ಗ್ರಾಮೀಣ ಕ್ರೀಡಾ ಪಟುಗಳಿಗೆ ಪ್ರೋತ್ಸಾಹ ಅಗತ್ಯ

10-MDG-1P1
Published on

ಮೂಡಿಗೆರೆ: ಗ್ರಾಮೀಣ ಭಾಗದಲ್ಲಿ ಎಲೆಮರೆ ಕಾಯಿಯಂತಿರುವ ಕ್ರೀಡಾ ಪ್ರತಿಭೆಗಳಿಗೆ ಸಂಘ ಸಂಸ್ಥೆಗಳು ಪ್ರೋತ್ಸಾಹ ನೀಡಿದರೆ ತಮ್ಮ ಪ್ರತಿಭೆ ಪ್ರದರ್ಶಿಸಲು ಉತ್ತಮ ಅವಕಾಶ ದೊರೆಯುತ್ತದೆ ಎಂದು ಜಿಪಂ ಮಾಜಿ ಸದಸ್ಯ ಸಾತಿ ಸುಂದರೇಶ್ ಹೇಳಿದರು.

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ಸಾಫ್ಟ್‌ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕೆಎಸ್‌ಪಿಎಲ್ ಸಾಫ್ಟ್ ಬಾಲ್ ಕ್ರಿಕೆಟ್ ಲೀಗ್ ಮಂಗಳೂರು ತಂಡದ ತರಬೇತುದಾರರಾಗಿ ಮುನ್ನಡೆಸಿ ತಂಡ ಪ್ರಥಮ ಸ್ಥಾನ ಪಡೆಯಲು ಕಾರಣರಾದ ರಮೇಶ್ ಕೆಳಗೂರು, ರಾಷ್ಟ್ರೀಯ ಕಬ್ಬಡಿ ಕ್ರೀಡಾಕೂಟಕ್ಕೆ ಕರ್ನಾಟಕ ತಂಡದ ನಾಯಕಿಯಾಗಿ ಆಯ್ಕೆಯಾಗಿರುವ ಎಸ್.ರಕ್ಷಿತಾ, ಕಿರುತೆರೆ ಹಾಸ್ಯನಟ ರಮೇಶ್ ಯಾದವ್ ಅವರಿಗೆ ವಿವಿಧ ಸಂಘಟನೆಯಿಂದ ಪ್ರವಾಸಿ ಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ಗ್ರಾಮೀಣ ಕ್ರೀಡೆಗಳಾದ ಕ್ರಿಕೆಟ್, ಕಬಡ್ಡಿ, ಟೆನ್ನಿಸ್, ವಾಲಿಬಾಲ್ ಲಗೋರಿ ಚಿನ್ನಿದಾಂಡು, ಮರಕೋತಿ ಸೇರಿದಂತೆ ವಿವಿಧ ಗ್ರಾಮೀಣ ಆಟಗಳನ್ನು ಮಕ್ಕಳು ಮತ್ತು ಯುವಕರು ಇಂದಿಗೂ ಆಡುತ್ತಾರೆ. ಶಾಲೆ ಮತ್ತು ಕಾಲೇಜಿನಲ್ಲಿ ನಡೆಯುವ ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಕ್ಲಸ್ಟರ್, ತಾಲೂಕು, ಜಿಲ್ಲಾ, ರಾಜ್ಯ, ರಾಷ್ಟ್ರಮಟ್ಟಕ್ಕೂ ಹೋಗುವ ಅವಕಾಶ ಕೆಲ ವಿದ್ಯಾರ್ಥಿಗಳಿಗೆ ಮಾತ್ರ ಸಿಗುತ್ತದೆ. ಕ್ರೀಡಾಕೂಟದಲ್ಲಿ ಭಾಗವಹಿಸುವ ಎಲ್ಲ ವಿದ್ಯಾರ್ಥಿಗಳು ಅವಕಾಶವಿಲ್ಲ ಎಂಬ ನಿರಾಸೆಯಿಂದ ತಮ್ಮ ಆಟ ಮೂಟಕುಗೊಳಿಸಿ ಕ್ರೀಡೆಯಿಂದ ಹಿಂದಕ್ಕೆ ಸರಿಯುತ್ತಾರೆ. ಗ್ರಾಮೀಣ ಭಾಗದಲ್ಲಿರುವ ಸಂಘ-ಸಂಸ್ಥೆಗಳು ಪ್ರತಿ ತಿಂಗಳಿಗೊಂದರಂತೆ ಕ್ರೀಡಾಕೂಟಗಳನ್ನು ಆಯೋಜಿಸಿದರೆ ಕ್ರೀಡೆಯಿಂದ ದೂರ ಉಳಿಯುವ ಎಲ್ಲ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ತಿಳಿಸಿದರು.

ತರಬೇತುದಾರ ರಮೇಶ್ ಕೆಳಗೂರು ಹಾಗೂ ಕಬಡ್ಡಿಪಟು ಎಸ್.ರಕ್ಷಿತಾ, ಹಾಸ್ಯನಟ ರಮೇಶ್ ಯಾದವ್ ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಲಾಯಿತು. ಭೀಮಾ ಕೊರೆಗಾಂವ್ ಆಚರಣಾ ಸಮಿತಿ ತಾಲೂಕು ಘಟಕದ ಅಧ್ಯಕ್ಷ ಸುಂದ್ರೇಶ್ ಕನ್ನಾಪುರ, ಹರೀಶ್, ಕಿರಣ್, ರುದ್ರೇಶ್, ಭಾನುಪ್ರಕಾಶ್, ಪೂರ್ಣೇಶ್, ಸುಂದ್ರೇಶ್ ಹೊಯ್ಸಳಲು, ಜಗದೀಶ್ ಚಕ್ರವರ್ತಿ, ನಾಗೇಶ್ ಮಡ್ಡಿಕೆರೆ, ಸುರೇಶ್, ಗಣೇಶ್, ವಸಂತ್, ಸುರೇಶ್, ಚಂದ್ರೇಶ್, ರಘು, ಸುರೇಂದ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net