

ಮದ್ದೂರು: ಪ್ರಕೃತಿ ಸಂರಕ್ಷಣೆಯೊಟ್ಟಿಗೆ ಮಕ್ಕಳ ಭವಿಷ್ಯ ರೂಪಿಸುವ ಜತೆಯಲ್ಲೇ ಉನ್ನತೀಕರಣಕ್ಕೂ ಒತ್ತು ನೀಡಿ ಭವ್ಯ ಭಾರತ ನಿರ್ಮಾಣಕ್ಕೆ ಎಲ್ಲಾ ಸಮೂಹಗಳು ಒತ್ತು ನೀಡಬೇಕೆಂದು ಭಾರತ್ ವಿಕಾಸ್ ಪರಿಷತ್ ಮೈಸೂರು ಪ್ರಾಂತ ಅಧ್ಯಕ್ಷ ನಾಗಭೂಷಣ್ ಅಭಿಪ್ರಾಯಪಟ್ಟರು.
ಪಟ್ಟಣದ ಭಾರತ್ ವಿಕಾಸ್ ಪರಿಷತ್ ಸೇವಾ ಟ್ರಸ್ಟ್ ಭವನದಲ್ಲಿ ಆಯೋಜಿಸಿದ್ದ ಕಾರ್ಮಿಕ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶ್ರಮಿಕ ವರ್ಗದ ಸೇವೆಯನ್ನು ಸ್ಮರಿಸುವುದರ ಜತೆಗೆ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಕಾರ್ಯ ಶ್ಲಾಘನೀಯ ಎಂದರು.
ಭಾರತ್ ವಿಕಾಸ್ ಪರಿಷತ್ ಹುಟ್ಟಿಗೆ ಈ ಹಿಂದೆ ನಡೆದ ಚೀನಾ ಮತ್ತು ಭಾರತ ದೇಶಗಳ ನಡುವಿನ ಯುದ್ಧವೇ ಕಾರಣವೆಂದ ಅವರು , ದೇಶಾಭಿಮಾನದ ಹಿತದೃಷ್ಟಿ ಮತ್ತು ಸೈನಿಕರು ದೇಶದ ಪ್ರಜೆಗಳ ಆರೋಗ್ಯ ಸಂಬಂಧ ಅಂದು ಭಾ.ವಿ.ಪ ದೇಶದಾದ್ಯಂತ ಜನ್ಮ ತಾಳಿರುವ ಜತೆಗೆ ಪ್ರಸ್ತುತ ದೇಶ ಮತ್ತು ರಾಜ್ಯದ ಎಲ್ಲೆಡೆ ತನ್ನ ಶಾಖೆಗಳ ಮೂಲಕ ಕರ್ತವ್ಯ ನಿರ್ವಹಿಸುತ್ತಿದೆ ಎಂದರು.
ದೇಶದ ಭವಿಷ್ಯ ತರಗತಿಗಳಲ್ಲಿ ಜನ್ಮ ತಳೆಯುವುದೆಂಬ ಹಿರಿಯರ ಅಣತಿಯಂತೆ ಇಂದಿನ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪುರಸ್ಕರಿಸುವ ಜತೆಗೆ ಸಂಸ್ಕಾರ, ಸಂಸ್ಕೃತಿ ಉಣಬಡಿಸಿ ದೇಶದ ಸತ್ಪ್ರಜೆಗಳನ್ನಾಗಿಸುವ ಮತ್ತು ಶ್ರಮಿಕ ವರ್ಗದ ಹಿತ ಕಾಯುವ ಅವಶ್ಯ ಹೆಚ್ಚಿದೆ ಎಂದರು.
ಪ್ರತಿಭಾ ಪುರಸ್ಕಾರ: ಶ್ರಮಿಕರು ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದ ಬಿಇಒ ಎಸ್.ಬಿ.ಧನಂಜಯ ವಿದ್ಯಾರ್ಥಿ ದೆಶೆಯಲ್ಲಿ ಸಂಸ್ಕಾರವಿಲ್ಲದ ಯಾವುದೇ ವ್ಯಕ್ತಿಯು ಸಾಧನೆ ಮಾಡಲು ಅಸಾಧ್ಯ. ತನ್ನ ತಾಯಿ-ತಂದೆ, ಗುರುಗಳು ಹುಟ್ಟಿದ ಊರು, ತನ್ನ ದೇಶವನ್ನು ಅಭಿಮಾನದಿಂದ ಅಪ್ಪುವ ಜತೆಗೆ ಎಲ್ಲರ ಹಿತ ಗಮನದಲ್ಲಿಟ್ಟುಕೊಂಡು ಶಿಸ್ತುಬದ್ಧ ಅಭ್ಯಾಸಕ್ಕೆ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರತಿಭಾ ಪಲಾಯನದಿಂದ ದೇಶದ ಆಸ್ಮಿತೆಗೆ ಧಕ್ಕೆಯುಂಟಾಗುತ್ತಿದ್ದು, ದೇಶದಲ್ಲಿ ಕಲಿತು ಹೊರ ದೇಶಗಳಿಗೆ ಪಲಾಯನ ಮಾಡುತ್ತಿರುವ ಯುವಜನತೆ ಆತ್ಮಾವಲೋಕನ ಮಾಡಿಕೊಳ್ಳುವ ಅವಶ್ಯವಿದೆ ಎಂದರು.
ಅಭಿನಂದನೆ: ಕಟ್ಟಡ ಕಾರ್ಮಿಕ ಸಿ.ಬೆಟ್ಟಪ್ಪ, ಹಿರಿಯ ಸ್ವಚ್ಚತಾ ಸಿಬ್ಬಂದಿ ಗೌರಮ್ಮ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಕುಮಾರಿ ಸಿ.ಪುನೀತಾ, ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಕುಮಾರಿ ಕೌಸ್ತುಭಾ ಅವರನ್ನು ಕಾರ್ಯಕ್ರಮದ ವೇಳೆ ಅಭಿನಂದಿಸಿ ಗೌರವಿಸಲಾಯಿತು. ಭಾ.ವಿ.ಪ ಟ್ರಸ್ಟ್ ಅಧ್ಯಕ್ಷ ಡಿ.ಪಿ.ಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಭಾ.ವಿ.ಪ ಅಧ್ಯಕ್ಷ ಎಂ.ಮಹಾಲಿಂಗಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆ ವೇಳೆ ಕಾರ್ಯಕ್ರಮ ಸಂಚಾಲಕರಾದ ಭಾ.ವಿ.ಪ ಟ್ರಸ್ಟಿ ಶಿವನಂಜಯ್ಯ, ಭಾ.ವಿ.ಪ ಸದಸ್ಯ ಚಂದ್ರನಾಯಕ, ಕಾರ್ಯದರ್ಶಿ ಎಚ್.ಕೆ.ಆನಂದ್, ಕೋಶಾಧ್ಯಕ್ಷ ಎಲ್.ಚಂದ್ರಶೇಖರ್ ಇತರರು ಇದ್ದರು.