

ತೇರದಾಳ: ತಾಲೂಕಿನ ಹಳಿಂಗಳಿ ಗ್ರಾಮದ ವಾರ್ಡ್ ನಂ. 6ರಲ್ಲಿರುವ ಸರ್ಕಾರಿ ಸರ್ವೆ ನಂ. 142ರಲ್ಲಿ ಅಂದಾಜು 15 ಅಡಿ ರಸ್ತೆ ಸ್ಥಳೀಯ ನಿವಾಸಿಗಳ ಅತಿಕ್ರಮಣಕ್ಕೊಳಗಾಗಿ ಕಾಣದಂತಾಗಿತ್ತು. ಹೀಗಾಗಿ ಹಳಿಂಗಳಿ ಗ್ರಾಮ ಪಂಚಾಯಿತಿಯ ಮನವಿ ಮೇರೆಗೆ ಶುಕ್ರವಾರ ತಹಸೀಲ್ದಾರ್ ವಿಜಯಕುಮಾರ ಕಡಕೋಳ ನೇತೃತ್ವದಲ್ಲಿ ಒತ್ತುವರಿ ಜಾಗವನ್ನು ತೆರವುಗೊಳಿಸಲಾಯಿತು.
ಗ್ರಾಮದ ಕಂಬಾರ ಮನೆಯಿಂದ ಶಾಂತಿನಾಥ ಪಾಟೀಲ ಅವರ ಮನೆ ಮುಂಭಾಗದ ರಸ್ತೆಯವರೆಗೆ ಅಕ್ರಮವಾಗಿ ನಿರ್ಮಿಸಲಾದ ದನದ ಶೆಡ್, ಕಾಂಪೌಂಡ್, ಕಲ್ಲಿನ ರಾಶಿ, ತಿಪ್ಪೆಗುಂಡಿಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಗಿದೆ.
ತೆರವು ಕಾರ್ಯಾಚರಣೆಯಲ್ಲಿ ಕಂದಾಯ ನಿರೀಕ್ಷಕ ಪ್ರಕಾಶ ಮಠಪತಿ, ಗ್ರಾಮ ಆಡಳಿತಾಧಿಕಾರಿ ಮಲ್ಲಿಕಾರ್ಜುನ ಕವಟಗೊಪ್ಪ, ಗ್ರಾಮ ಅಭಿವೃದ್ಧಿ ಅಧಿಕಾರಿ ತೇಜಸ್ವಿನಿ ಮರೆಗುದ್ದಿ, ಪಿಎಸ್‌ಐ ಅಪ್ಪು ಐಗಳಿ, ಅನೇಕ ಅಧಿಕಾರಿಗಳು ಇದ್ದರು. ಪೊಲೀಸ್ ಸಿಬ್ಬಂದಿ ರಕ್ಷಣೆಯಲ್ಲಿ ಕಾರ್ಯಾಚರಣೆ ಜರುಗಿತು.
ಗ್ರಾಮವು 2005 ರಿಂದ 2021ರವರೆಗೆ ಐದು ಬಾರಿ ಪ್ರವಾಹಕ್ಕೆ ಒಳಗಾಗಿದೆ. ಈ ಸಂದರ್ಭದಲ್ಲಿ ಬಸ್ ನಿಲ್ದಾಣ ಮಾರ್ಗದ ಪ್ರಮುಖ ರಸ್ತೆ ಬಂದ್ ಆಗಿದ್ದು, ತೇರದಾಳ ಮತ್ತು ರಬಕವಿ ಮಾರ್ಗ ಸಂಪರ್ಕಕ್ಕೆ ಪರ್ಯಾಯ ರಸ್ತೆಯ ಅವಶ್ಯಕತೆ ಇತ್ತು. ಆದರೆ, ಕಳೆದ ಇಪ್ಪತ್ತು ವರ್ಷಗಳಿಂದ ಸ್ಥಳೀಯರ ಅತಿಕ್ರಮಣದಿಂದಾಗಿ ರಸ್ತೆ ಕಾಣದಂತಾಗಿತ್ತು. ಇದೀಗ ಗ್ರಾಪಂ ಅಧ್ಯಕ್ಷ ಪ್ರದೀಪ ನಂದೆಪ್ಪನವರ ಮುತುವರ್ಜಿಯಲ್ಲಿ ಸ್ಥಳೀಯರ ಒತ್ತಾಯದ ಮೇರೆಗೆ ರಸ್ತೆ ತೆರವು ಕಾರ್ಯಾಚರಣೆ ನಡೆದಿರುವುದು ಗ್ರಾಮಸ್ಥರಿಗೂ ಖುಷಿಯಾಗಿದೆ.