ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ಸಿಗಲಿ

ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ಸಿಗಲಿ
Published on

ಗೋಣಿಕೊಪ್ಪ: ಕ್ರೀಡೆಯಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ಕಳೆದ ಮೂರು ವರ್ಷಗಳಿಂದ ಗ್ರಾಮೀಣ ಮಟ್ಟದಲ್ಲಿ ಪ್ರೋ ಕಬಡ್ಡಿ ಮಾದರಿಯ ಗ್ರಾಮೀಣ ಮ್ಯಾಟ್ ಕಬಡ್ಡಿ ಕ್ರೀಡೆಯು ಯಶಸ್ವಿಯಾಗಿ ನಡೆಯುತ್ತಿದೆ ಎಂದು ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು.

46ನೇ ವರ್ಷದ ಶ್ರೀ ಕಾವೇರಿ ದಸರಾ ಸಮಿತಿ ಜನೋತ್ಸವದ ಅಂಗವಾಗಿ ಗೋಣಿಕೊಪ್ಪ ಶಿವಾಜಿ ಸೇನೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಜಿಲ್ಲಾ ಪಂಚಾಯಿತಿ, ಜಿಲ್ಲಾ ಯುವ ಒಕ್ಕೂಟ, ತಾಲೂಕು ಒಕ್ಕೂಟ ಪೊನ್ನಂಪೇಟೆ ಸಹಯೋಗದಲ್ಲಿ ಸ್ಥಳೀಯ ಪ್ರಾಥಮಿಕ ಶಾಲೆ ಮೈದಾನದಲ್ಲಿ ಆಯೋಜಿಸಿದ್ದ ಪ್ರೋ ಕಬಡ್ಡಿ ಮಾದರಿಯ ಗ್ರಾಮೀಣ ಮ್ಯಾಟ್ ಕಬಡ್ಡಿ ಕ್ರೀಡೆಯನ್ನು ಉದ್ಘಾಟಿಸಿ ಮಾತನಾಡಿದರು.

ಕ್ರೀಡೆಯಿಂದ ಕ್ರೀಡಾಪಟುಗಳ ಆರೋಗ್ಯ ಮಟ್ಟ ಸುಧಾರಿಸಲಿದೆ. ಗ್ರಾಮೀಣ ಕ್ರೀಡೆಗೆ ಸಮಿತಿಯು ಒತ್ತು ನೀಡುತ್ತಿರುವುದು ಶ್ಲಾಘನೀಯ. ವಾರ್ಷಿಕವಾಗಿ ಗುಣಮಟ್ಟದಿಂದ ಕ್ರೀಡೆಯನ್ನು ಆಯೋಜನೆ ಮಾಡಲಾಗುತ್ತಿದೆ. ವರ್ಷಂಪ್ರತಿ ಇಂತಹ ಪಂದ್ಯಾವಳಿಗಳು ಹೆಚ್ಚಾಗಿ ನಡೆಯಬೇಕು. ಕೊಡಗಿನಲ್ಲಿ ಕ್ರೀಡೆಗೆ ಉತ್ತಮ ವೇದಿಕೆಗಳು ಲಭಿಸುತ್ತಿವೆ. ಕ್ರೀಡಾಪಟುಗಳು ಇವುಗಳ ಪ್ರಯೋಜನ ಪಡೆಯುವ ಮೂಲಕ ತಮ್ಮ ಪ್ರತಿಭೆಯನ್ನು ಹೊರ ಸೂಸಬೇಕು ಎಂದು ಕ್ರೀಡಾಪಟುಗಳಿಗೆ ಸಲಹೆ ನೀಡಿದರು.

ವರ್ಷದಿಂದ ವರ್ಷಕ್ಕೆ ಕ್ರೀಡೆಯು ಉತ್ತಮವಾಗಿ ಮೂಡಿ ಬರಲಿ. ಸಂಘಟನೆಯು ಬಲಿಷ್ಟವಾಗಲಿ, ತಂಡಗಳು ಹೆಚ್ಚು ಹೆಚ್ಚಾಗಿ ಭಾಗವಹಿಸುವಂತಾಗಲಿ. ಕೊಡಗಿನಲ್ಲಿ ಎಲ್ಲಾ ಕ್ರೀಡೆಗೆ ಉತ್ತೇಜನ ನೀಡುವ ಸಂಘ ಸಂಸ್ಥೆಗಳಿವೆ. ಕ್ರೀಡೆ ಯಶಸ್ವಿಗೆ ಅಗತ್ಯ ಸಹಕಾರ ನೀಡುತ್ತೇನೆ ಎಂದು ಶಾಸಕ ಪೊನ್ನಣ್ಣ ಭರವಸೆ ನೀಡಿದರು.

ಕೊಡಗಿನಿಂದ ಸಾಕಷ್ಟು ಕ್ರೀಡಾಪಟುಗಳು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ್ದಾರೆ. ಮುಂದೆಯೂ ಕೊಡಗಿನ ಕೀರ್ತಿ ಕ್ರೀಡೆಯ ಮೂಲಕ ಹೆಚ್ಚಾಗಬೇಕು. ಕ್ರೀಡೆಯ ಮೂಲಕ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಹೊರಹೊಮ್ಮುವಂತಾಗಲಿ ಎಂದು ಆಶಿಸಿದರು.

ಶಿವಾಜಿ ಯುವ ಸೇನೆ ಅಧ್ಯಕ್ಷ ಎಲ್.ಎನ್.ಅಣ್ಣಪ್ಪ ಅಧ್ಯಕ್ಷತೆ ವಹಿಸಿದ್ದರು. ಶ್ರೀಕಾವೇರಿ ದಸರಾ ಸಮಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಗೌರವ ಅಧ್ಯಕ್ಷ ಕೊಲ್ಲಿರ ಗಯಾ ಕಾವೇರಪ್ಪ, ಯುವ ಒಕ್ಕೂಟದ ಮಾಜಿ ಅಧ್ಯಕ್ಷ ಕಂದಾದೇವಯ್ಯ, ಉದ್ಯಮಿ ಚಂದನ್ ಕಾಮತ್, ಗೋಣಿಕೊಪ್ಪ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ್ ಸುರೇಶ್ ರೈ(ಮಂಜು), ಉಮಾಮಹೇಶ್ವರಿ ದೇವಾಲಯ ಟ್ರಸ್ಟಿ ಜಪ್ಪೆಕೋಡಿ ರಾಜಣ್ಣ, ಉದ್ಯಮಿಗಳಾದ ಸಜನ್ ಬೋಪಣ್ಣ, ಚುಮ್ಮಿರೈ, ವಕೀಲರಾದ ಪ್ರದೀಪ್ ಕುಮಾರ್, ದಸರಾ ಸಮಿತಿ ಸಹ ಖಜಾಂಚಿ ಶೋಬಿತ್, ನಾಗಲಕ್ಷ್ಮೀ ಜ್ಯುವೆಲ್ಲರಿ ಮಾಲೀಕ ಎಂ.ಎನ್.ಯೋಗೇಶ್ ಇತರರು ಇದ್ದರು. ಈ ವೇಳೆ ಸಮಿತಿ ಪದಾಧಿಕಾರಿಗಳಾದ ಖಜಾಂಚಿ ಜಿ.ಪಿ.ಸ್ವಾಮಿ, ರಾಜೇಶ್‌ರೈ ಇತರರು ಇದ್ದರು. ಪಂದ್ಯಾವಳಿಯಲ್ಲಿ ತೀರ್ಪುಗಾರರಾಗಿ ಮದನ್, ಕಾರ್ತಿಕ್, ಜಾನ್ಸನ್, ರಾಘವೇಂದ್ರ ಹಾಗೂ ವಿದ್ವಾನ್ ಕಾರ್ಯ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net