

ಮಡಿಕೇರಿ: ಸಾಹಿತ್ಯ, ಸಂಗೀತ, ಕಲೆ, ಕ್ರೀಡೆ ಹೀಗೆ ವಿವಿಧ ಚಟುವಟಿಕೆಗಳಲ್ಲಿ ಗೆದ್ದವರನ್ನು ಪ್ರೋತ್ಸಾಹಿಸಬೇಕು. ಸೋತವರು ಪ್ರಯತ್ನ ಮುಂದುವರೆಸಬೇಕು ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಸಲಹೆ ಮಾಡಿದರು.
ಸ್ವಾತಂತ್ರ್ಯ ಅಮೃತ ಮಹೋತ್ಸವ ಪ್ರಯುಕ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ರಾಜ್ಯ ಹಾಗೂ ಜಿಲ್ಲಾ ಬಾಲಭವನ ಸಂಸ್ಥೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಬಾಲಭವನ ಸಮಿತಿ ವತಿಯಿಂದ ನಗರದ ಶಿಶು ಕಲ್ಯಾಣ ಸಂಸ್ಥೆಯಲ್ಲಿ ಗುರುವಾರ ಆಯೋಜಿಸಿದ್ದ ವಿವಿಧ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
೫ನೇ ತರಗತಿವರೆಗೆ ಮಕ್ಕಳು ಶಾಲೆಯಲ್ಲಿ ಓದುವುದರ ಜತೆಗೆ, ಶಾಲೆಯಲ್ಲಿಯೇ ಹೋಂ ವರ್ಕ್ ಮಾಡಿಕೊಳ್ಳಬೇಕು. ಉಳಿದಂತೆ ಕ್ರೀಡೆ ಸೇರಿದಂತೆ ವಿವಿಧ ಚಟುವಟಿಕೆಗೆ ಹೆಚ್ಚಿನ ಒತ್ತು ನೀಡಬೇಕು. ಓದಿನ ಜತೆಗೆ ವಿವಿಧ ಸ್ಪರ್ಧಾ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುವುದರಿಂದ ಶಾಲೆಗೆ ಮತ್ತು ಪಾಲಕರಿಗೆ ಒಳ್ಳೆಯ ಹೆಸರು ತರುವಂತಾಗಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿಗಳು ಯಾವ ಯಾವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತೀರ ಎಂದು ಮಾಹಿತಿ ಪಡೆದರು. ಪ್ರತಿಕ್ರಯಿಸಿದ ವಿದ್ಯಾರ್ಥಿಗಳು ಚೆಸ್, ಕೇರಂ, ಕಬಡ್ಡಿ, ಖೋಖೋ, ಈಜು, ಕುಂಟಬಿಲ್ಲೆ ಓಟ, ಬ್ಯಾಡ್ಮಿಂಟನ್ ಹಾಗೆಯೇ ಹಾಡುಗಾರಿಕೆ ಹೀಗೆ ವಿವಿಧ ಆಟ ಹಾಗೂ ಸಂಗೀತ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುತ್ತೇವೆ ಎಂದು ಪ್ರತಿಕ್ರಿಯಿಸಿದರು.
ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆಯ ಅಧ್ಯಕ್ಷ ರವೀಂದ್ರ ರೈ ಮಾತನಾಡಿ, ಮಕ್ಕಳು ಕ್ರೀಡೆ ಸೇರಿದಂತೆ ವಿವಿಧ ಸ್ಪರ್ಧಾ ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದ ಹೆಚ್ಚಿನ ಆತ್ಮವಿಶ್ವಾಸ ಉಂಟಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.
ಸಂಗೀತ ಶಿಕ್ಷಕ ಭಾರತಿ ರಮೇಶ್ ಮಾತನಾಡಿ, ಪ್ರತಿಯೊಬ್ಬರಲ್ಲಿ ಪ್ರತಿಭೆ ಇದ್ದು, ಚಿಕ್ಕಂದಿನಿಂದಲೇ ಮಕ್ಕಳಿಗೆ ಸಲಹೆ, ಮಾರ್ಗದರ್ಶನ ಮಾಡುವಂತಾಗಬೇಕು. ಸ್ಪೂರ್ತಿ ಬೆಳೆಯುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಎನ್.ಮಂಜುನಾಥ್, ನಗರಸಭೆಯ ಎಇಇ ರಾಜೇಂದ್ರ ಕುಮಾರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪಾಷಾ, ನೃತ್ಯ ಶಿಕ್ಷಕ ಭರತ್, ಕಾರ್ಯಕ್ರಮ ಅಧಿಕಾರಿ ಪೂಣಚ್ಚ, ಬಾಲ ಭವನ ಸೊಸೈಟಿಯ ಪೂಜಾ, ಇತರರು ಇದ್ದರು.