ಉದಯೊನ್ಮುಖ ಲೇಖಕರಿಗೆ ಪ್ರೋತ್ಸಾಹ : ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ

WhatsApp Image 2022-09-17 at 3.02.24 PM
ವಿಜಯಪುರ ನಗರದ ವಿಷನ್ ಸಿಟಿ ಸಮುದಾಯ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಾಹಿತಿ ಭಾರತಿ ಪಾಟೀಲ ಅವರ ‘ಕವನ ಕುಸುಮ’ ಕವನ ಸಂಕಲನವನ್ನು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಂಬುನಾಥ ಕಂಚ್ಯಾಣಿ ಬಿಡುಗಡೆ ಮಾಡಿದರು. ಹಾಸಿಂಪೀರ ವಾಲಿಕಾರ, ಕೆ.ಸುನಂದಾ, ಎಚ್.ಜಿ.ಮಿರ್ಜಿ, ಎಂ.ಎಂ.ಗುಳೇದಗುಡ್ಡ, ಶಂಕರಗೌಡ ಪಾಟೀಲ್, ಮಲ್ಲಿಕಾರ್ಜುನ ಪಾಟೀಲ್ ಇತರರಿದ್ದರು.
Published on

ವಿಜಯಪುರ: ನಮ್ಮ ನಾಡು- ನುಡಿ, ಸಂಸ್ಕೃತಿಯ ರಕ್ಷಣೆಗೆ ಕಂಕಣಬದ್ಧರಾಗಿದ್ದೇವೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಅಭಿಪ್ರಾಯ ವ್ಯಕ್ತಪಡಿಸಿದರು.

ಇಲ್ಲಿನ ವಿಷನ್ ಸಿಟಿ ಸಮುದಾಯ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಾಹಿತಿ ಭಾರತಿ ಪಾಟೀಲ ಅವರ ‘ಕವನ ಕುಸುಮ’ ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಉದಯೊನ್ಮುಖ ಲೇಖಕರಿಗೆ ಸರ್ವ ರೀತಿಯ ಸಹಕಾರ ಹಾಗೂ ಪ್ರೋತ್ಸಾಹ ನೀಡುತ್ತೇವೆ. ಕೌಟುಂಬಿಕ ಮತ್ತು ಸಾಹಿತ್ಯಿಕ, ಸಾಮಾಜಿಕ ಜವಾಬ್ದಾರಿ, ಸಂಸ್ಕಾರ, ಹಿರಿಯರನ್ನು ಗೌರವಿಸುವುದು, ಸರ್ವಧರ್ಮದ ತಿರುಳು ಕೃತಿಯಲ್ಲಿ ಅಡಕವಾಗಿದೆ. ಸಾಮಾಜಿಕ ಮೌಲ್ಯಗಳನ್ನು ಒಳಗೊಂಡಿದೆ. ಕನ್ನಡಮ್ಮನ ಮುಡಿಗೆ ಇನ್ನಷ್ಟು ಕೃತಿಗಳು ಏರಲಿ ಎಂದು ಹಾರೈಸಿದರು.

ಕೃತಿ ಬಿಡುಗಡೆ ಮಾಡಿದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಂಬುನಾಥ ಕಂಚ್ಯಾಣಿ ಮಾತನಾಡಿ, ಬರೆದಿದೆಲ್ಲ ಕವಿತೆಯಲ್ಲ, ಬರೆಯುವವರೆಲ್ಲ ಕವಿಗಳಾಗುವುದಿಲ್ಲ. ಲೇಖಕರ ಮನದಾಳದ ಭಾವಗಳ ಹೊಯ್ದಾಟವು ಹೊರಹೊಮ್ಮಿ ಬರೆಯಲ್ಪಟ್ಟ ಅದ್ಭುತ ಪದಗಳ ಜೋಡಣೆ ಸಾಹಿತ್ಯ ಎಂಬುವದಾಗಿ ವಿವರಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಗೌರವ ಕಾರ್ಯದರ್ಶಿ ಕೆ.ಸುನಂದಾ ಕೃತಿ ಪರಿಚಯಿಸಿ, ಕವನಗಳು ವಿಭಿನ್ನ ವಿಷಯ ವಸ್ತುವನ್ನು ಹೊಂದಿವೆ. ಪ್ರಾಸಪದಗಳೊಂದಿಗೆ ರೂಪಗೊಂಡಿವೆ. ‘ಅಪ್ಪ ನೀನರಬೇಕಿತ್ತು’ ‘ಮನ ಮಹಾವೃಕ್ಷ’ ಮತ್ತು ‘ಮಕ್ಕಳೆ ನಿಮಗರಿವಿಲ್ಲ’ ಇತ್ಯಾದಿ ಕವನಗಳು ವಿಶಿಷ್ಟ ಹಾಗೂ ಅರ್ಥಪೂರ್ಣವಾಗಿ ಮೂಡಿಬಂದಿವೆ ಎಂದರು.

ಎಚ್.ಜಿ.ಮಿರ್ಜಿ, ಎಂ.ಎಂ.ಗುಳೇದಗುಡ್ಡ, ಶಂಕರಗೌಡ ಪಾಟೀಲ್, ಮಲ್ಲಿಕಾರ್ಜುನ ಪಾಟೀಲ್, ಎಂ.ಎಸ್. ಮಲಕನಮರಡಿ, ಶಿವನಗೌಡ ಪಾಟೀಲ್, ಸ್ಮೀತಾ ಕೊಂಡಗೂಳಿ, ಸುರೇಖಾ ಸಬರದ, ಅನಿತಾ ಕಣಕಾಲ, ಕವಿತಾ ಇಂಡಿ, ಪುಷ್ಪಲತಾ ಬಿರಾದಾರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net