34 ಕೋಟಿ ಮೌಲ್ಯದ ಒತ್ತುವರಿ ಜಮೀನು ತೆರವು: ಬೆಂಗಳೂರು ನಗರ ಡಿಸಿ ಮಾಹಿತಿ

Vijayavani Logo
Published on

ಬೆಂಗಳೂರು: ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಒತ್ತುವರಿಯಾಗಿದ್ದ 11 ಎಕರೆ 8 ಗುಂಟೆ ವಿಸ್ತೀರ್ಣದ ಸರ್ಕಾರಿ ಜಮೀನನ್ನು ತೆರವುಗೊಳಿಸಿ ಮತ್ತೆ ಜಿಲ್ಲಾಡಳಿತದ ಸುಪರ್ದಿಗೆ ಪಡೆಯಲಾಗಿದೆ.

ನಗರ ಜಿಲ್ಲೆಯಾದ್ಯಂತ ವಿವಿಧ ತಾಲ್ಲೂಕುಗಳ ತಹಸೀಲ್ದಾರ್‌ಗಳು ಶುಕ್ರವಾರ ಕಾರ್ಯಾಚರಣೆ ನಡೆಸಿ ತಮ್ಮ ವ್ಯಾಪ್ತಿಯಲ್ಲಿ ಒತ್ತುವರಿಯಾಗಿದ್ದ ಕೆರೆ ಜಾಗ, ಸರ್ಕಾರಿ ಬಂಡೆ ಸಹಿತ ಇತರ ಜಮೀನನ್ನು ಸುಪರ್ದಿಗೆ ಪಡೆಯಲಾಗಿದೆ. ಈ ಜಮೀನಿನಲ್ಲಿ ಈಗ ಸರ್ಕಾರಿ ಸ್ವತ್ತು ಎಂಬ ಲಕ ಕೂಡ ಹಾಕಲಾಗಿದೆ ಎಂದು ನಗರ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಯಲಹಂಕ ತಾಲೂಕಿನ ಹೆಸರಘಟ್ಟ ಹೋಬಳಿಯ ಕಾಕೋಳು ಗ್ರಾಮದ ಸ.ನಂ. 44ರ ಸರ್ಕಾರಿ ಕೆರೆಗೆ ಸೇರಿದ 11 ಎಕರೆ ಜಮೀನನ್ನು ವಶಕ್ಕೆ ಪಡೆಯಲಾಯಿತು. ಇದರ ಮೌಲ್ಯ ಅಂದಾಜು 33 ಕೋಟಿ ರೂ. ಆಗಿದೆ. ಜತೆಗೆ ಹೆಸರಘಟ್ಟ ಗ್ರಾಮದಲ್ಲಿ ಸರ್ಕಾರಿ ಹೆರಿಗೆ ಆಸ್ಪತ್ರೆಗೆ ಸೇರಿದ್ದ 4 ಗುಂಟೆ, ಯಲಹಂಕ ಹೋಬಳಿಯ ತಿರುಮೇನಹಳ್ಳಿ ಗ್ರಾಮದಲ್ಲಿ 2 ಗುಂಟೆ ಸರ್ಕಾರಿ ಬಂಡೆ ಜಾಗದ ಒತ್ತುವರಿಯನ್ನು ತೆರವುಗೊಳಿಸಲಾಗಿದೆ.

ಬೆಂಗಳೂರು ದಕ್ಷಿಣ ತಾಲೂಕಿನ ಬೇಗೂರು ಹೋಬಳಿಯ ಮೈಲಸಂದ್ರ ಗ್ರಾಮದ ಕೆರೆಗೆ ಸೇರಿರುವ 2 ಗುಂಟೆ ಜಾಗವನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net