

ಬಾಳೆಹೊನ್ನೂರು: ವಿದ್ಯಾರ್ಥಿಗಳು ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಪಾಲಕರು ಶಿಕ್ಷಕರ ಪ್ರೋತ್ಸಾಹ ಅಗತ್ಯ ಎಂದು ಬಾಳೆಹೊನ್ನೂರು ವಿದ್ಯಾಸಂಸ್ಥೆ ಕಾರ್ಯದರ್ಶಿ ಬಿ.ಸಿ.ಗೀತಾ ಹೇಳಿದರು.
ಎಸ್‌ಜೆಆರ್ ಪಿಯು ಕಾಲೇಜಿನ ವಿದ್ಯಾರ್ಥಿ ಸಾಲೀಮ್ ಹ್ಯಾಮರ್ ಥ್ರೋ ಕ್ರೀಡೆಯಲ್ಲಿ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಜೇಸಿಐ ಸಂಸ್ಥೆಯಿಂದ 15 ಸಾವಿರ ಮೊತ್ತದ ರೂ.ಚೆಕ್ ವಿತರಿಸಿ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಯೊಬ್ಬ ಹ್ಯಾಮರ್ ಥ್ರೋ ಕ್ರೀಡೆಯಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುವುದು ಇಡೀ ಊರಿಗೆ ಹೆಮ್ಮೆ ತಂದಿದೆ ಎಂದರು
ವಿದ್ಯಾರ್ಥಿಯು ರಾಷ್ಟ್ರಮಟ್ಟದ ಸ್ಪರ್ಧೆಗೆ ತೆರಳಲು ಅಗತ್ಯವಿರುವ ವಿಮಾನದ ಟಿಕೆಟ್ ಅನ್ನು ಸಂಸ್ಥೆಯಿಂದ ವ್ಯವಸ್ಥೆ ಮಾಡಿಕೊಡಲಾಗುವುದು. ಇತರೆ ಯಾವುದೇ ಅಗತ್ಯಗಳು ಇದ್ದರೆ ಪೂರೈಸಲಾಗುವುದು ಎಂದರು.
ಜೇಸಿಐ ಅಧ್ಯಕ್ಷ ಎನ್.ಶಶಿಧರ್ ಮಾತನಾಡಿ, ವಿದ್ಯಾರ್ಥಿ ಸಾಲೀಮ್ ಅವರ ಸಾಧನೆ ಶ್ಲಾಘನೀಯ.ಅವರ ಶ್ರಮದಿಂದ ಇಂದು ಉನ್ನತ ಸ್ಥಾನ ತಲುಪಿದ್ದಾರೆ. ಜೇಸಿ ಸಂಸ್ಥೆಯಿಂದ ಪ್ರಸ್ತುತ ಹ್ಯಾಮರ್ ಥ್ರೋ ಆಟದಲ್ಲಿ ಬಳಸಲು 15 ಸಾವಿರ ರೂ.ಮೌಲ್ಯದ ಶೂ ಖರೀದಿಸಲು ಚೆಕ್ ವಿತರಿಸಲಾಗಿದೆ. ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿಯೂ ವಿಜೇತರಾಗಿ ವಾಪಾಸ್ ಮರಳುವ ನಿರೀಕ್ಷೆ ನಮ್ಮೆಲ್ಲರಲ್ಲಿ ಇದೆ. ಜೇಸಿ ಸಂಸ್ಥೆಯು ವ್ಯಕ್ತಿತ್ವ ವಿಕಸನದೊಂದಿಗೆ ಕ್ರೀಡೆಗೆ ಅಗ್ರಸ್ಥಾನದೊಂದಿಗೆ ಪ್ರೋತ್ಸಾಹ ನೀಡುತ್ತಿದೆ ಎಂದರು.
ಎಸ್‌ಜೆಆರ್ ಕಾಲೇಜು ಪ್ರಾಚಾರ್ಯ ಕೆ.ಆರ್.ಬೂದೇಶ್, ಪ್ರೌಢಶಾಲೆ ಹಿರಿಯ ಶಿಕ್ಷಕ ಬಿ.ಎಸ್.ಕುಮಾರಚಂದ್ರ ನಾಯಕ್, ಜೇಸಿಐ ಪೂರ್ವಾಧ್ಯಕ್ಷ ಸತೀಶ್ ಅರಳೀಕೊಪ್ಪ, ಸುಧಾಕರ್, ಕಾರ್ಯದರ್ಶಿ ಎಚ್.ಟಿ.ಶೃಜಿತ್, ಸದಸ್ಯರಾದ ಸಿ.ವಿ.ಸುನೀಲ್, ಇಬ್ರಾಹಿಂ ಶಾಫಿ, ಶಾಹಿದ್, ಚೇತನ್‌ಕುಮಾರ್, ಶಿಕ್ಷಕ ಅರವಿಂದ್, ಕೆ.ಎಂ.ರಾಕೇಶ್, ಪ್ರಶಾಂತ್‌ಕುಮಾರ್ ಮತ್ತಿತರರು ಹಾಜರಿದ್ದರು.