

ಹಳಿಯಾಳ: ತಾಲೂಕಿನ ಭಾಗವತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ತ್ರೀ ಚೇತನ ಅಭಿಯಾನದ ಜಾಥಾ ಕಾರ್ಯಕ್ರಮ ಹಮ್ಮಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಕೆಲಸಕ್ಕೆ ಬರುವಂತೆ ಪ್ರೋತ್ಸಾಹಿಸಲಾಗುತ್ತಿದೆ ಎಂದು ತಾಪಂ ಐಇಸಿ ಸಂಯೋಜಕಿ ಸೌಂದರ್ಯ ಕುರಕುರಿ ತಿಳಿಸಿದರು.
ಭಾಗವತಿ ಗ್ರಾಮದಲ್ಲಿ ಸ್ತ್ರೀಚೇತನ ಅಭಿಯಾನಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು. ಏ. 1ರಿಂದ ನರೇಗಾ ಕೂಲಿ ದರ ಹೆಚ್ಚಳವಾಗಿದೆ. ಇದು ಕೂಲಿದಾರರಿಗೆ ಪ್ರೋತ್ಸಾಹ ನೀಡಿ ಕೆಲಸಕ್ಕೆ ಬರುವಂತೆ ಪ್ರೇರೇಪಿಸಲು ಸಹಾಯಕವಾಗಿದೆ. ಹಾಗೆಯೇ ಯೋಜನೆಯಡಿ 65 ವರ್ಷ ಮೇಲ್ಪಟ್ಟ ವೃದ್ಧರು, ಅಂಗವಿಕಲರು ಹಾಗೂ ಗರ್ಭಿಣಿಯರಿಗೆ ಕೆಲಸದಲ್ಲಿ ರಿಯಾಯಿತಿ ನೀಡಲಾಗುತ್ತಿದೆ ಎಂದರು.
ಗ್ರಾಮದಲ್ಲಿ ಹೆಚ್ಚು ಸಿದ್ದಿ ಸಮುದಾಯದ ಜನರಿದ್ದು, ಅವರನ್ನು ಗಮನದಲ್ಲಿಟ್ಟುಕೊಂಡು ಗ್ರಾಮ ಪಂಚಾಯಿತಿಯಿಂದ ಜಾಗೃತಿ ಜಾಥಾ ಕೈಗೊಂಡು ಜನರಿಗೆ ಯೋಜನೆಯ ಕುರಿತು ವಿವರವಾದ ಮಾಹಿತಿ ನೀಡಿ ಲಾಭ ಪಡೆದು ಆರ್ಥಿಕವಾಗಿ ಸಬಲರಾಗುವಂತೆ ತಿಳಿಸಲಾಗುತ್ತಿದೆ ಎಂದು ತಿಳಿಸಿದರು.
ನರೇಗಾ ತಾಂತ್ರಿಕ ಸಂಯೋಜಕ ಮಹೇಶ ಪಟಗಾರ, ಕಾರ್ಯದರ್ಶಿ ಪಿ.ಎಂ. ಪಾಟೀಲ, ತಾಂತ್ರಿಕ ಸಹಾಯಕ ವಿನಯ ಕೋಳೂರ, ಡಿಇಒ ಅಣ್ಣಪ್ಪ ಮಡಿವಾಳ ಇತರರಿದ್ದರು.