ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರೋತ್ಸಾಹಿಸಿ

Published on

ಬಳ್ಳಾರಿ : ಜಿಲ್ಲೆಯಲ್ಲಿನ ಧಾರ್ಮಿಕ ದೇವಾಲಯ ಮತ್ತು ಪಾರಂಪರಿಕ ತಾಣಗಳನ್ನು ಕಾಪಾಡುವ ಮೂಲಕ ಪ್ರವಾಸೋದ್ಯಮ ಅಭಿವೃದ್ಧಿ ತಾಣಕ್ಕೆ ಪ್ರೋತ್ಸಾಹಿಸೋಣ ಎಂದು ಎಡಿಸಿ ಮಹಮ್ಮದ್ ಎನ್.ಜುಬೇರ್ ಹೇಳಿದರು.

ನಗರದ ಐತಿಹಾಸಿಕ ಕೋಟೆ ಪ್ರವೇಶ ಅವರಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಹಾಗೂ ಹೋಟೆಲ್ ಮಾಲೀಕರ ಸಂಘ, ರಾಬರ್ಟ್ ಬ್ರೂಸ್‌ಫೂಟ್ ಸಂಗನಕಲ್ಲು ಪುರಾತತ್ವ ವಸ್ತು ಸಂಗ್ರಹಾಲಯ ಮತ್ತು ಸಂಡೂರು ಡೈರೀಸ್ ಸಹಯೋಗದೊಂದಿಗೆ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಬಳ್ಳಾರಿ ಕೋಟೆಯ ಪಾರಂಪರಿಕಾ ನಡಿಗೆಗೆ ಪೋಟೋ ಪಾಯಿಂಟ್ ಉದ್ಘಾಟಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಸ್ಥಳಗಳಾದ ಬಳ್ಳಾರಿಯ ಏಕಾಶಿಲ ಬೆಟ್ಟ(ಕೋಟೆ), ಸಂಗನಕಲ್ಲು ಗುಡ್ಡ, ರಾಬರ್ಟ್ ಬ್ರೂಸ್‌ಫೂಟ್ ಸಂಗನಕಲ್ಲು ಪ್ರಾಕ್ತನ ವಸ್ತು ಸಂಗ್ರಹಾಲಯ, ಅವಂಬಾವಿ, ಮಿಂಚೇರಿ ಬೆಟ್ಟ, ದರೋಜಿ ಕರಡಿಧಾಮ, ಸಂಡೂರಿನ ಕುಮಾರಸ್ವಾಮಿ ದೇವಾಲಯ ಮತ್ತು ನಾರಿಹಳ್ಳ ಜಲಾಶಯ, ಕುರುಗೋಡು ಶ್ರೀದೊಡ್ಡಬಸವೇಶ್ವರ ದೇವಸ್ಥಾನ, ಭತ್ತದ ನಾಡು ಎಂದೇ ಖ್ಯಾತಿ ಪಡೆದ ಸಿರಗುಪ್ಪ ಸೇರಿದಂತೆ ಹಲವು ಪ್ರೇಕ್ಷಣೀಯ ಸ್ಥಳಗಳನ್ನು ನೋಡಬಹುದಾಗಿದೆ ಎಂದು ತಿಳಿಸಿದರು.

ನಗರದ ರಾಬರ್ಟ್ ಬ್ರೂಸ್ ಫೂಟ್ ಸಂಗನಕಲ್ಲು ಪ್ರಾಕ್ತನ ವಸ್ತು ಸಂಗ್ರಹಾಲಯವು ದಕ್ಷಿಣ ಭಾರತದಲ್ಲಿಯೇ ವಿಶೇಷ ಪ್ರಾಚೀನ ಕಾಲದಲ್ಲಿ ಮಾನವನ ಅವಶೇಷಗಳನ್ನು ಕಲೆ ಹಾಕಿದ ಸಂಗ್ರಹಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಲ್ಲಿ ಅಂತರಾಷ್ಟ್ರೀಯ ಸಂಶೋಧನಾ ವಿದ್ಯಾರ್ಥಿಗಳಿಗೆ ಸಂಶೋಧನೆಗೆ ಉಪಯುಕ್ತವಾಗಿದೆ ಎಂದರು.

ಜಿಲ್ಲೆ ಎಂದರೆ ಕೇವಲ ಗಣಿ ಪ್ರದೇಶ ಮಾತ್ರವಲ್ಲ, ಬದಲಾಗಿ ಭಾರತೀಯ ಪುರಾತತ್ವ ಪಾರಂಪರಿಕಾ ಪಟ್ಟಿಗೆ ಸೇರಿದ ಮಹತ್ವ ಪೂರ್ಣ ಪ್ರವಾಸೋದ್ಯಮ ಸ್ಥಳಗಳೂ ಸಹ ಒಳಗೊಂಡಿದೆ. ಸೆಪ್ಟೆಂಬರ್ ನಲ್ಲಿ ತಪ್ಪದೇ ಸಂಡೂರು ಭಾಗಕ್ಕೆ ಭೇಟಿ ನೀಡಿ ಪ್ರಕೃತಿಯ ಸೊಬಗು ಸವಿಯಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net