ಯುವಜನರು ಸೈನ್ಯಕ್ಕೆ ಸೇರಲು ಪ್ರೋತ್ಸಾಹಿಸಿ: ಎಡಿಸಿ ಡಾ.ಕುಮಾರ್

Yodha Namana
Published on

ಚಿಕ್ಕಮಗಳೂರು: ಸೇನೆ ಸೇರಿ ದೇಶಸೇವೆಯಲ್ಲಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಎನ್‍ಸಿಸಿ ಮತ್ತು ಎನ್‍ಎಸ್‍ಎಸ್‍ನಲ್ಲಿರುವ ಯುವಜನರನ್ನು ಪ್ರೋತ್ಸಾಹಿಸಬೇಕೆಂದು ಅಪರ ಜಿಲ್ಲಾಧಿಕಾರಿ ಡಾ. ಕುಮಾರ್ ಸಲಹೆ ನೀಡಿದರು.

ಶನಿವಾರ ನಗರದ ಕುವೆಂಪು ಕಲಾಮಂದಿರದಲ್ಲಿ ವಿಷನ್ ಚಿಕ್ಕಮಗಳೂರು ಟ್ರಸ್ಟ್, ಜಿಲ್ಲಾ ನಿವೃತ್ತ ಸೈನಿಕರ ಸಂಘ, ಶೃಂಗೇರಿಯ ಶಾರದಾಂಬ ಸೈನಿಕ ತರಬೇತಿ ಸಂಘ, ಜೀವಧಾರೆ ಟ್ರಸ್ಟ್ ಮಂಡ್ಯ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಶ್ರಯದಲ್ಲಿ ನೇತಾಜಿ ಸುಭಾಷ್‍ಚಂದ್ರ ಬೋಸ್ ಅವರ 124ನೇ ಜನ್ಮದಿನಾಚರಣೆ ಅಂಗವಾಗಿ ಶನಿವಾರ ಆಯೋಜಿಸಿದ್ದ ನಿವೃತ್ತ ಯೋಧರು ಹಾಗೂ ಯೋಧರ ಪತ್ನಿಯರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬೋಸರ ದೇಶಪ್ರೇಮ ಪ್ರೇರಕ:
ನೇತಾಜಿ ಸುಭಾಷ್ ಚಂದ್ರಬೋಸ್ ಯುವಕರು ರಕ್ತ ಕೊಡಿ, ಈ ದೇಶಕ್ಕೆ ಸ್ವಾತಂತ್ರ್ಯ ಕೊಡಿಸುವುದಾಗಿ ನೀಡಿದ ಒಂದು ಕರೆ ಇಡೀ ದೇಶದ ಯುವ ಸಮುದಾಯದಲ್ಲಿ ಕ್ರಾಂತಿ ಹುಟ್ಟಿಸಿತ್ತು. ಅವರಲ್ಲಿದ್ದ ದೇಶಪ್ರೇಮ ಯುವಜನತೆಗೆ ಪ್ರೇರಕವಾಗಬೇಕು. ಇಂದು ನಾವು ನೆಮ್ಮದಿಯ ಜೀವನ ನಡೆಸುತ್ತಿದ್ದೇವೆಂದರೆ ಅದಕ್ಕೆ ನಮ್ಮ ಸೈನಿಕರ ತ್ಯಾಗವೇ ಕಾರಣ ಎಂದರು.

ಯುವಜನರಲ್ಲಿ ದೇಶಸೇವೆಯ ಮನೋಭಾವ ಬೆಳೆಸುವಲ್ಲಿ ಎನ್‍ಎಸ್‍ಎಸ್ ಮತ್ತು ಎನ್‍ಸಿಸಿ ಬಹುಮುಖ್ಯ ಪಾತ್ರ ಹೊಂದಿದ್ದು, ವಿದ್ಯಾರ್ಥಿ ದಿಸೆಯಲ್ಲೇ ದೇಶಪ್ರೇಮ ಬೆಳೆಸಬೇಕೆಂದು ಸಲಹೆ ನೀಡಿದರು.

ಸೈನಿಕ ತರಬೇತಿ ಕೇಂದ್ರ:
ಜಿಲ್ಲಾ ವಿಜ್ಞಾನ ಕೇಂದ್ರದ ಕಾರ್ಯದರ್ಶಿ ಟಿ.ತ್ಯಾಗರಾಜ್ ಮಾತನಾಡಿ, ಸೇನೆ ಸೇರಲು ಜಿಲ್ಲೆಯ ಯುವಕರಿಗೆ ಉಚಿತ ತರಬೇತಿ ನೀಡಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಸೈನಿಕ ತರಬೇತಿ ಕೇಂದ್ರ ತೆರೆಯುವ ಚಿಂತನೆ ಇದೆ ಎಂದು ತಿಳಿಸಿದರು.

ನಿವೃತ್ತ ಸೈನಿಕ ನವಾಜ್ ಮಾತನಾಡಿ, 2009ನೇ ಸಾಲಿನಲ್ಲಿ ನನ್ನ ಸೇವೆ ಗೌರವಿಸಿ ಕೇಂದ್ರ ಸರ್ಕಾರ ರಾಷ್ಟ್ರಪತಿ ಪದಕ ನೀಡಿ ಗೌರವಿಸಿದೆ. ಜಿಲ್ಲೆಯ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೇನೆಗೆ ಸೇರಿ ಹಿರಿಮೆ ಸಾಧಿಸಬೇಕು ಎಂದರು.

ಜಿಲ್ಲಾ ನಿವೃತ್ತ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ಕೃಷ್ಣೇಗೌಡ, ಮಾಜಿ ಸೈನಿಕ ಸುರೇಶ್ ಮಾತನಾಡಿದರು. ಹುತಾತ್ಮ ಯೋಧರ ಪತ್ನಿಯರಾದ ಪ್ರೇಮಾ, ಚನ್ನಮ್ಮ ಅವರ ಪಾದಪೂಜೆ ಮಾಡಿ ಗೌರವಿಸಲಾಯಿತು. 86 ನಿವೃತ್ತ ಸೈನಿಕರಿಗೆ ಪುಷ್ಪಾರ್ಚನೆ ಮಾಡಿ ಸನ್ಮಾನಿಸಲಾಯಿತು.

ಉಪವಿಭಾಗಾಧಿಕಾರಿ ಡಾ. ಎಚ್.ಎಲ್.ನಾಗರಾಜ್, ಕ್ರೀಡಾ ಇಲಾಖೆ ಉಪನಿರ್ದೇಶಕಿ ಮಂಜುಳಾ ಹುಲ್ಲಹಳ್ಳಿ, ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್, ಶೃಂಗೇರಿ ಶಾರದಾಂಬ ಸೈನಿಕ ತರಬೇತಿ ಸಂಸ್ಥೆ ಮುಖ್ಯಸ್ಥ ಪಿ.ಎಸ್.ಮಂಜುನಾಥ್ ಕಾರ್ಯಕ್ರಮದಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net