

ಕಡೂರು: ಅಧುನಿಕ ಭರಾಟೆಯ ನಡುವೆ ಗ್ರಾಮೀಣ ಕ್ರೀಡೆಯನ್ನು ಉತ್ತೇಜಿಸಲು ಎತ್ತಿನಗಾಡಿ ಸ್ಪರ್ಧೆಗಳನ್ನು ದೇಸಿಯ ಕ್ರೀಡೆಯಾಗಿ ಪ್ರತಿನಿಧಿಸುತ್ತಿರುವುದು ಶ್ಲಾಘನೀಯ ಎಂದು ತಾಪಂ ಮಾಜಿ ಅಧ್ಯಕ್ಷ ಸಿಗೇಹಡ್ಲು ಹರೀಶ್ ಹೇಳಿದರು.
ತಾಲೂಕಿನ ಬಂಟಗನಹಳ್ಳಿ ಗ್ರಾಮದಲ್ಲಿ ಶ್ರೀವಿನಾಯಕ ಗೆಳೆಯರ ಬಳಗದಿಂದ ಪ್ರಥಮ ಬಾರಿಗೆ ಆಯೋಜಿಸಿದ್ದ ರಾಜ್ಯಮಟ್ಟದ ಜೋಡಿಎತ್ತಿನ ಗಾಡಿ ಸ್ಪರ್ಧೆಯಲ್ಲಿ ಬೆಳ್ಳಿಕಪ್ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಇತ್ತೀಚೆಗೆ ಗ್ರಾಮೀಣ ಕ್ರೀಡೆಗಳನ್ನು ಕಣ್ಮರೆಯಾಗದಂತೆ ಇಂದಿನ ಯುವಪೀಳಿಗೆ ಗ್ರಾಮಾಂತರ ಭಾಗದಲ್ಲಿ ಹೆಚ್ಚು ಪ್ರೋತ್ಸಾಹಿಸುತ್ತಿದೆ. ಪಟ್ಟಣ ಪ್ರದೇಶಗಳು ಬೆಳೆಯುತ್ತಿದ್ದಂತೆ ಗ್ರಾಮೀಣ ಶೈಲಿಯ ಕ್ರೀಡೆಗಳು ಕಣ್ಮರೆಗೊಳ್ಳುತ್ತಿರುವ ಈ ದಿನಗಳಲ್ಲಿ ರಾಸುಗಳಿಗೂ ಹಾಗೂ ರೈತರನ್ನು ಹುರಿದುಂಬಿಸಲು ಗ್ರಾಮದ ಯುವಕರ ತಂಡ ಸ್ಪರ್ಧಾ ಮನೋಭಾವನೆ ಮೂಡಿಸಿದ್ದಾರೆ. ಎರಡು ದಿನ ಸ್ಪರ್ಧೆ ಆಯೋಜಿಸಲಾಗಿತ್ತು ಎಂದರು.
ಜೋಡಿ ಎತ್ತಿನ ಗಾಡಿ ಸ್ಪರ್ಧೆಯಲ್ಲಿ ಮಂಡ್ಯ ಜಿಲ್ಲೆಗೆ ಪ್ರಥಮ ಮತ್ತು ದ್ವಿತೀಯ ಬಹುಮಾನ ಪಡೆದರೆ, ಅಜ್ಜಂಪುರದ ಗಡಿಹಳ್ಳಿ ಗ್ರಾಮದ ತಂಡಕ್ಕೆ ತೃತೀಯ ಬಹುಮಾನ ನೀಡಲಾಯಿತು. ಮುಖಂಡರಾದ ಮಚ್ಚೇರಿ ಸತೀಶ್, ಚಿನ್ನರಾಜು, ಯುವಕರ ಬಳಗದ ಪದಾಧಿಕಾರಿಗಳಾದ ಸಂತೋಷ್, ಚಂದನ್, ಪ್ರಸನ್ನ, ಚೇತನ್ ಮತ್ತಿತರಿದ್ದರು.