

ಬೆಂಗಳೂರು: ಬೆಂಗಳೂರು ಬನಶಂಕರಿ ಬಳಿಯ ಬಿ.ಎಂ.ಕಾವಲ್ ಸರ್ವೆ ನಂ. 92ರಲ್ಲಿ ಒತ್ತುವರಿ ಮಾಡಲಾಗಿದ್ದ ಸುಮಾರು 60 ಕೋಟಿ ರೂ. ಮೌಲ್ಯದ 5 ಎಕರೆ ಅರಣ್ಯ ಭೂಮಿಯನ್ನು ತೆರವು ಮಾಡಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.
ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಕಳೆದ ವಾರ ಅರಣ್ಯ ಭವನದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಒತ್ತುವರಿ ತೆರವುಗೊಳಿಸುವಂತೆ ನೀಡಿದ್ದ ಸ್ಪಷ್ಟ ಸೂಚನೆ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ ಕಾರ್ಯಪ್ರವೃತ್ತರಾದ ಬೆಂಗಳೂರು ಅರಣ್ಯಾಧಿಕಾರಿಗಳು ಒತ್ತುವರಿ ತೆರವು ಮಾಡಿಸಿರುವುದಾಗಿ ತಿಳಿಸಿದ್ದಾರೆ ಎಂದರು.
ಬಿ.ಎಂ. ಕಾವಲ್ ವ್ಯಾಪ್ತಿಯ ಗೊಟ್ಟೆಗೆರೆಪಾಳ್ಯದ ವೆಂಕಟಪ್ಪ ಮತ್ತು ಅವರ ತಾಯಿ ತಿಮ್ಮಕ್ಕ ಒತ್ತುವರಿ ಮಾಡಿದ್ದರು.5 .20 ಎಕರೆ ಅರಣ್ಯ ಒತ್ತುವರಿ ಮಾಡಿದ್ದರು. ಎ.ಸಿ.ಎ್. ನ್ಯಾಯಾಲಯದ ಆದೇಶದ ಮೇರೆಗೆ ಈ ಭೂಮಿ ತೆರವು ಮಾಡಲಾಗಿದೆ. ಈ ಸಂಬಂಧ ಜೆ.ಎಂ.ಎ್.ಸಿ. ನ್ಯಾಯಾಲಯದಲ್ಲಿ ಪ್ರತಿವಾದಿಗಳು ಹಾಕಿದ್ದ ಮೊಕದ್ದಮೆ ವಜಾ ಆಗಿದೆ.
ನನ್ನ ಆದೇಶದ ನಂತರ 2021ರಲ್ಲಿ ಅರಣ್ಯಇಲಾಖೆ ಪರವಾಗಿ ಆದೇಶ ಆಗಿದ್ದ ಸುಮಾರು 60 ಕೋಟಿ ರೂ.ಮಾರುಕಟ್ಟೆ ಮೌಲ್ಯದ ಅರಣ್ಯ ಭೂಮಿ ಒತ್ತುವರಿಯನ್ನು ತೆರವು ಗೊಳಿಸಲಾಗಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.