

ಮೈಸೂರು: ವಿಶೇಷಚೇತನ ಮಕ್ಕಳಲ್ಲಿ ವಿಶೇಷ ಶಕ್ತಿ ಇದ್ದು, ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಅಗಬೇಕು ಎಂದು ಶಾಸಕ ಕೆ.ಹರೀಶ್‌ಗೌಡ ಹೇಳಿದರು.
ವಿಜಯನಗರ 2ನೇ ಹಂತದಲ್ಲಿರುವ ಸಮರ್ಥನಂ ಅಂಗವಿಕಲ ಸಂಸ್ಥೆಯ ಬುದ್ಧಿ ವಿಶೇಷಚೇತನ ಮಕ್ಕಳ ಶಾಲೆಯ ಪಿಜಿಯೋಥೆರಪಿ ಕೇಂದ್ರ ಹಾಗೂ ವೃತ್ತಿಪರ ತರಬೇತಿ ಘಟಕಕ್ಕೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.
ಮಕ್ಕಳು ದೇಶದ ಆಸ್ತಿಯಾಗಿದ್ದಾರೆ. ಆದರೆ ನಾನಾ ಕಾರಣಗಳಿಂದ ವಿಕಲಾಂಗರಾಗಿ ಸಮಾಜದ ನಿರ್ಲಕ್ಷೃಕ್ಕೆ ಒಳಗಾಗಿ ಹೆತ್ತವರಿಗೆ ನೋವುಂಟಾಗುತ್ತದೆ. ಇಂತಹ ಮಕ್ಕಳಲ್ಲಿಯೂ ವಿಶೇಷ ಶಕ್ತಿ ಇದ್ದು, ಅದನ್ನು ಗುರುತಿಸಿ ಪ್ರೋತ್ಸಾಹಿಸಿದರೆ ಅವರು ಕೂಡಾ ಸಾಧನೆ ಮಾಡಬಹುದು ಎಂದರು.
ವಿಶೇಷಚೇತನ ಮಕ್ಕಳು ತಮ್ಮ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಬೆಳವಣಿಗೆಯಲ್ಲಿ ವಿಶಿಷ್ಟವಾದ ಸವಾಲುಗಳನ್ನು ಎದುರಿಸುತ್ತಾರೆ. ವಿಶೇಷಚೇತನ ಮಕ್ಕಳ ಬೆಳವಣಿಗೆಯಲ್ಲಿ ಸ್ಪೀಚ್ ಥೆರಪಿ, ಔದ್ಯೋಗಿಕ ಚಿಕಿತ್ಸೆ ಮತ್ತು ಮನೋವಿಜ್ಞಾನದ ಜತೆಗೆ ಭೌತಚಿಕಿತ್ಸೆಯು ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿ ಶಂಕರಗೌಡ ಪಟೇಲ ಮಾತನಾಡಿ, ವೃತ್ತಿಪರ ತರಬೇತಿಯು ಉದ್ಯೋಗ ಮತ್ತು ಸ್ವತಂತ್ರ ಜೀವನಕ್ಕಾಗಿ ಅವರನ್ನು ಸಿದ್ಧಪಡಿಸಲು ವಿಶೇಷ ಕೌಶಲ ಮತ್ತು ಪ್ರಾಯೋಗಿಕ ಅನುಭವ ಒದಗಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ಉದ್ಯೋಗಗಳನ್ನು ಭದ್ರಪಡಿಸಿಕೊಳ್ಳಲು, ಸ್ವಾವಲಂಬಿಗಳಾಗಲು ಮತ್ತು ಸಮಾಜಕ್ಕೆ ಕೊಡುಗೆ ನೀಡಲು ಅಗತ್ಯವಾದ ಜ್ಞಾನ ಮತ್ತು ಸಾಮರ್ಥ್ಯಗಳೊಂದಿಗೆ ಇದು ಅವರಿಗೆ ಸಜ್ಜುಗೊಳಿಸುತ್ತದೆ ಎಂದು ತಿಳಿಸಿದರು.
ಸಮರ್ಥನಂ ಅಂಗವಿಕಲರ ಸಂಸ್ಥೆ ಟ್ರಸ್ಟಿಗಳಾದ ಬೂಸೇಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಫಿಸಿಯೋಥೆರಪಿ ಕೇಂದ್ರದ ವೃತ್ತಿಪರ ತರಬೇತಿಗಳಲ್ಲಿ ಮೇಣದಬತ್ತಿ ತಯಾರಿಕೆ ಹಾಗೂ ಆರ್ಟ್ ಆ್ಯಂಡ್ ಕ್ಲಾವ್, ಟೇಲರಿಂಗ್ ಮತ್ತು ಬೇರೆ ಬೇರೆ ವಿಭಾಗಗಳ ಕುರಿತು ವಿಶ್ವತ ಮಾಹಿತಿಯನ್ನು ನೀಡಿದರು.
18 ರಿಂದ 30 ವರ್ಷದ ವಯೋಮಿತಿಯ ಮೈಲ್ಸ್ ಬುದ್ಧಿಮಾಂದ್ಯ ಮಕ್ಕಳಿಗೆ ಈ ತರಬೇತಿ ನೀಡಲಾಗುವುದು. ಅವರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ತಿಬ್ಬಯ್ಯ, ರಾಜ್ಯ ಅಂಗವಿಕಲರ ಫೆಡರೇಶ್ ಅಧ್ಯಕ್ಷ ಶ್ರೀಧರ್ ದೀಕ್ಷಿತ್ ಮಾತನಾಡಿದರು. ಶಾಲೆ ಪ್ರಾಂಶುಪಾಲೆ ಡಾ.ಕೆ.ಗೀತಾ, ಸಂಘಟನೆಯ ಪ್ರಸನ್ನಕುಮಾರ, ಲಾವಣ್ಯ, ಶ್ರೀನಿವಾಸ ರೆಡ್ಡಿ, ಎಂ. ಶಿವರಾಜು, ಚೈತ್ರಾ ಕುಮಾರಿ, ಮಹಾಂತೇಶ್, ಭ್ರಮರಂಬ ಪದ್ಮ, ಬೃಂದಾಬಾಯಿ, ವಿದ್ಯಾವತಿ, ನಿಂಗಮಣಿ, ಪಾಂಡು, ಮಹದೇವು ಇತರರು ಇದ್ದರು.