ಸೇರಿ ಇನ್ನಿತರ ಸಾರ್ವಜನಿಕ ಸ್ಥಳಗಳನ್ನು ಅತಿಕ್ರಮಿಸಿಕೊಂಡಿದ್ದ ಡಬ್ಬಾ ಅಂಗಡಿ, ಗೂಡಂಗಡಿಗಳನ್ನು ತೆರವುಗೊಳಿಸಿರುವುದು ಸ್ವಾಗತಾರ್ಹವಾಗಿದೆ ಎಂದು ಮುಖಂಡ ಶಿರಸಕುಮಾರ ಹಜೇರಿ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಪಟ್ಟಣದ ಪ್ರಮುಖರ ಸಭೆಯ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಸುಪ್ರೀಂಕೋರ್ಟ್ ಆದೇಶ ಹಾಗೂ ಜಿಲ್ಲಾಧಿಕಾರಿ ಸೂಚನೆಯಂತೆ ತಾಳಿಕೋಟೆ ಪುರಸಭೆ ಮುಖ್ಯಾಧಿಕಾರಿ ಅತಿಕ್ರಮಣ ತೆರವು ಮಾಡಿದ್ದಾರೆ. ಬಸ್ ನಿಲ್ದಾಣ ಮುಂಭಾಗದ ಡಬ್ಬಾ ಅಂಗಡಿಕಾರರು ಅತ್ರಿಕ್ರಮಣ ತೆರವಿಗೆ ವಿರೋಧ ವ್ಯಕ್ತಪಡಿಸಿರುವುದು ಸರಿಯಲ್ಲ. ಅಂಗಡಿಕಾರರು ಮುಖ್ಯ ರಸ್ತೆ ಬಂದ್ ಮಾಡಿ ಧರಣಿ ನಡೆಸಿರುವುದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆ ಉಂಟಾಗಿದೆ. ಮುಖ್ಯಾಧಿಕಾರಿ ಮೋಹನ್ ಜಾಧವ ಅವರ ಕಾರ್ಯಕ್ಕೆ ಜಿಲ್ಲೆಯ ಹಿರಿಯ ಅಧಿಕಾರಿಗಳು ಬಲ ನೀಡಿ ಅರ್ಧಕ್ಕೆ ನಿಂತಿರುವ ತೆರವು ಕಾರ್ಯಚರಣೆ ಪೂರ್ಣಗೊಳಿಸಬೇಕು ಎಂದು ತಾಳಿಕೋಟೆ ಪಟ್ಟಣದ ಸಾರ್ವಜನಿಕರ ಪರವಾಗಿ ಒತ್ತಾಯಿಸಿದರು.

ನಿವೃತ್ತ ಎಸ್‌ಪಿ ಎಸ್.ಬಿ.ಕಟ್ಟಿಮನಿ ಮಾತನಾಡಿ, ಬಸ್ ನಿಲ್ದಾಣದ ಮುಂಭಾಗದ 23 ಡಬ್ಬಾ ಅಂಗಡಿಕಾರರು ಇದೇ ಅಂಗಡಿಗಳಿಂದಲೇ ನಮ್ಮ ಜೀವನ ನಡೆಯುತ್ತಿದೆ ಎಂದು ಧರಣಿಗೆ ಕುಳಿತಿದ್ದಾರೆ. 23 ಅಂಗಡಿಕಾರರಲ್ಲಿ 15 ಅಂಗಡಿಕಾರರು ತಮ್ಮ ಅಂಗಡಿಗಳನ್ನು ಬಾಡಿಗೆ ನೀಡಿದ್ದರು. ಬಾಡಿಗೆದಾರರು ಮೊಬೈಲ್ ಅಂಗಡಿ, ಯಗ್‌ರೈಸ್ ಅಂಗಡಿ, ಸ್ಟೇಷನರಿ ಅಂಗಡಿ, ಹೋಟೆಲ್ ಇನ್ನಿತರ ಅಂಗಡಿಗಳನ್ನು ನಡೆಸುತ್ತಿದ್ದರು. ಅಲ್ಲಿ ಯಾರೂ ಚರ್ಮ ಕುಟೀರ ಅಂಗಡಿ ನಡೆಸುತ್ತಿಲ್ಲ. ಆದರೆ ಈಗ ಅಂಗಡಿಗಳಿಂದಲೇ ನಮ್ಮ ಜೀವನ ನಡೆಯುತ್ತಿತ್ತು ಎಂದು ಹೇಳಿ ಧರಣಿ ಕುಳಿತಿರುವದು ಹಾಸ್ಯಾಸ್ಪದವಾಗಿದೆ ಎಂದರು.

ಪುರಸಭೆ ಮಾಜಿ ಸದಸ್ಯರಾದ ಪ್ರಭುಗೌಡ ಮದರಕಲ್ಲ, ಸುರೇಶ ಹಜೇರಿ ಮಾತನಾಡಿ, ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಸಿರುವುದು ಒಳ್ಳೆಯದಾಗಿದೆ. ಅರ್ಧಕ್ಕೆ ನಿಲ್ಲಿಸಿರುವ ತೆರವು ಕಾರ್ಯಾಚರಣೆ ಮುಂದುವರಿಸಿ ಪಟ್ಟಣದ ಸೌಂದರ್ಯ ಹೆಚ್ಚಿಸಲು ಜಿಲ್ಲಾಧಿಕಾರಿ ಪುರಸಭೆ ಮುಖ್ಯಾಧಿಕಾರಿಗೆ ಸೂಚಿಸಬೇಕು. ಇಲ್ಲದಿದ್ದರೆ ಪಕ್ಷಾತೀತವಾಗಿ ಎಲ್ಲರೂ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮುಖಂಡ ಮಂಜುನಾಥ ಶೆಟ್ಟಿ, ಕರವೇ ಅಧ್ಯಕ್ಷ ರವಿ ಕಟ್ಟಿಮನಿ ಮಾತನಾಡಿದರು. ತಾಳಿಕೋಟೆ ಸಾರ್ವಜನಿಕರ ಪರವಾಗಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲು ಬರೆದ ಮನವಿ ಪತ್ರವನ್ನು ಜಿ.ಎ.ಕಸ್ತೂರಿ ಓದಿ ಹೇಳಿದರು. ಪಟ್ಟಣದ ಮುಖಂಡರಾದ ಮುತ್ತಪ್ಪಣ್ಣ ಚಮಲಾಪೂರ, ಎಂ.ಕೆ.ಚೋರಗಸ್ತಿ, ಪರಶುರಾಮ ತಂಗಡಗಿ, ಅಣ್ಣಾಜಿ ಜಗತಾಪ, ಎಸ್.ಎಚ್.ಪಡಸಾಲಿ, ಆರ್.ಸಿ.ಚವ್ಹಾಣ, ಆರ್.ಆರ್.ಕಟ್ಟಿಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net