

ನರಗುಂದ: ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಮಂಗಳವಾರ ನರಗುಂದ ತಾಲೂಕು ಮಟ್ಟದ ದಸಾರಾ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು.
ತಾಪಂ ಇಒ ಮಂಜುಳಾ ಹಕಾರಿ ಮಾತನಾಡಿ, ಉತ್ತಮ ಕ್ರೀಡಾಪಟುಗಳಿಗೆ ನಿರಂತರ ಸಾಧನೆಯೇ ಮುಖ್ಯ ಗುರಿಯಾಗಿರಬೇಕು. ಕ್ರೀಡೆಯಲ್ಲಿ ಸಾಧನೆ ಮಾಡುವ ವಿದ್ಯಾರ್ಥಿಗಳನ್ನು ಪ್ರತಿಯೊಬ್ಬರೂ ಪ್ರೋತ್ಸಾಹಿಸಿ, ಗೌರವಿಸಬೇಕು ಎಂದರು.
ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಶರಣು ಗೋಗೇರಿ ಮಾತನಾಡಿ, ‘ದೇಶದ ಕ್ರೀಡಾ ಪ್ರತಿಭೆಗಳು ಹೊರಹೊಮ್ಮಬೇಕಾದರೆ ಯುವಕರಿಗೆ ವಿಶೇಷ ತರಬೇತಿ ನೀಡುವುದು ಅತ್ಯಗತ್ಯ’ ಎಂದರು.
ನಿವೃತ್ತ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಡಾ.ಎಂ.ಎಂ. ಕಲಹಾಳ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕ್ರೀಡಾಕೂಟದಲ್ಲಿ ಪುರುಷರ ವಿಭಾಗದಲ್ಲಿ 26 ಕಬ್ಬಡ್ಡಿ ತಂಡಗಳು, 25 ವಾಲಿಬಾಲ್, 14 ಖೋಖೋ, 12 ಥ್ರೋ ಬಾಲ್. ಮಹಿಳಾ ವಿಭಾಗದಲ್ಲಿ ಕಬ್ಬಡ್ಡಿ 6, ವಾಲಿಬಾಲ್ 6, ಥ್ರೋ ಬಾಲ್ 4, ಖೋಖೋ 4 ತಂಡಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು.
ಎನ್.ಆರ್.ನಿಡಗುಂದಿ, ಐ.ಎ.ಕುಂಭಾರ, ಎಸ್.ಪಿ.ದೊಡಮನಿ, ಎಫ್.ಬಿ. ಧರೆಯಣ್ಣವರ, ವಿ.ಎಸ್. ಚವಡಿ, ಪಿ.ಎಸ್. ಕಬಾಡರ, ವಿ.ಎಸ್. ಚಿಕ್ಕಮಠ ಇತರರಿದ್ದರು. ಶಿಕ್ಷಕ ಆರ್.ಎಂ. ಪಾಟೀಲ ನಿರೂಪಿಸಿದರು.