ಹೋಟೆಲ್ ಉದ್ಯಮಕ್ಕಾಗಿ ಮಹಿಳೆಯರಿಗೆ ಪ್ರೋತ್ಸಾಹ

CTD AKKA KEPE ---
Published on

ಚಿತ್ರದುರ್ಗ: ಹೋಟೆಲ್ ಉದ್ಯಮದಲ್ಲಿ ಮಹಿಳೆಯರು ಪಾಲ್ಗೊಳ್ಳಲು ಅಕ್ಕ ಕೆಫೆ ಉತ್ತೇಜನ ನೀಡಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅಭಿಪ್ರಾಯಪಟ್ಟರು.

ಜಿಪಂ, ಕೌಶಲಾಭಿವೃದ್ಧಿ ಉದ್ಯಮಶೀಲತಾ-ಜೀವನೋಪಾಯ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ(ಎನ್‌ಆರ್‌ಎಲ್‌ಎಂ)-ಸಂಜೀವಿನಿಯಿಂದ ಜಿಪಂ ಸ್ಥಾಪಿಸಿರುವ ಅಕ್ಕ ಕೆಫೆ ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಅಕ್ಕ ಕೆಫೆಗಳನ್ನು ಆರಂಭಿಸುವ ಕುರಿತು ಬಜೆಟ್‌ನಲ್ಲಿ ಘೋಷಿಸಿದ್ದರು. 2024ರ ಮಾರ್ಚ್ 8ರಂದು ರಾಜ್ಯದಲ್ಲಿ ಮೊದಲ ಅಕ್ಕ ಕೆಫೆಗೆ ಚಾಲನೆ ನೀಡಲಾಗಿತ್ತು. ನಂತರ ಇತರೆಡೆಗಳಲ್ಲಿ ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳ ನಿರ್ವಹಣೆಯೊಂದಿಗೆ ಆರಂಭಿಸಿದ ಅಕ್ಕ ಕೆಫೆಗಳು ಯಶಸ್ವಿಯಾಗಿವೆ. ಮಹಿಳೆಯರೇ ಇವುಗಳನ್ನು ನಿರ್ವಹಿಸುತ್ತಾರೆ. ಶುಚಿ ಮತ್ತು ರುಚಿ ಆಹಾರ ಸವಿಯಬಹುದು. ಮುಂದಿನ ದಿನಗಳಲ್ಲಿ ಜಿಲ್ಲೆಯ ಇತರೆಡೆ ಆರಂಭಿಸಲು ಚಿಂತಿಸಲಾಗಿದೆ ಎಂದರು.

ಇದೇ ವೇಳೆ ಉಪ್ಪಿಟ್ಟು, ಸಿರಿಧಾನ್ಯಗಳ ಬಾತ್, ಕಾಫಿ ಸವಿದು ಮೆಚ್ಚುಗೆ ವ್ಯಕ್ತಪಡಿಸಿದರು. ಆಹಾರದ ಗುಣಮಟ್ಟ ಚೆನ್ನಾಗಿರಬೇಕು. ಶುಚಿ ಹಾಗೂ ರುಚಿಗೆ ಆದ್ಯತೆ ನೀಡಿ, ನಿರಂತರ ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡುವಂತೆ ಸಚಿವರು ಸಲಹೆ ನೀಡಿದರು. ಮೊದಲ ಬಿಲ್ ಮೊತ್ತವನ್ನು ತಾವೇ ಪಾವತಿಸಿದರು.

ಜಿಪಂ ಸಿಇಒ ಡಾ.ಎಸ್. ಆಕಾಶ್ ಮಾತನಾಡಿ, ಕಡಿಮೆ ಬೆಲೆಯಲ್ಲಿ ಜನರಿಗೆ ಅಕ್ಕ ಕೆಫೆಯಲ್ಲಿ ರುಚಿಯಾದ ತಿಂಡಿ, ಊಟ ದೊರೆಯಲಿದೆ. ರಾಸಾಯನಿಕ ಬಣ್ಣ, ಕೃತಕ ರುಚಿಕಾರಕಗಳನ್ನು ಬಳಸುವುದಿಲ್ಲ. ಶುಚಿ ಮತ್ತು ಆರೋಗ್ಯಕರ ಆಹಾರ ನೀಡುವುದು ಅಕ್ಕ ಕೆಫೆ ಉ ದ್ದೇಶ. ನಿತ್ಯವೂ ಸಿರಿಧಾನ್ಯಗಳ ಖಾದ್ಯ ಇಲ್ಲಿ ದೊರೆಯುತ್ತದೆ ಎಂದರು.

ಎಂಎಲ್‌ಸಿ ಕೆ.ಎಸ್.ನವೀನ್, ಕುಡಾ ಅಧ್ಯಕ್ಷ ಎಂ.ಕೆ. ತಾಜ್‌ಪೀರ್, ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಆರ್. ಶಿವಣ್ಣ, ಉಪಾಧ್ಯಕ್ಷ ಡಿ.ಎನ್. ಮೈಲಾರಪ್ಪ, ಜಿಪಂ ಉಪ ಕಾರ್ಯದರ್ಶಿ ಡಾ. ರಂಗಸ್ವಾಮಿ, ಮುಖ್ಯ ಯೋಜನಾಧಿಕಾರಿ ಗಾಯತ್ರಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net