

ವಿಜಯವಾಣಿ ಸುದ್ದಿಜಾಲ ಧಾರವಾಡ
ಸಂಗೀತದ ಭಾಷೆ ವಿಶ್ವದ ಭಾಷೆ. 64 ವಾತ್ಸಾಯನ ವಿದ್ಯೆಗಳಲ್ಲಿ ಸಂಗೀತಕ್ಕೆ ವಿಶೇಷ ಸ್ಥಾನಮಾನವಿದೆ. ಈ ಸಂಗೀತ ಕಲೆಗೆ ಜೀವನಕ್ಕೆ ಸ್ಫೂರ್ತಿ ನೀಡುವಂತಹ ಶಕ್ತಿ ಇದೆ ಎಂದು ಕರ್ನಾಟಕ ವಿಶ್ವ ವಿದ್ಯಾಲಯದ ಇಂಗ್ಲಿಷ ಪ್ರಾಧ್ಯಾಪಕ ಡಾ. ಮಲ್ಲಿಕಾರ್ಜುನ ಪಾಟೀಲ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಡಾ. ನಂದಾ ಪಾಟೀಲ ದತ್ತಿ ನಿಮಿತ್ತ ಇತ್ತೀಚೆಗೆ ಆಯೋಜಿಸಿದ್ದ ಡಾ. ನಂದಾ ಪಾಟೀಲ ವಚನ ಸಂಗೀತ ಪುರಸ್ಕಾರ-2024 ಪ್ರದಾನ ಸಮಾರಂಭ ಹಾಗೂ ಸಂಗೀತ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಎಲ್ಲ ವಚನಗಳನ್ನು ಸಂಗೀತಕ್ಕೆ ಅಳವಡಿಸಿ ಹಾಡುವ ಮೂಲಕ ಶರಣರ ತತ್ವ ಸಿದ್ಧಾಂತಗಳನ್ನು ಜಗತ್ತಿಗೆ ಸರಳವಾಗಿ ಅರ್ಥೈಸಿಕೊಡಲು ಸಾಧ್ಯವಿದೆ. ಈ ಕುರಿತಂತೆ ವಚನಗಳನ್ನು ಸಂಗೀತಕ್ಕೆ ಅಳವಡಿಸಿದರೆ ಶರಣ ಸಂಸ್ಕೃತಿ ಹೆಚ್ಚು ಬೆಳೆಯುತ್ತದೆ. ಬಸವಾಭಿಮಾನಿಗಳು ಹೆಚ್ಚು ಆಸ್ಥೆ ವಹಿಸಬೇಕು. ಯುವ ಪ್ರತಿಭೆಗಳಿಗೆ ನಿರಂತರ ಪ್ರೋತ್ಸಾಹ ಅಗತ್ಯವಿದೆ ಎಂದರು.
ಗಾಯಕಿ ಡಾ. ವೀಣಾ ಸವದತ್ತಿ ಅವರಿಗೆ ಡಾ. ನಂದಾ ಪಾಟೀಲ ವಚನ ಸಂಗೀತ ಪುರಸ್ಕಾರ-2024 ಪ್ರದಾನ ಮಾಡಲಾಯಿತು. ಸಂಘದ ಅಧ್ಯಕ್ಪ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಡಾ. ವೀಣಾ ಸವದತ್ತಿ ಗಾಯನ ಪ್ರಸ್ತುತಪಡಿಸಿದರು.
ಡಾ. ಅರವಿಂದ ಯಾಳಗಿ, ಸಿ.ಎಸ್. ಪಾಟೀಲ, ಎಸ್.ಜಿ. ಪಾಟೀಲ, ಬಸವರಾಜ ಬೆಂಗೇರಿ, ಮಹಾಂತೇಶ ನರೇಗಲ್ಲ, ಎಂ. ಬಿ. ಹೆಗ್ಗೇರಿ, ಡಾ. ನಂದಾ ಪಾಟೀಲರ ಶಿಷ್ಯ ಬಳಗ, ಅಭಿಮಾನಿಗಳು, ಇತರರು ಇದ್ದರು.
ಡಾ. ವೀರಣ್ಣ ಒಡ್ಡೀನ ಸ್ವಾಗತಿಸಿದರು. ಡಾ. ಧನವಂತ ಹಾಜವಗೋಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಗುರು ಹಿರೇಮಠ ವಂದಿಸಿದರು.