ಯುವ ಕಲಾವಿದರನ್ನು ಪ್ರೋತ್ಸಾಹಿಸಿ

swarna mayuri
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಜಾನಪದ ಕಲೆಯನ್ನು ಉಳಿಸಿ ಬೆಳೆಸಬೇಕಾದರೆ ಕಲೆ ಹಾಗೂ ಯುವ ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯ ಅಗತ್ಯ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೆರಿ ಹೇಳಿದರು.

ಹಳೇ ಹುಬ್ಬಳ್ಳಿಯ ಸ್ವರ್ಣ ಮಯೂರಿ ಸಾಂಸ್ಕೃತಿಕ ಸಂಸ್ಥೆ ಆಯೋಜಿಸಿದ್ದ ಜನಪದ ಪರಂಪರಾ ಉತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರದ ಸವಲತ್ತುಗಳನ್ನು ಕಲಾವಿದರು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದರು.

ಡಾ. ಪ್ರಕಾಶ ಮಲ್ಲಿಗೆವಾಡ ಅಧ್ಯಕ್ಷತೆ ವಹಿಸಿದ್ದರು. ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶಂಬಯ್ಯ ಹಿರೇಮಠ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಂ. ಬಸವರಾಜ ಭಜಂತ್ರಿ, ಲಲಿತ ಕಲಾ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಗುರು ಮಲ್ಲಾಪುರ, ವಿದುಷಿ ಚೈತ್ರಾ ವಸ್ತ್ರದ, ಪಂ. ಮನುಕುಮಾರ ಹಿರೇಮಠ ಇದ್ದರು.

ದೂರದರ್ಶನ ಕಲಾವಿದ ಶಶಿಕಲಾ ದಾನಿ ಜಲ ತರಂಗ ವಾದನ, ಪಂ. ಬಸವರಾಜ ಭಜಂತ್ರಿ ಶಹನಾಯಿ ವಾದನ ಪ್ರಸ್ತುತ ಪಡಿಸಿದರು. ನೃತ್ಯ ಕಲಾವಿದೆ ಡಾ. ಸಹನಾ ಭಟ್ ಭರತನಾಟ್ಯ ಪ್ರದರ್ಶಿಸಿದರು. ಶಂಭಯ್ಯ ಹಿರೇಮಠ ಜಾನಪದ ಗೀತೆಗಳನ್ನು ಹಾಡಿದರು. ನೃತ್ಯ ಕಲಾವಿದ ಅಮಿತಕುಮಾರ ಶಿಂಧೆ ಜಾನಪದ ನೃತ್ಯ, ಗುರು ಮಲ್ಲಾಪುರ ತೈಲವರ್ಣ ಚಿತ್ರಕಲೆ, ಪಂ. ಮನು ಕುಮಾರ ಹಿರೇಮಠ ತಬಲಾ ವಾದನ, ಪಂ. ಶಂಕರ ಕಬಾಡಿ ಪಿಟಿಲು ವಾದನ, ಲಕ್ಷ್ಮೀ ಬಾಯಿ ಹರಿಜನ ಗೀಗಿ ಪದ, ಅರ್ಜುನ ಮಾದರ ಹಲಗೆ ವಾದನ ಪ್ರದರ್ಶನ ನೀಡಿದರು. ಸ್ವರ್ಣ ಮಯೂರಿ ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷ ಚೆನ್ನಯ್ಯ ವಸ್ತ್ರದ ಸ್ವಾಗತಿಸಿದರು. ಮನೀಶ ಹಿಂದೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net